
ಬೆಂಗಳೂರು (ಮಾ.15): ರಾಜ್ಯದಲ್ಲಿ ಕೊರೋನಾ ಸೋಂಕಿನ ಹೊಸ ಪ್ರಕರಣಗಳ ಏರಿಕೆ ಸತತವಾಗಿ ಏಳನೇ ದಿನವೂ ಮುಂದುವರೆದಿದ್ದು, ಭಾನುವಾರ 934 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೂವರು ಮೃತರಾಗಿದ್ದು, 609 ಮಂದಿ ಗುಣಮುಖರಾಗಿದ್ದಾರೆ.
ಮಾರ್ಚ್ 8 ರಿಂದ ನಿರಂತರವಾಗಿ ಸೋಂಕಿನ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಶನಿವಾರ 921 ಪ್ರಕರಣ ದಾಖಲಾಗಿತ್ತು.ಭಾನುವಾರ ವರದಿಯಾಗಿರುವುದು ರಾಜ್ಯದಲ್ಲಿ 2021ರ ಸಾಲಿನ ಎರಡನೇ ಗರಿಷ್ಠ ಪ್ರಕರಣವಾಗಿದ್ದು, ಜನವರಿ 8ರಂದು 970 ಪ್ರಕರಣ ದಾಖಲಾಗಿತ್ತು. ಅಷ್ಟೇ ಅಲ್ಲ ಭಾನುವಾರ ರಾಜ್ಯದ ಪಾಸಿಟಿವಿಟಿ ದರ ಶೇ.1.27ರಷ್ಟಿದ್ದು ಇದು ಮೂರು ತಿಂಗಳ ಗರಿಷ್ಠ ಪಾಸಿಟಿವಿಟಿ ದರವಾಗಿದೆ. ಡಿಸೆಂಬರ್ 15ರಂದು ಶೇ.1.32ರ ಪಾಸಿಟಿವಿಟಿ ವರದಿಯಾಗಿತ್ತು. ಕಳೆದ ಐದು ದಿನಗಳಿಂದ ರಾಜ್ಯದ ಪಾಸಿಟಿವಿಟಿ ದರ ಶೇ.1ಕ್ಕಿಂತ ಹೆಚ್ಚಿದೆ. ಭಾನುವಾರ 73,108 ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಈವರೆಗೆ 1.97 ಕೋಟಿ ಜನರಿಗೆ ಪರೀಕ್ಷೆ ಮಾಡಲಾಗಿದೆ. ಉಳಿದಂತೆ ಸಕ್ರಿಯ ಪ್ರಕರಣಗಳ ಸಂಖ್ಯೆ 8,364ಕ್ಕೆ ಏರಿದೆ.
ಚಿಕ್ಕೋಡಿ; ಒಂದೇ ಕುಟುಂಬದ 14 ಜನರಿಗೆ ಕೊರೋನಾ, ಸಂತೆಯೇ ಬಂದ್! ...
ಮಾರ್ಚ್ 5ಕ್ಕೆ ಬೆಂಗಳೂರು ನಗರ (4,592) ಮತ್ತು ದಕ್ಷಿಣ ಕನ್ನಡ (208)ದಲ್ಲಿ ಮಾತ್ರ 200ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿದ್ದವು. ಆದರೆ ಇದೀಗ ಕಲಬುರಗಿ (293), ತುಮಕೂರು (226), ಮೈಸೂರು (225) ಜಿಲ್ಲೆಗಳಲ್ಲಿಯೂ ಸಕ್ರಿಯ ಪ್ರಕರಣಗಳು 200 ದಾಟಿದ್ದರೆ, ಹಾವೇರಿ 2, ಕೊಪ್ಪಳ 8, ರಾಮನಗರ ಮತ್ತು ಚಾಮರಾಜನಗರದಲ್ಲಿ ತಲಾ 9 ಸಕ್ರಿಯ ಪ್ರಕರಣಗಳಿವೆ.
ಸೋಂಕಿನ ಪ್ರಮಾಣ ಏರಿಕೆ ಆಗುತ್ತಿದ್ದರೂ ಕೋವಿಡ್ ಸಾವಿನ ಪ್ರಮಾಣ ಹೆಚ್ಚಾಗಿಲ್ಲದಿರುವುದು ಆಶಾದಾಯಕ ಬೆಳವಣಿಗೆ. ಭಾನುವಾರ ಮೃತಪಟ್ಟಮೂವರೂ ಬೆಂಗಳೂರು ನಗರ ವ್ಯಾಪ್ತಿಗೆ ಸೇರಿದವರು. ರಾಜ್ಯದಲ್ಲಿ ಈವರೆಗೆ ಒಟ್ಟು 12,390 ಮಂದಿ ಸೋಂಕಿನಿಂದ ಮೃತರಾಗಿದ್ದಾರೆ.
ಈವರೆಗೆ ಒಟ್ಟು 9.60 ಲಕ್ಷ ಮಂದಿ ಸೋಂಕಿನಿಂದ ಬಾಧಿತರಾಗಿದ್ದು ಈ ಪೈಕಿ 9.39 ಲಕ್ಷ ಮಂದಿ ಗುಣಮುಖರಾಗಿದ್ದಾರೆ.
ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಯಲ್ಲಿ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿಲ್ಲ. ಬೆಂಗಳೂರು ನಗರದಲ್ಲಿ 628, ಕಲಬುರಗಿ 43, ದಕ್ಷಿಣ ಕನ್ನಡ 40, ಮೈಸೂರು 31, ಬೆಳಗಾವಿ ಜಿಲ್ಲೆಯಲ್ಲಿ 27 ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ