ಗುತ್ತಿಗೆದಾರರು-ಪಾಲಿಕೆ ಹಗ್ಗಜಗ್ಗಾಟ: ಆರೈಕೆ ಕೇಂದ್ರದಲ್ಲಿ ಕೊರೋನಾ ರೋಗಿಗಳ ಪರದಾಟ

By Kannadaprabha News  |  First Published Sep 14, 2020, 8:56 AM IST

ಗುತ್ತಿಗೆದಾರರಿಗೆ ಹಣ ನೀಡದ ಬಿಬಿಎಂಪಿ| ವೇತನ ಪಾವತಿಗೆ ಸಿಬ್ಬಂದಿ ಬಿಗಿಪಟ್ಟು| ಕೋವಿಡ್‌ ಆರೈಕೆ ಕೇಂದ್ರ ಆರಂಭಿಸಿದ ದಿನದಿಂದ ಈವರೆಗೆ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರಿಗೆ ಬಿಬಿಎಂಪಿ ಹಣ ಬಿಡುಗಡೆ ಮಾಡಿಲ್ಲ| 
 


ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಸೆ.14): ನಗರದ ಕೋವಿಡ್‌ ಆರೈಕೆ ಕೇಂದ್ರ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಮತ್ತು ಬಿಬಿಎಂಪಿ ಅಧಿಕಾರಿಗಳ ಹಗ್ಗ ಜಗ್ಗಾಟದಿಂದ ಆರೈಕೆ ಕೇಂದ್ರದಲ್ಲಿರುವ ಕೊರೋನಾ ಸೋಂಕಿತ ರೋಗಿಗಳು ಮತ್ತು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Latest Videos

undefined

ಕೊರೋನಾ ಸೋಂಕಿನ ಲಕ್ಷಣ ಇಲ್ಲದ ರೋಗಿಗಳ ಆರೈಕೆಗೆ ಬಿಬಿಎಂಪಿಯು ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ(ಬಿಐಇಸಿ) ಸೇರಿದಂತೆ ಒಟ್ಟು 12 ಕಡೆ ಸುಮಾರು 4,500 ರೋಗಿಗಳ ಆರೈಕೆಗೆ ಹಾಸಿಗೆ, ಶೌಚಾಲಯ, ಊಟ, ವಸತಿ ಸೇರಿದಂತೆ ಇನ್ನಿತರ ವ್ಯವಸ್ಥೆ ಮಾಡಲಾಗಿತ್ತು.

ಕೋವಿಡ್‌ ಆರೈಕೆ ಕೇಂದ್ರ ಆರಂಭಿಸಿದ ದಿನದಿಂದ ಈವರೆಗೆ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರಿಗೆ ಬಿಬಿಎಂಪಿ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ, ಹೌಸ್‌ ಕೀಪಿಂಗ್‌ ಸೇರಿದಂತೆ ಇನ್ನಿತರೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೆಲಸ ನಿಲ್ಲಿಸಿ ವೇತನ ಪಾವತಿಗೆ ಆಗ್ರಹಿಸುತ್ತಿದ್ದಾರೆ.

ಬೆಂಗಳೂರಿನ ಬೃಹತ್‌ ಕೊರೋನಾ ಆರೈಕೆ ಕೇಂದ್ರ ಬಂದ್‌: ಕಾರಣ..?

ರೋಗಿಗಳ ಪರದಾಟ:

ಕಳೆದ ಮೂರ್ನಾಲ್ಕು ತಿಂಗಳಿಂದ ಸಿಬ್ಬಂದಿ ವೇತನ ಸೇರಿದಂತೆ ಇನ್ನಿತರ ವೆಚ್ಚ ಮಾಡಿರುವ ಗುತ್ತಿಗೆದಾರರು ಹಣ ಬಿಡುಗಡೆಗೆ ಬಿಬಿಎಂಪಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜವಾಗದ ಹಿನ್ನೆಲೆಯಲ್ಲಿ ಕೈಚಲ್ಲಿ ಕುಳಿತಿದ್ದಾರೆ. ಇದರಿಂದ ಆರೈಕೆ ಕೇಂದ್ರದಲ್ಲಿರುವ 1,213 ಕೊರೋನಾ ಸೋಂಕಿತ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗುತ್ತಿಗೆ ಕರಾರು ಆಗಿಲ್ಲ:

ಬಿಐಇಸಿ 1,500 ಹಾಸಿಗೆಯ ಆರೈಕೆ ಕೇಂದ್ರ ಹೊರತು ಪಡಿಸಿದರೆ ಉಳಿದ ನಗರದ ಆರೈಕೆ ಕೇಂದ್ರಗಳಲ್ಲಿ ಗುತ್ತಿಗೆ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಬಿಬಿಎಂಪಿಯು ಈವರೆಗೂ ಕಾರ್ಯಾದೇಶ ನೀಡಿಲ್ಲ ಮತ್ತು ಗುತ್ತಿಗೆ ಕರಾರು ಒಪ್ಪಂದ ಮಾಡಿಕೊಂಡಿಲ್ಲ. ಹೀಗಾಗಿ, ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಟ್ಟು ಐದು ಆರೈಕೆ ಕೇಂದ್ರ ಬಂದ್‌?

ಬಿಐಇಸಿ, ಹಜ್‌ಭವನ, ಜಿಕೆವಿಕೆ, ಕೋರಮಂಗಲ ಒಳಾಗಣ ಕ್ರೀಡಾಂಗಣ ಸೇರಿದಂತೆ ಒಟ್ಟು 12 ಕಡೆ ಕೋವಿಡ್‌ ಆರೈಕೆ ಕೇಂದ್ರಗಳನ್ನು ಬಿಬಿಎಂಪಿ ಆರಂಭಿಸಿತ್ತು. ಅದರಲ್ಲಿ ಈಗಾಗಲೇ ಬಿಐಇಸಿ ಆರೈಕೆ ಕೇಂದ್ರವನ್ನು ಮುಚ್ಚುವ ಬಗ್ಗೆ ಬಿಬಿಎಂಪಿ ಆಯುಕ್ತರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಜೊತೆಗೆ ಇನ್ನೂ ನಾಲ್ಕು ಆರೈಕೆ ಕೇಂದ್ರ ಮುಚ್ಚುವ ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಬಿಐಇಸಿ, ಜಿಕೆವಿಕೆ, ತೋಟಗಾರಿಕೆ ಬಾಲಕರ ಹಾಸ್ಟಲ್‌, ತೋಟಗಾರಿಕೆ ಬಾಲಕಿಯರ ಹಾಸ್ಟಲ್‌, ಎನ್‌ಇಆರ್‌ಜಿಎಚ್‌ ಕೋವಿಡ್‌ ಕೇಂದ್ರದ ಹಾಸಿಗೆ ಮಾಹಿತಿಯನ್ನು ಬಿಬಿಎಂಪಿ ವೆಬ್‌ಸೈಟ್‌ನಿಂದ ತೆಗೆದು ಹಾಕಲಾಗಿದೆ.

ಮತ್ತೊಂದು ಹೊಸ ಆರೈಕೆ ಕೇಂದ್ರ ಆರಂಭ:

ಒಂದು ಕಡೆ ನಗರದಲ್ಲಿ ಈಗಾಗಲೇ ಸಜ್ಜುಗೊಳಿಸಲಾದ ಕೊರೋನಾ ಆರೈಕೆ ಕೇಂದ್ರಗಳನ್ನು ಮುಚ್ಚುತ್ತಿರುವ ಬಿಬಿಎಂಪಿ ನಗರದ ಹೋಮಿಯೋಪತಿ ಕಾಲೇಜಿನಲ್ಲಿ 200 ಹಾಸಿಗೆಯ ಹೊಸ ಕೋವಿಡ್‌ ಆರೈಕೆ ಕೇಂದ್ರ ಆರಂಭಿಸುವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಶೀಘ್ರದಲ್ಲಿ ಆರೈಕೆ ಕೇಂದ್ರ ಕಾರ್ಯಾರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬಿಐಇಸಿ ಸೇರಿದಂತೆ ಐದು ಆರೈಕೆ ಕೇಂದ್ರ ಮುಚ್ಚುವ ತೀರ್ಮಾನ ಮಾಡಲಾಗಿದೆ. ಮುಂದೆ ಅವಶ್ಯಕತೆ ಬಿದ್ದರೆ ಮತ್ತೆ ಆರಂಭಿಸಲಾಗುವುದು. ಉಳಿದ ಏಳು ಆರೈಕೆ ಕೇಂದ್ರ ಮುಂದುವರೆಯಲಿವೆ ಎಂದು ರಾಜ್ಯ ಕೋವಿಡ್‌ ಆರೈಕೆ ಕೇಂದ್ರ ಉಸ್ತುವಾರಿ ಅಧಿಕಾರಿ ರಾಜೇಂದ್ರ ಕುಮಾರ್‌ ಕಠಾರಿಯಾ ಅವರು ತಿಳಿಸಿದ್ದಾರೆ.

ಆರೈಕೆ ಕೇಂದ್ರದ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡದ ಹಿನ್ನೆಲೆಯಲ್ಲಿ ಹಣ ಬಿಡುಗಡೆ ಆಗಿರಲಿಲ್ಲ. ಕಾರ್ಯಾದೇಶ ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ರೋಗಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮವಹಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.
 

click me!