ನಗರದಲ್ಲಿ ಮನೆಗೆ 10 ಸಾವಿರ ಲೀ. ಕಾವೇರಿ ನೀರು ಉಚಿತ!

By Kannadaprabha NewsFirst Published Apr 21, 2020, 7:42 AM IST
Highlights

ನಗರದಲ್ಲಿ ಮನೆಗೆ 10 ಸಾವಿರ ಲೀ. ಕಾವೇರಿ ನೀರು ಉಚಿತ!| ಬಿಬಿಎಂಪಿ ಬಜೆಟ್‌ನಲ್ಲಿ ಮಹತ್ವದ ಘೋಷಣೆ| 10000 ಲೀ.ಗಿಂತ ಹೆಚ್ಚು ನೀರು ಬಳಸಿದರೆ ವಿನಾಯಿತಿ ಇಲ್ಲ

ಬೆಂಗಳೂರು(ಏ.21): ಉದ್ಯಾನ ನಗರಿಯ ಜನರಿಗೆ ದೆಹಲಿ ಮಾದರಿಯಲ್ಲಿ ತಿಂಗಳಿಗೆ 10 ಸಾವಿರ ಲೀಟರ್‌ ‘ಉಚಿತ ಕಾವೇರಿ ನೀರು’ ನೀಡುವುದಾಗಿ ಬಿಬಿಎಂಪಿ ತನ್ನ ಆಯವ್ಯಯದಲ್ಲಿ ಘೋಷಿಸಿದೆ.

ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ ಸರ್ಕಾರ ಅಲ್ಲಿ ಜಾರಿಗೆ ತಂದಿರುವ ಬಡವರಿಗೆ ಉಚಿತ ನೀರು ಕೊಡುವ ಯೋಜನೆಯ ಮಾದರಿಯಲ್ಲಿ ಬಿಬಿಎಂಪಿ 10 ಸಾವಿರ ಲೀಟರ್‌ಗಿಂತ ಕಡಿಮೆ ನೀರು ಬಳಕೆದಾರರಿಗೆ ಉಚಿತವಾಗಿ ಕಾವೇರಿ ನೀರು ಒದಗಿಸುವುದಕ್ಕೆ 2020-21ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು 43 ಕೋಟಿ ರು.ಗಳನ್ನು ಜಲಮಂಡಳಿಗೆ ಪಾವತಿಸಲು ಮೀಸಲಿಟ್ಟಿದೆ.

ಈ ಯೋಜನೆಯಿಂದ ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿ ಸೇರಿದಂತೆ ಸುಮಾರು 2.50 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ನೀರಿನ ಬಳಕೆ ಮೇಲೆ ಮಿತಿ ಹೇರುವ ಉದ್ದೇಶದಿಂದ ಬಿಬಿಎಂಪಿ ಈ ತೀರ್ಮಾನ ಕೈಗೊಂಡಿದ್ದು, 10 ಸಾವಿರ ಲೀಟರ್‌ಗಿಂತ ಹೆಚ್ಚಿನ ನೀರು ಬಳಕೆ ಮಾಡಿದರೆ, ಸಂಪೂರ್ಣ ನೀರಿನ ಬಿಲ್‌ ಪಾವತಿ ಮಾಡಬೇಕಾಗುತ್ತದೆ.

ಉದಾಹರಣೆಗೆ, ಮಾಸಿಕವಾಗಿ 10,001 ನೀರು ಬಳಕೆ ಮಾಡಿದರೆ 10,001 ಲೀಟರ್‌ ನೀರಿಗೂ ಬಿಲ್‌ ಪಾವತಿ ಮಾಡಬೇಕಾಗುತ್ತದೆ. 9,999 ಲೀಟರ್‌ವರೆಗೆ ನೀರು ಬಳಕೆ ಮಾಡಿದರೆ ಯಾವುದೇ ಹಣ ಪಾವತಿ ಮಾಡುವಂತಿಲ್ಲ. ಈ ಯೋಜನೆ ಯಾವುದೇ ವರ್ಗಕ್ಕೆ ಸೀಮಿತವಾಗಿಲ್ಲ. ಯಾರು ಬೇಕಾದರೂ ಈ ಯೋಜನೆಯ ಅನುಕೂಲ ಪಡೆದುಕೊಳ್ಳಬಹುದಾಗಿದೆ.

ಇನ್ನು ಈ ಹಿಂದೆ ಜಾರಿಗೆ ತಂದಿರುವ ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಕೊಳೆಗೇರಿ ನಿವಾಸಿಗಳಿಗೆ ಮಾಸಿಕವಾಗಿ 10 ಸಾವಿರ ಲೀಟರ್‌ ನೀರು ಉಚಿತವಾಗಿ ನೀಡುವ ಯೋಜನೆ ಮುಂದುವರೆಯಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಯೋಜನೆ ಕೇವಲ ವಸತಿ ನಿವಾಸಿಗಳಿಗೆ ಮಾತ್ರ ಸೀಮಿತವಾಗಿದೆ, ವಾಣಿಜ್ಯಬಳಕೆದಾರರಿಗೆ ಅನ್ವಯವಾಗುವುದಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

click me!