ಕೋವಿಡ್‌ ಮಾರ್ಗಸೂಚಿ ಡಿ.31ರವರೆಗೆ ವಿಸ್ತರಣೆ

By Kannadaprabha NewsFirst Published Nov 29, 2020, 8:58 AM IST
Highlights

ಹಿಂದಿನ ಮಾರ್ಗಸೂಚಿಗಳಲ್ಲಿ ಬದಲಾವಣೆ ಇಲ್ಲ| ಕೇಂದ್ರದ ರೀತಿಯಲ್ಲೇ ರಾಜ್ಯದ ನಿರ್ಧಾರ| ಮಾಸ್ಕ್‌ ಹಾಕದಿದ್ದರೆ 100 ರು.ನಿಂದ 250 ರು.ವರೆಗೆ ದಂಡ| ಸಾಮಾಜಿಕ ಅಂತರ ಕಡ್ಡಾಯ| ಚಿತ್ರಮಂದಿರ, ರಂಗಮಂದಿರಗಳಲ್ಲಿ ಶೇ.50 ಸೀಟು ಮಾತ್ರ ಭರ್ತಿ| ಸಭೆ, ಸಮಾರಂಭಗಳಿಗೆ 200 ಜನರ ಮಿತಿ| 

ಬೆಂಗಳೂರು(ನ.29): ಕೊರೋನಾ ನಿಯಂತ್ರಣ ಸಂಬಂಧ ಕೇಂದ್ರ ಸರ್ಕಾರ ಡಿ.1ರಿಂದ ಹೊಸ ಮಾರ್ಗಸೂಚಿ ಜಾರಿಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಹಾಲಿ ಇರುವ ಮಾರ್ಗಸೂಚಿಗಳನ್ನೇ ಡಿ.31ರವರೆಗೆ ಮುಂದುವರೆಸಿ ಹಾಗೂ ಕಟ್ಟುನಿಟ್ಟಿನ ಪಾಲನೆಗೆ ಸೂಚಿಸಿ ಆದೇಶ ಹೊರಡಿಸಿದೆ.

ಆದೇಶದಲ್ಲಿ ಯಾವುದೇ ಹೊಸ ಬದಲಾವಣೆಗಳನ್ನು ಮಾಡಿಲ್ಲ. ಸಾರ್ವಜನಿಕ ಸ್ಥಳ, ಸಭೆ, ಸಮಾರಂಭಗಳು, ಪ್ರಯಾಣ, ಕಾಲೇಜುಗಳು, ಹಾಸ್ಟೆಲ್‌ಗಳು ಸೇರಿದಂತೆ ಎಲ್ಲೆಡೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸಬೇಕೆಂಬ ಕಡ್ಡಾಯ ನಿಯಮಗಳನ್ನು ವಿಸ್ತರಿಸಲಾಗಿದೆ. ಮಾಸ್ಕ್‌ ಧರಿಸದವರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 250 ರು. ಮತ್ತು ಇತರೆಡೆ 100 ರು. ದಂಡ ಮುಂದುವರೆಸಲು ಸೂಚಿಸಲಾಗಿದೆ. ಇನ್ನು ಕಂಟೈನ್ಮೆಂಟ್‌ ವಲಯಗಳಲ್ಲಿ ಜಿಲ್ಲಾಡಳಿತಗಳು, ಸ್ಥಳೀಯ ಸಂಸ್ಥೆಗಳಿಗೆ ಲಾಕ್‌ಡೌನ್‌ ಮಾಡುವ ಅನುಮತಿ ಮುಂದುವರೆಸಬೇಕು ಸೂಚಿಸಲಾಗಿದೆ.

ಡಿ.31ರ ವರೆಗ ಅಂತಾರಾಷ್ಟ್ರೀಯ ವಿಮಾನ ಹಾರಟಕ್ಕೆ ನಿಷೇಧ ಹೇರಿದ ಕೇಂದ್ರ ಸರ್ಕಾರ!

ಚಿತ್ರಮಂದಿರ, ರಂಗಮಂದಿರಗಳಲ್ಲಿ ಒಟ್ಟು ಸೀಟು ಸಾಮರ್ಥ್ಯದ ಶೇ.50ರಷ್ಟುಸೀಟುಗಳಿಗೆ ಪ್ರವೇಶಕ್ಕೆ ಅವಕಾಶ, ವ್ಯಾಪಾರದಿಂದ ವ್ಯಾಪಾರ(ಬಿ2ಬಿ) ಉದ್ದೇಶಕ್ಕಾಗಿ ಮಾತ್ರ ವಸ್ತು ಪ್ರದರ್ಶನ, ಮಾಲ್‌ಗಳಿಗೆ ಅನುಮತಿ, 200 ಜನರ ಪರಿಮಿತಿಗೆ ಒಳಪಟ್ಟು ಸಭಾಂಗಣದ ಒಟ್ಟು ಸಾಮರ್ಥ್ಯದ ಗರಿಷ್ಠ ಶೇ.50ರಷ್ಟಕ್ಕೆ ಸಾಮಾಜಿಕ, ಧಾರ್ಮಿಕ, ಕ್ರೀಡಾ, ಮನೋರಂಜನೆ, ಶೈಕ್ಷಣಿಕ ಸಾಂಸ್ಕೃತಿಕ ಸಭೆ-ಸಮಾರಂಭಗಳಿಗೆ ಅನುಮತಿ ನೀಡಲು ಸೂಚಿಸಲಾಗಿದೆ.
 

click me!