
ಮೈಸೂರು (ಜು.25): ಕರ್ನಾಟಕವನ್ನು ಪ್ರವಾಸೋದ್ಯಮ ಸ್ನೇಹಿ ರಾಜ್ಯವಾಗಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಪ್ರವಾಸೋದ್ಯಮ ಖಾತೆ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ ಅವರು, ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದರು. ಮೈಸೂರಿನ ಚಾಮುಂಡಿಬೆಟ್ಟಅಭಿವೃದ್ಧಿ ಪ್ರಾಧಿಕಾರ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಬೆಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಸುಮಾರು 2.5 ಎಕರೆ ಜಮೀನು ಇದೆ.
ಅದರಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು ಎಂಬುದನ್ನು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಈ ಎಲ್ಲಾ ವಿಷಯವನ್ನೂ ಮುಖ್ಯಮಂತ್ರಿ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಚಾಮುಂಡಿಬೆಟ್ಟದ ವೆಲ್ಲಿಂಗ್‌ಟನ್ ಮ್ಯೂಸಿಯಂ ಅಭಿವೃದ್ಧಿಪಡಿಸಲಾಗಿದೆ. ಆದರೆ, ಅದನ್ನು ಉದ್ಘಾಟಿಸಿಲ್ಲ ಎಂದರು. ಮೈಸೂರು ಅರಮನೆ ಖಜಾನೆಯಲ್ಲಿನ ಪುರಾತನ ವಸ್ತುಗಳನ್ನು ‘ಅಠಾರ ಕಚೇರಿ’ ಎಂದೇ ಹೆಸರಾಗಿದ್ದ ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರದರ್ಶನಕ್ಕೆ ಇರಿಸಲು ಚಿಂತಿಸಲಾಗಿದೆ. ಸುಮಾರು ಹತ್ತು ವರ್ಷಗಳಿಂದ ಬಾಗಿಲು ತೆಗೆಯದೆ ಅರಮನೆ ಖಜಾನೆಯಲ್ಲಿ ಸಂರಕ್ಷಿಸಿ ಇರಿಸಲಾಗಿದ್ದ ಅನೇಕ ಶಾಸನಗಳು, ಕಲಾಕೃತಿಗಳು, ಪುರಾತನ ನಾಣ್ಯಗಳು ಸೇರಿ ಸುಮಾರು 369 ಬಗೆಯ ವಸ್ತುಗಳು ಇಲ್ಲಿವೆ.
ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿಗೆ ‘ರಾಜಕೀಯ ಗ್ರಹಣ’: ಕಾಮಗಾರಿ ಇನ್ನೂ ಅಪೂರ್ಣ
ತುಂಬಾ ಅದ್ಭುತವಾದ ಕಲಾಕೃತಿಗಳಿವೆ. ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡವೂ ಒಂದು ಪಾರಂಪರಿಕ ಕಟ್ಟಡವಾದ್ದರಿಂದ ಅದನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶ ಇದೆ. ಆ ಕಟ್ಟಡವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಪ್ರತಿ ವರ್ಷ ಮೈಸೂರಿಗೆ ಸುಮಾರು 50 ಲಕ್ಷ ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರ ಸಮಸ್ಯೆಗೆ ಪ್ರತ್ಯೇಕವಾಗಿ ಪೊಲೀಸ್ ವ್ಯವಸ್ಥೆ ಬೇಕಿದೆ. ಪ್ರವಾಸಿ ಪೊಲೀಸ್ ವಿಭಾಗವನ್ನು ತೆರೆಯುವ ಕುರಿತು ಸಲಹೆ ಕೇಳಿ ಬಂದಿದೆ. ಈ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಅಲ್ಲದೆ, ಮೈಸೂರಿನ ಎಲ್ಲಾ ಪ್ರವಾಸಿ ಕೇಂದ್ರಗಳಿಗೂ ಒಂದೇ ಟಿಕೆಟ್ ವ್ಯವಸ್ಥೆ ಜಾರಿಗೆ ತರುವ ಕುರಿತು ಆಲೋಚಿಸಲಾಗಿದೆ.
ಕೆಆರ್‌ಎಸ್ ಜಲಾಶಯದ ಒಳಹರಿವಿನಲ್ಲಿ ಅಲ್ಪಪ್ರಮಾಣದ ಹೆಚ್ಚಳ
ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಆರಂಭದಲ್ಲಿಯೇ ಒಂದು ಪ್ಯಾಕೇಜ್ ಟಿಕೆಟ್ ನೀಡಿದರೆ ಅದರ ಮೂಲಕ ಎಲ್ಲಾ ಪ್ರವಾಸಿ ಕೇಂದ್ರಗಳಿಗೂ ಅದು ಪ್ರವೇಶ ಕಲ್ಪಿಸುವಂತೆ ಇರಬೇಕು ಎಂದರು. ನಮ್ಮ ಸರ್ಕಾರವು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಬದ್ಧವಾಗಿದೆ. ಮೈಸೂರು ನಗರದ ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಹಣಕಾಸಿನ ನೆರವು ನೀಡುವ ಸಂಬಂಧ ಸಿಎಂ ಜತೆ ಚರ್ಚಿಸುತ್ತೇನೆ. ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಪ್ರಗತಿ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಸುಮಾರು 80 ಎಕರೆ ಜಾಗವಿದ್ದರೂ ಅದನ್ನು ಯಾವುದೇ ರೀತಿಯಲ್ಲಿಯೂ ಸದ್ಭಳಕೆ ಮಾಡಿಕೊಳ್ಳದ ಬಗ್ಗೆ ಬೇಸರವಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ