ಕೊರೋನಾ ಮಹಾಮಾರಿ ರಾಜ್ಯದಲ್ಲಿ ಕೊನೆಯ ಹಂತದಲ್ಲಿದೆ. ಮುಕ್ತಾಯದ ಹಂತ ತಲುಪಿದ್ದು ಇದರ ಹಿಂದೆ ಅನೇಕರೀತಿಯ ಪ್ರಯತ್ನಗಳಿದೆ.
ಬೆಂಗಳೂರು (ಜ.27): ರಾಜ್ಯದ ಜನತೆಯ ಸಹಕಾರ ಹಾಗೂ ರಾಜ್ಯ ಸರ್ಕಾರದ ಯಶಸ್ವಿ ನಿರ್ವಹಣೆಯಿಂದ ನಾವೀಗ ಕೊರೋನಾ ಕೊನೆಯ ಹಂತಕ್ಕೆ ತಲುಪುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ ಕೊರೋನಾ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ. ದೈಹಿಕ ಅಂತರ, ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಬಳಕೆಯನ್ನು ನಿರಂತರವಾಗಿ ಪಾಲಿಸುವಂತೆ ರಾಜ್ಯಪಾಲ ವಿ.ಆರ್. ವಾಲಾ ಅವರು ಜನತೆಗೆ ಕರೆ ನೀಡಿದ್ದಾರೆ.
ರಾಜ್ಯ ಸರ್ಕಾರ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತವು ಎರಡು ಲಸಿಕೆ ಉತ್ಪಾದಿಸಿರುವುದಲ್ಲದೆ, ಈ ಲಸಿಕೆಗಳನ್ನು ವಿದೇಶಗಳಿಗೂ ರಫ್ತು ಮಾಡಿದೆ. ಕೊರೋನಾ ನಿಯಂತ್ರಣದಲ್ಲಿ ಸರ್ಕಾರದ ಜೊತೆಗೆ ಅವಿರತವಾಗಿ ಶ್ರಮಿಸುತ್ತಿರುವ ವೈದ್ಯರು, ಅರೆ-ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಮುಂಚೂಣಿಯಲ್ಲಿದ್ದ ಕಾರ್ಯಕರ್ತರೆಲ್ಲರೂ ನಮ್ಮ ಹೀರೋಗಳಾಗಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
'ಕೊರೋನಾ ಲಸಿಕಾ ಅಭಿಯಾನ ಮುಂದುವರೆಯುತ್ತದೆ' ...
ಕಳೆದ ವರ್ಷ ಕೊರೋನಾ ಎದುರಿಸುವುದು ಜಗತ್ತಿನ ಸವಾಲಾಗಿತ್ತು. ಇದೀಗ, ಹೊಸ ಚೈತನ್ಯ ಮತ್ತು ಆಶೋತ್ತರದೊಂದಿಗೆ 2021ರ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ರಾಜ್ಯ ಸರ್ಕಾರವು ಜನರ ಸಹಕಾರದೊಂದಿಗೆ ಕೊರೋನಾ ಅಲೆ ತಗ್ಗಿಸುವಲ್ಲಿ ಯಶಸ್ವಿಯಾಗಿದೆ. ಈ ಬಿಕ್ಕಟ್ಟಿನ ಅವಕಾಶವನ್ನು ನಮ್ಮ ಸಾಮರ್ಥ್ಯ ವೃದ್ಧಿಸಲು, ಆರೋಗ್ಯ ಮೂಲ ಸೌಕರ್ಯ, ಪಿಪಿಇ ಕಿಟ್, ವೆಂಟಿಲೇಟರ್ ಉತ್ಪಾದನೆಯನ್ನು ಹೆಚ್ಚಿಸಲು ಬಳಸಿಕೊಂಡಿದ್ದು, ಆತ್ಮ ನಿರ್ಭರ ಭಾರತದ ದಿಶೆಯಲ್ಲಿ ಉತ್ತಮ ಹೆಜ್ಜೆಯಾಗಿದೆ ಎಂದರು.
ಎಪಿಎಂಸಿ ಶುಲ್ಕ ಇಳಿಕೆ: ರಾಜ್ಯ ಸರ್ಕಾರದ ಉತ್ತಮ ಕೆಲಸಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ ರಾಜ್ಯಪಾಲರು, ಕಲಬುರಗಿ ಮತ್ತು ಚಿಂಚೋಳಿ ಎಪಿಎಂಸಿಗಳನ್ನು ಕೇಂದ್ರ ಸರ್ಕಾರದ ಇ-ನಾಮ್ ಪ್ಲಾಟ್‌ಫಾಮ್‌ರ್‍ಗೆ ಜೋಡಿಸಲಾಗಿದ್ದು, ಇನ್ನೂ ಮೂರು ಎಪಿಎಂಸಿಗಳು ಇ-ನಾಮ್ ಪ್ಲಾಟ್‌ಫಾಮ್‌ರ್‍ಗೆ ಸೇರಲಿವೆ. ರೈತರ ಮೇಲಿನ ಹೊರೆ ಕಡಿಮೆ ಮಾಡಲು ಎಪಿಎಂಸಿಯಲ್ಲಿನ ಮಾರುಕಟ್ಟೆಶುಲ್ಕವನ್ನು ಶೇ.0.60ಕ್ಕೆ ಇಳಿಸಲಾಗಿದೆ. ಹಾಲು ಸಂಗ್ರಹಣೆಯಲ್ಲಿ ರಾಷ್ಟ್ರದಲ್ಲಿಯೇ ಎರಡನೇ ಸ್ಥಾನದಲ್ಲಿದ್ದೇವೆ. ಪಶು-ಸಂಗೋಪನಾ ವಲಯದ ಸದೃಢಕ್ಕೆ ಸರ್ಕಾರ ಕಟಿಬದ್ಧವಾಗಿದೆ ಎಂದು ಹೇಳಿದರು.
ಪೊಲೀಸ್ ಪಡೆಯಲ್ಲಿ ಮಹಿಳಾ ಮೀಸಲಾತಿಯನ್ನು ಶೇ.25ಕ್ಕೆ ಹೆಚ್ಚಿಸಿ, ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ವಯೋಮಿತಿಯನ್ನು 2 ವರ್ಷಗಳವರೆಗೆ ಹೆಚ್ಚಿಸಲಾಗಿದೆ. ಪೊಲೀಸ್ ಗೃಹ-2025 ಯೋಜನೆ ಅನುಷ್ಠಾನ ಮಾಡಲಾಗಿದ್ದು, 10 ಸಾವಿರ ಪೊಲೀಸ್ ವಸತಿಗೃಹ ಈ ಯೋಜನೆಯಡಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಪಾಲ್ಗೊಂಡಿದ್ದರು.
ದುರ್ಬಲ ವರ್ಗದ ಕಲ್ಯಾಣಕ್ಕೆ ಸರ್ಕಾರವು ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಸ್‌ಸಿಪಿ ಹಾಗೂ ಟಿಎಸ್‌ಪಿ ಮತ್ತು ಇತರೆ ಉಪಯೋಜನೆಗಳ ಅಡಿಯಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳ ಸಮಗ್ರ ಅಭಿವೃದ್ಧಿಗೆ 30 ಸಾವಿರ ಕೋಟಿ ರು. ಮೀಸಲಿಡಲಾಗಿದೆ ಎಂದರು.
ಕೊರೋನಾ ಸವಾಲಿನ ನಡುವೆಯೂ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ದೂರಿಗೆ ಆಸ್ಪದವಿಲ್ಲದಂತೆ ಯಶಸ್ವಿಯಾಗಿ ನಡೆಸಲಾಗಿದೆ. ಸರ್ಕಾರಿ ಶಾಲೆಗಳೊಂದಿಗೆ ಭಾವನಾತ್ಮಕ ಸಂಬಂಧ ಬಲಪಡಿಸಲು ‘ನನ್ನ ಶಾಲೆ-ನನ್ನ ಕೊಡುಗೆ’ ಎಂಬ ಮೊಬೈಲ್ ತಂತ್ರಾಂಶ ಅಭಿವೃದ್ಧಿಪಡಿಸಿರುವುದು ಮಾದರಿಯಾಗಿದೆ ಎಂದರು.