ವಾಯುಭಾರ ಕುಸಿತ: ರಾಜ್ಯದಲ್ಲಿ ಮತ್ತೆ 2 ದಿನ ಮಳೆ ಸಾಧ್ಯತೆ

By Kannadaprabha NewsFirst Published Nov 29, 2020, 8:23 AM IST
Highlights

ನ. 30ರ ವೇಳೆಗೆ ಮೇಲ್ಮೈ ಸುಳಿಗಾಳಿ ತೀವ್ರವಾಗುವ ಲಕ್ಷಣ| ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ನ.30ರವರೆಗೆ ಗುಡುಗು ಸಹಿತ ಮಳೆ| ಡಿ.1 ಮತ್ತು 2ರಂದು ಸಾಮಾನ್ಯ ಮಳೆಯ ಸಂಭವ| ಹವಾಮಾನ ಇಲಾಖೆ ಮುನ್ಸೂಚನೆ| 

ಬೆಂಗಳೂರು(ನ.29): ‘ನಿವಾರ್‌’ ಚಂಡಮಾರುತದ ಆರ್ಭಟ ಅಂತ್ಯವಾದ ಬೆನ್ನಲ್ಲೇ ಬಂಗಾಳ ಕೊಲ್ಲಿಯ ಆಗ್ನೇಯ ಭಾಗದ ಅಂಡಮಾನ್‌ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿದಿದೆ. ಹೀಗಾಗಿ ಡಿ.2ರವರೆಗೆ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಂಭವವಿದೆ. 

‘ವಾಯುಭಾರ ಕುಸಿತದಿಂದಾಗಿ ಗಾಳಿಯ ಒತ್ತಡ ತೀರಾ ಕಡಿಮೆ ಇದೆ. ನ. 30ರ ವೇಳೆಗೆ ಮೇಲ್ಮೈ ಸುಳಿಗಾಳಿ ತೀವ್ರವಾಗುವ ಲಕ್ಷಣವಿದೆ. ಅಲ್ಲಿಂದ ಭಾರಿ ಪ್ರಮಾಣದ ಸುಳಿಗಾಳಿ ಪಶ್ಚಿಮ ದಿಕ್ಕಿಗೆ ಚಲಿಸಿ (ನ.30ಕ್ಕೆ) ತಮಿಳುನಾಡಿನ ಕರಾವಳಿ ಭಾಗ ತಲುಪಲಿದೆ. ಜೊತೆಗೆ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ನ.30ರವರೆಗೆ ಗುಡುಗು ಸಹಿತ ಮಳೆ ಬೀಳಲಿದೆ. ಡಿ.1 ಮತ್ತು 2ರಂದು ಸಾಮಾನ್ಯ ಮಳೆಯ ಸಂಭವವಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಿಲಿಕಾನ್‌ ಸಿಟಿಯಲ್ಲಿ ತುಂತುರು ಮಳೆ: ಜನರ ಪರದಾಟ

ಎಲ್ಲಿ ಎಷ್ಟು ಮಳೆ?:

ನ. 28ರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ ಕಳೆದ 24 ಗಂಟೆಯಲ್ಲಿ ರಾಜ್ಯದ ಬಳ್ಳಾರಿ ಜಿಲ್ಲೆಯ ಕುಡಿತಿನಿಯಲ್ಲಿ ಹೆಚ್ಚು 3 ಸೆಂ.ಮೀ. ಮಳೆಯಾಗಿದೆ. ಯಾದಗಿರಿಯ ಸೈದಾಪುರ, ರಾಯಚೂರು, ಕೋಲಾರದ ರಾಯಲ್‌ಪಡು, ತುಮಕೂರಿನ ಪಾವಗಡದಲ್ಲಿ ತಲಾ 1 ಸೆಂ.ಮೀ. ಮಳೆ ಬಿದ್ದಿದೆ. ರಾಜ್ಯದ ಗರಿಷ್ಠ ತಾಪಮಾನ ಉತ್ತರ ಕನ್ನಡದ ಶಿರಾಲಿಯಲ್ಲಿ 34.9 ಡಿಗ್ರಿ ಸೆಲ್ಸಿಯಸ್‌ ಮತ್ತು ದಾವಣಗೆರೆಯಲ್ಲಿ ಕನಿಷ್ಠ 12.3 ಡಿಗ್ರಿ ದಾಖಲಾಗಿದೆ.
 

click me!