ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿ| ವಿಜಯನಗರದ ಕಾಂಗರೂ ಆಸ್ಪತ್ರೆಯಲ್ಲಿ ಅವಧಿಗೂ ಮುನ್ನ ಜನನ| ಮೂರು ಶಿಶುಗಳು ಕ್ರಮವಾಗಿ 1.6 ಕೆ.ಜಿ, 1.9 ಕೆ.ಜಿ. ಹಾಗೂ ಮತ್ತೊಂದು ಮಗು 1.3 ಕೆ.ಜಿ ತೂಕ| ಮೂರು ಶಿಶುಗಳ ತೂಕ ಕಡಿಮೆ ಇರುವ ಕಾರಣ ತುರ್ತು ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ|
ಬೆಂಗಳೂರು(ಸೆ.14): ತಾಯಿ ಒಬ್ಬರು ಅವಧಿಗೂ ಪೂರ್ವ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ತಡವಾಗಿ ತಿಳಿದು ಬಂದಿದೆ.
ವಿಜಯನಗರದ ಕಾಂಗರೂ ಕೇರ್ ಆಸ್ಪತ್ರೆಯಲ್ಲಿ ತಾಯಿ ಚಿತ್ರಲೇಖ ಎಂಬುವವರು ಆಗಸ್ಟ್ 15ರಂದು ಈ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಗರ್ಭಿಣಿಯಾದ ಬಳಿಕ ಸ್ಕ್ಯಾನಿಂಗ್‌ನಲ್ಲಿ ಮೂರು ಮಕ್ಕಳು ಇರುವುದಾಗಿ ವೈದ್ಯರು ತಿಳಿಸಿದ್ದಾರೆ. ತ್ರಿವಳಿ ಮಕ್ಕಳು ಎಂದಾಕ್ಷಣ ಸಾಮಾನ್ಯವಾಗಿ ತಾಯಂದಿರು ಆರೋಗ್ಯ ದೃಷ್ಟಿಯಿಂದ ಆತಂಕಕ್ಕೆ ಒಳಗಾಗುತ್ತಾರೆ. ಆದರೆ ಇದಕ್ಕೆ ವಿರುದ್ಧ ಎಂಬಂತೆ ಚಿತ್ರಲೇಖಾ ಅವರು ವೈದ್ಯರ ಸಲಹೆ ಪಾಲಿಸುತ್ತಾ ಬಂದಿದ್ದಾರೆ. ವೈದ್ಯರಿಗೂ ಸಹ ಈ ಪ್ರಕರಣ ಸವಾಲಾಗಿತ್ತು.
ಹುಬ್ಬಳ್ಳಿ: ಕೊರೋನಾ ಪಾಸಿಟಿವ್ ತುಂಬು ಗರ್ಭಿಣಿಗೆ ಶಸ್ತ್ರಚಿಕಿತ್ಸೆ, ಮುದ್ದಾದ ಮಗುವಿಗೆ ಜನ್ಮ ನೀಡಿದ ತಾಯಿ..!
ನಂತರ 33 ವಾರಗಳ ಬಳಿಕ ಅವಧಿಗೂ ಮುನ್ನವೇ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮೂರು ಶಿಶುಗಳು ಕ್ರಮವಾಗಿ 1.6 ಕೆ.ಜಿ, 1.9 ಕೆ.ಜಿ. ಹಾಗೂ ಮತ್ತೊಂದು ಮಗು 1.3 ಕೆ.ಜಿ ತೂಕ ಇವೆ. ಮೂರು ಶಿಶುಗಳ ತೂಕ ಕಡಿಮೆ ಇರುವ ಕಾರಣ ತುರ್ತು ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು. ಇದರಲ್ಲಿ 1.3 ಕೆ.ಜಿ ತೂಕವಿದ್ದ ಶಿಶುವಿಗೆ ಹಾಲು ಕುಡಿಯುವಿಕೆ ನಿಧಾನವಾಗಿದ್ದರಿಂದ ಉದ್ದಿಪನ ವ್ಯಾಯಾಮ,ಮತ್ತಿತರ ಚಿಕಿತ್ಸೆ ಮೂಲಕ ಹಾಲುಣಿಸುವ ಕ್ರಿಯೆ ಶಿಶುಗೆ ಸರಾಗವಾಗಿದೆ. ಸದ್ಯ ತಾಯಿ ಮತ್ತು ಮಕ್ಕಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಮಕ್ಕಳ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಭೇಟಿ ನೀಡುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.