ನಟ ಚೇತನ್‌ರಿಂದ 1 ರು. ಮಾನನಷ್ಟ ಕೇಸ್‌: ಸಚಿವ ಹೆಬ್ಬಾರ್‌ಗೆ ನೋಟಿಸ್‌

By Kannadaprabha News  |  First Published Jun 27, 2021, 8:15 AM IST

* ಜು.14ರೊಳಗೆ ಹೇಳಿಕೆ ದಾಖಲಿಗೆ ಸಚಿವರಿಗೆ ಸೂಚನೆ
* ಸಚಿವರ ಹೇಳಿಕೆಯಿಂದ ತಮ್ಮ ಘನತೆಗೆ ಧಕ್ಕೆ: ಚೇತನ್‌
* ವಿಚಾರಣೆ ನಡೆಸಿದ 9ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ


ಬೆಂಗಳೂರು(ಜೂ.27): ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಮಾನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ನಟ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಸಂಬಂಧ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಅವರಿಗೆ ನಗರದ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ. 

ಚೇತನ್‌ ದಾಖಲಿಸಿರುವ 1 ರು.ಗಳ ಮೊಕದ್ದಮೆ ವಿಚಾರಣೆ ನಡೆಸಿದ ನಗರದ 9ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ದ ನ್ಯಾಯಾಧೀಶರಾದ ಕೆ.ಪಿ.ಪ್ರೀತಿ ಅವರು ನೋಟಿಸ್‌ ಜಾರಿ ಮಾಡಿದ್ದು, ಪ್ರಕರಣ ಸಂಬಂಧ ಜುಲೈ 14ರ ಒಳಗಾಗಿ ತಮ್ಮ ಹೇಳಿಕೆ ದಾಖಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿದ್ದಾರೆ. ಬ್ರಾಹ್ಮಣ್ಯಕ್ಕೆ ಸಂಬಂಧಿಸಿದಂತೆ ಪೆರಿಯಾರ್‌ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಅಭಿಪ್ರಾಯಗಳನ್ನು ಉಲ್ಲೇಖಿಸಿ ಚೇತನ್‌ ಮಾಡಿದ್ದ ಟ್ವೀಟ್‌ಗೆ ಹೆಬ್ಬಾರ್‌ ಅಸಮಾಧಾನ ವ್ಯಕ್ತಪಡಿಸಿ, ಅವರ ಬಂಧನಕ್ಕೆ ಆಗ್ರಹಿಸಿದ್ದರು.

Tap to resize

Latest Videos

ಗಂಜಿ ಆಸೆಗೆ ಹೇಳಿಕೆ ಕೊಡೋರನ್ನು ಬಂಧಿಸಿ : ನಟ ಚೇತನ್ ವಿರುದ್ಧ ಸಚಿವ ಹೆಬ್ಬಾರ್ ಕಿಡಿ

ನಟ ಚೇತನ್‌ ಕುಮಾರ್‌ ಜೂನ್‌ 6 ರಂದು ಟ್ವೀಟ್‌ ಮಾಡಿದ್ದರು. ಈ ಸಂಬಂಧ ಸಚಿವ ಶಿವರಾಂ ಹೆಬ್ಬಾರ್‌ ಅವರು ಜೂನ್‌ 11ರಂದು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪ್ರಸಾರ ಮಾಡಿದ್ದ ವಿಡಿಯೋದಲ್ಲಿ ‘ಸಮಾಜದಲ್ಲಿ ತಾನು ಗುರುತಿಸಿಕೊಳ್ಳಬೇಕು ಅಂತಲೋ, ಗಂಜಿ ಕಾಸಿನ ಆಸೆಗೋ ಹೇಳಿಕೆ ಕೊಡುವ ಇಂತಹ ಕಂಟಕರನ್ನು ಕಾನೂನು ಚೌಕಟ್ಟಿನಲ್ಲಿ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು’ ಎಂದು ತಿಳಿಸಿದ್ದರು.

ಸಚಿವರ ಈ ಹೇಳಿಕೆಯಿಂದ ತಮ್ಮ ಘನತೆಗೆ ಧಕ್ಕೆಯಾಗಿದೆ. ಹೀಗಾಗಿ 1 ರು.ಗಳ ಮಾನನಷ್ಟ ಕಟ್ಟಿಕೊಡಬೇಕು. ತಮ್ಮ ವಿರುದ್ಧ ನೀಡಿರುವ ಹೇಳಿಕೆಗೆ ಟ್ವಿಟ್ಟರ್‌ ಮೂಲಕ ಬೇಷರತ್‌ ಕ್ಷಮೆ ಯಾಚಿಸಬೇಕು. ಅಲ್ಲದೆ, ತಮ್ಮ ಹಾಗೂ ತಮ್ಮ ಕುಟುಂಬದವರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಚೇತನ್‌ಕುಮಾರ್‌ ಅರ್ಜಿಯಲ್ಲಿ ಕೋರಿದ್ದರು. 
 

click me!