ವೈದ್ಯರನ್ನು ಸಾಯಿಸಿ ಎಂದು ಕೂಗಿದರು| ನಿಮ್ಮ ರಕ್ಷಣೆಗೆ ಬಂದಿದ್ದೇವೆ ಎಂದರೂ ಕೇಳದ ಪುಂಡರು| ಪೊಲೀಸ್, ಬಿಬಿಎಂಪಿ ವೈದ್ಯರು, ಸಿಬ್ಬಂದಿ ಮೇಲೆ ಕಲ್ಲು| ಇಲ್ಲೇ ತಪಾಸಣೆಗೆ ಒತ್ತಡ| ಪಾದರಾಯನಪುರದಲ್ಲಿ ನಡೆದ ಗಲಾಟೆಯ ಗುಟ್ಟು ಬಿಚ್ಚಿಟ್ಟ ಕೊರೋನಾ ವಾರಿಯರ್ಸ್
ಬೆಂಗಳೂರು(ಏ.21): ಪೊಲೀಸರು ಹಾಗೂ ವೈದ್ಯರನ್ನು ಸಾಯಿಸಿಬಿಡಿ ಎಂದು ಘೋಷಣೆ ಕೂಗುತ್ತಲೇ ನುಗ್ಗಿ ಬಂದ ದುಷ್ಕರ್ಮಿಗಳು, ನಿಮ್ಮ ಜೀವ ರಕ್ಷಣೆಗೆ ಬಂದಿದ್ದೇವೆ ಎಂದರೂ ಕೇಳದೆ ಕಲ್ಲು ತೂರಾಟ ನಡೆಸಿದರು. ದೊಣ್ಣೆಗಳನ್ನು ಹಿಡಿದು ಕೊಲ್ಲಲು ಬಂದರು..!
ಇವು ಪಾದರಾಯನಪುರದಲ್ಲಿ ಭಾನುವಾರ ದುಷ್ಕರ್ಮಿಗಳ ದೌರ್ಜನ್ಯಕ್ಕೆ ಸಿಲುಕಿ ನಲುಗಿದ ‘ಕೊರೋನಾ ವಾರಿಯರ್ಸ್’ಗಳ ಅಳಲು. ಘಟನೆ ಸಂಬಂಧ ನಾಲ್ವರು ಪೊಲೀಸರು ಹಾಗೂ ಬಿಬಿಎಂಪಿ ವೈದ್ಯರೊಬ್ಬರ ದೂರು ಆಧರಿಸಿ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಐದು ಎಫ್‌ಐಆರ್ ದಾಖಲಾಗಿದ್ದು, 23 ಆರೋಪಿಗಳ ಹೆಸರು ಉಲ್ಲೇಖವಾಗಿದೆ.
ಕೊರೋನಾ ಗೂಂಡಾಗಳಿಗೆ 2 ವರ್ಷ ಜೈಲು, ದಂಡ?: ಸುಗ್ರೀವಾಜ್ಞೆ ಜಾರಿಗೆ ನಿರ್ಧಾರ!
ಕೈಯಲ್ಲಿ ಚಾಕು, ದೊಣ್ಣೆ ಹಿಡಿದು ಬಂದ್ರು: ಎಸ್‌ಐ
ಪಾದರಾಯನಪುರದ ಅರಾಫತ್ ನಗರಕ್ಕೆ ಕೊರೋನಾ ಸೋಂಕಿತರ ಜತೆ ಸಂಪರ್ಕದಲ್ಲಿದ್ದ 58 ಮಂದಿಯನ್ನು ಕ್ವಾರಂಟೈನ್‌ಗೊಳಪಡಿಸಲು ಬಿಬಿಎಂಪಿ ವೈದ್ಯಾಧಿಕಾರಿ ಡಾ.ಎಂ.ಸಿ.ಯೋಗೇಶ್ ನೇತೃತ್ವದ ತಂಡ ತೆರಳಿತ್ತು. ಈ ತಂಡದ ಭದ್ರತೆಗೆ ಸಿಬ್ಬಂದಿ ಜತೆ ನಾನು ಕೂಡಾ ಹೋಗಿದ್ದೆ. ಸಂಜೆ.6.30ರಲ್ಲಿ ಅರಾಫತ್‌ನಗರ 10ನೇ ಕ್ರಾಸ್‌ನಲ್ಲಿ 15 ಜನರನ್ನು ಕ್ವಾರಂಟೈನ್ ಕಳುಹಿಸಿ ಉಳಿದ 43 ಜನರನ್ನು ವಿಚಾರಣೆ ನಡೆಸುವಾಗ ಗಲಾಟೆ ಶುರುವಾಯಿತು ಎಂದು ಜಗಜೀವನ್‌ರಾಮ್ ನಗರ (ಜೆ.ಜೆ.ನಗರ) ಠಾಣೆ ಸಬ್ ಇನ್‌ಸ್ಪೆಕ್ಟರ್ ರಮಣ್‌ಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸುಜಾತಾ ಟೆಂಟ್ ಮುಂದೆ 11ನೇ ಕ್ರಾಸ್ ಚೆಕ್‌ಫೋಸ್ಟ್ ಸಮೀಪ ರಾತ್ರಿ 7.20ರಲ್ಲಿ ಆರೋಪಿಗಳಾದ ವಾಜಿದ್, ಇರ್ಫಾನ್, ಕಬೀರ್, ಅಹಮದ್ ಸೇರಿ 100ಕ್ಕೂ ಅಧಿಕ ಮಂದಿ ಜಮಾಯಿಸಿದರು. ಅವರು ಕೈಯಲ್ಲಿ ಕಲ್ಲು, ದೊಣೆ ಮತ್ತು ಚಾಕು ಹಿಡಿದುಕೊಂಡಿದ್ದರು. ಕೋವಿಡ್-19 ಸಿಬ್ಬಂದಿ ಕೂರಲು ಹಾಕಿದ್ದ ಕುರ್ಚಿ ಎಸೆದು, ಟೆಂಟ್‌ಹೌಸ್ ಧ್ವಂಸಗೊಳಿಸಿದರು. ದೊಣ್ಣೆಯಿಂದ ವಿದ್ಯುತ್ ದೀಪ, ಸಿಸಿ ಕ್ಯಾಮರಾವನ್ನು ಒಡೆದು ಹಾಕಿ ಮನಬಂದಂತೆ ದಾಂಧಲೆ ನಡೆಸಿದರು.
ನಾನು ಮಂಗಳಮುಖಿ, ಪೊಲೀಸರಿಗೆ ದೊಡ್ಡ ತಲೆನೋವಾದ ಫರ್ಜವಾ
ಈ ಗಲಭೆ ದೃಶ್ಯವು ಸೆರೆಯಾಗದಂತೆ ಅವರು ದೂರಾಲೋಚಿಸಿದ್ದರು. ಈ ಉದ್ರಿಕ್ತರ ಗುಂಪಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕೆರಳಿ, ‘ಪೊಲೀಸರು ಮತ್ತು ವೈದ್ಯರನ್ನು ಕೊಂದು ಬಿಡಿ. ಇಲ್ಲಿಂದ ಅವರು ಹೋಗಲು ಬಿಡಬೇಡಿ’ ಎನ್ನುತ್ತ ಕಲ್ಲುಗಳನ್ನು ತೂರಿದರು. ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿದರು. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ಪಿಎಸ್‌ಐ ಆರೋಪಿಸಿದ್ದಾರೆ.
ವೈದ್ಯರ ಮಾತು ನಂಬಬೇಡಿ ಎಂದ ಅರಚಾಡಿದರು!
ಕೊರೋನಾ ಸೋಂಕು ಕುರಿತು ವೈದ್ಯರ ಹಾಗೂ ಪೊಲೀಸರ ಮಾತು ಕೇಳಬೇಡಿ ಎಂದು ಕೂಗುತ್ತಿದ್ದ ದುಷ್ಕರ್ಮಿಗಳು, ಸೀಲ್‌ಡೌನ್ ಹಿನ್ನೆಲೆಯಲ್ಲಿ ಜನ ಸಂಚಾರಕ್ಕೆ ರಸ್ತೆಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಉರುಳಿಸಿದರು. ತಗಡಿನ ತಡೆಗೋಡೆಗಳನ್ನು ಕಿತ್ತು ಹಾಕಿದರು ಎಂದು ಹೆಡ್ ಕಾನ್‌ಸ್ಟೇಬಲ್ ಗಜೇಂದ್ರ ಹೇಳಿದ್ದಾರೆ.
ಗಲಾಟೆ ಮಾಡದಂತೆ ಶಾಂತ ರೀತಿಯಿಂದ ವೈದ್ಯಕೀಯ ತಪಾಸಣೆಗೆ ಸಹಕರಿಸುವಂತೆ ಮನವಿ ಮಾಡಲಾಯಿತು. ಇದಕ್ಕೆ ಕ್ಯಾರೇ ಎನ್ನದೆ ಅವರು ಗೂಂಡಾವರ್ತನೆ ತೋರಿದರು ಎಂದು ಗಜೇಂದ್ರ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.
ನಾನು ಮಂಗಳಮುಖಿ, ಪೊಲೀಸರಿಗೆ ದೊಡ್ಡ ತಲೆನೋವಾದ ಫರ್ಜವಾ
ಕ್ವಾರಂಟೈನ್‌ಗೆ ಬರಲ್ಲ ಎಂದು ಹಠ:
ಕೊರೋನಾ ಸೋಂಕಿತರ ಜತೆ ಎರಡನೇ ಹಂತದ ಸಂಪರ್ಕದಲ್ಲಿದ್ದ 43 ಮಂದಿಯನ್ನು ಕ್ವಾರಂಟೈನ್‌ಗೆ ಕರೆದುಕೊಂಡು ಹೋಗಲು ವೈದ್ಯಕೀಯ ತಂಡದ ಜತೆ ತೆರಳಿದ್ದೆ. ಆಗ ಕ್ವಾರಂಟೈನ್‌ಗೆ ಬರಲು ನಿರಾಕರಿಸಿದ ಕೆಲವರು, ನಮಗೆ ಇಲ್ಲಿಯೇ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಗಲಾಟೆ ಶುರು ಮಾಡಿದರು. ಆಗ ವೈದ್ಯರು, ಸರ್ಕಾರದ ಶಿಷ್ಟಾಚಾರದ ಪ್ರಕಾರ ಕ್ವಾರಂಟೈನ್‌ಗೆ ಒಳಪಡುವಂತೆ ವಿನಂತಿಸಿದರು. ಆಗ ಜನರನ್ನು ತಡೆದ ವಾಜಿದ್ ಗುಂಪು, ಸರ್ಕಾರಿ ಅಧಿಕಾರಿಗಳನ್ನು ಹಿಡಿದು ತಳ್ಳಾಡಿದರು. ಕಲ್ಲುಗಳನ್ನು ತೂರಿದರು. ದೊಣ್ಣೆಯಿಂದ ಹಲ್ಲೆ ನಡೆಸಲು ಅಟ್ಟಾಡಿಸಿಕೊಂಡು ಬಂದರು ಎಂದು ಪೊಲೀಸ್ ಕಾನ್‌ಸ್ಟೇಬಲ್ ದೂರಿದ್ದಾರೆ.
ಪೊಲೀಸರಿಂದ ಜೀವ ಉಳಿಯಿತು: ಡಾಕ್ಟರ್
ಕ್ವಾರಂಟೈನ್‌ಗೆ ಕರೆತರಲು ಪಾದರಾಯನಪುರದ ಅರಾಫತ್‌ಗೆ ನಗರಕ್ಕೆ ತೆರಳಿದ್ದೆ. ಕೊನೆಗೆ ಪೊಲೀಸರಿಂದ ಜೀವ ಉಳಿಯಿತು ಎಂದು ಚಾಮರಾಜಪೇಟೆ ವಿಭಾಗದ ಬಿಬಿಎಂಪಿ ವೈಯಾಧಿಕಾರಿ ಎಂ.ಸಿ.ಯೋಗೇಶ್ ಹೇಳಿದರು.
ಪಾದರಾಯನಪುರ ದುಷ್ಕೃತ್ಯದಲ್ಲಿ ತೊಡಗಿರುವವರಿಗೆ ಕಠಿಣ ಶಿಕ್ಷೆಗೊಳಪಡಿಸಿ: ಸಿದ್ದರಾಮಯ್ಯ
ಕೊರೋನಾ ಸೋಂಕಿತರ ಜತೆ ಸಂಪರ್ಕದಲ್ಲಿದ್ದವರನ್ನು ಗುರುತಿಸಲಾಯಿತು. ಸಂಜೆ ಅವರನ್ನು ಕ್ವಾರಂಟೈನ್‌ಗೆ ಕರೆತರಲು ಪೊಲೀಸರ ರಕ್ಷಣೆಗೆ ವೈದ್ಯಕೀಯ ತಂಡದೊಂದಿಗೆ ಹೋಗಿದ್ದೆ. ಆ ವೇಳೆ ಕೆಲವರು, ನಮ್ಮನ್ನು ಸುತ್ತುವರೆದು ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಕ್ವಾರಂಟೈನ್‌ಗೆ ಜನರನ್ನು ಕರೆದೊಯ್ಯಲು ತಡೆ ಹಾಕಿದ ದುಷ್ಕರ್ಮಿಗಳು, ನಮ್ಮ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿದರು. ದೊಣ್ಣೆಯಿಂದ ಹಲ್ಲೆಗೆ ಮುಂದಾದರು. ಕ್ಷಣಾರ್ಧದಲ್ಲಿ ಅಲ್ಲಿನ ಪರಿಸ್ಥಿತಿ ಉದ್ವಿಗ್ನಗೊಂಡು ಹಿಂಸಾಚಾರಕ್ಕೆ ತಿರುಗಿತು.
ತಕ್ಷಣವೇ ಜಾಗೃತರಾದ ಪೊಲೀಸರು, ನಮ್ಮ ವೈದ್ಯಕೀಯ ತಂಡವರನ್ನು ಸುರಕ್ಷಿತವಾಗಿ ಅಲ್ಲಿಂದ ಕರೆ ತಂದರು. ಇದರಿಂದ ನಮ್ಮ ಜೀವ ಉಳಿಯಿತು ಎಂದು ಯೋಗೇಶ್ ವಿವರಿಸಿದ್ದಾರೆ.