'ಒನ್‌ ರ‍್ಯಾಂಕ್ ಒನ್‌ ಪೆನ್ಷನ್‌' ಪರಿಷ್ಕರಣೆ: ರಕ್ಷಣಾ ಸಚಿವಾಲಯಕ್ಕೆ ಹೈಕೋರ್ಟ್‌ ನೋಟಿಸ್‌

By Kannadaprabha NewsFirst Published Mar 15, 2021, 7:51 AM IST
Highlights

ನಿವೃತ್ತ ಯೋಧರಿಗೆ ಪಿಂಚಣಿ ಮರು ನಿಗದಿಗಾಗಿ ಅರ್ಜಿ: ನೋಟಿಸ್‌ ಜಾರಿ| 20 ಲಕ್ಷಕ್ಕೂ ಅಧಿಕ ನಿವೃತ್ತ ಸೈನಿಕರು ಹಾಗೂ ನಾಲ್ಕು ಲಕ್ಷಕ್ಕೂ ಅಧಿಕ ಮೃತ ಸೈನಿಕರ ಪತ್ನಿಯರು ಪರಿಷ್ಕೃತ ಪಿಂಚಣಿ ನಿರೀಕ್ಷೆ| ಈ ಯೋಜನೆ ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ಪಿಂಚಣಿ ಮರು ನಿಗದಿ| 

ಬೆಂಗಳೂರು(ಮಾ.15): ನಿವೃತ್ತ ಯೋಧರಿಗೆ 2019ರ ಜು.1ರಿಂದ ಪೂರ್ನಾನ್ವಯವಾಗುವಂತೆ ಒನ್‌ ರ‍್ಯಾಂಕ್ ಒನ್‌ ಪೆನ್ಷನ್‌ (ಸಮಾನ ಶ್ರೇಣಿಗೆ ಸಮಾನ ವೇತನ) ಯೋಜನೆಯಡಿ ಪಿಂಚಣಿ ಮರು ನಿಗದಿಪಡಿಸಲು ಆದೇಶಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಕುರಿತು ರಕ್ಷಣಾ ಸಚಿವಾಲಯಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಈ ಕುರಿತು ನಿವೃತ್ತ ವಿಂಗ್‌ ಕಮಾಂಡರ್‌ ಬಿ.ಜಿ.ಅತ್ರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ಪೀಠ, ಪ್ರತಿವಾದಿಗಳಾದ ರಕ್ಷಣಾ ಸಚಿವಾಲಯ ಹಾಗೂ ಹಣಕಾಸು ಸಚಿವಾಲಯಕ್ಕೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಶ್ವಾನಗಳಿಗೂ ಜೀವಿಸುವ ಹಕ್ಕಿದೆ: ಹೈಕೋರ್ಟ್‌

ನ್ಯಾಯಾಂಗ ಸಮಿತಿ ಶಿಫಾರಸಿನ ಮೇರೆಗೆ ಒನ್‌ ರ‍್ಯಾಂಕ್ ಒನ್‌ ಪೆನ್ಷನ್‌ ಯೋಜನೆಯನ್ನು 2014ರ ಜು.1ರಿಂದ ಪೂರ್ವಾನ್ವಯವಾಗುವಂತೆ 2015ರ ನ.7ರಂದು ಜಾರಿಗೊಳಿಸಲಾಗಿದೆ. ಈ ಯೋಜನೆ ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ಪಿಂಚಣಿಯನ್ನು ಮರು ನಿಗದಿಪಡಿಸಬೇಕಿದೆ. ಆದರೆ, 2019ರ ಜು.1ರಿಂದಲೂ ಯೋಜನೆಯಡಿ ಪಿಂಚಣಿ ಪರಿಷ್ಕರಿಸಿಲ್ಲ. ಈ ಸಂಬಂಧ 2019ರ ಸೆಪ್ಟೆಂಬರ್‌ ಹಾಗೂ ನವೆಂಬರ್‌ನಲ್ಲಿ ಮನವಿ ಸಲ್ಲಿಸಲಾಗಿತ್ತು. ಆದರೆ, ಪಿಂಚಣಿ ಪರಿಷ್ಕರಣೆಗಾಗಿ ಏಕವ್ಯಕ್ತಿ ನ್ಯಾಯಾಂಗ ಸಮಿತಿ ರಚಿಸಲಾಗಿದೆ ಎಂಬ ಉತ್ತರ ನೀಡಲಾಗಿದೆ ಹೊರತು ಸಮಿತಿ ಶಿಫಾರಸುಗಳ ಪ್ರತಿಯನ್ನೂ ಒದಗಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ರ‍್ಯಾಂಕ್

ಅಲ್ಲದೆ, 20 ಲಕ್ಷಕ್ಕೂ ಅಧಿಕ ನಿವೃತ್ತ ಸೈನಿಕರು ಹಾಗೂ ನಾಲ್ಕು ಲಕ್ಷಕ್ಕೂ ಅಧಿಕ ಮೃತ ಸೈನಿಕರ ಪತ್ನಿಯರು ಪರಿಷ್ಕೃತ ಪಿಂಚಣಿ ನಿರೀಕ್ಷಿಸುತ್ತಿದ್ದಾರೆ. ಆದ್ದರಿಂದ, ಕೂಡಲೇ ಪಿಂಚಣಿ ಮರು ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.

click me!