
ಬೆಂಗಳೂರು ಜು.16): ರಾಜ್ಯದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ರಿಲೀಫ್ ಸಿಕ್ಕಿದೆ. ಈಶ್ವರಪ್ಪ ಅವರಿಗೆ ಕ್ಲಿನ್‌ಚಿಟ್ ನೀಡಿ ಪೊಲೀಸರು ಸಲ್ಲಿಸಿದ್ದ ‘ಬಿ ರಿಪೋರ್ಚ್’ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯವು ಅಂಗೀಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ವಿರುದ್ಧ ಮಾಡಿರುವ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂದು ಉಡುಪಿ ಪೊಲೀಸರು ಬಿ ರಿಪೋರ್ಚ್ ಸಲ್ಲಿಕೆ ಮಾಡಿದ್ದರು. ಇದನ್ನು ಸಂತೋಷ್ ಕುಟುಂಬಸ್ಥರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ವಾದ-ಪ್ರತಿವಾದ ಆಲಿಸಿ ಶನಿವಾರ ಬಿ ರಿಪೋರ್ಟನ್ನು (ನಿರ್ದೋಷಿ ಎಂಬ ವರದಿ) ಅಂಗೀಕರಿಸಿದೆ.
ಸಂತೋಷ ಆತ್ಮಹತ್ಯೆ: ರಾಜ್ಯಪಾಲರ ಮೊರೆ ಹೋದ ಕುಟುಂಬ
ಏನಿದು ಪ್ರಕರಣ?:
ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆ.ಎಸ್.ಈಶ್ವರಪ್ಪ ಅವರು ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ವೇಳೆ ಸಂತೋಷ್ ಆತ್ಮಹತ್ಯೆ ಪ್ರಕರಣ ನಡೆದಿತ್ತು. ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ 2022 ಏ.11ರಂದು ಗುತ್ತಿಗೆದಾರರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಶನ್ ಆರೋಪಗಳು ಕೇಳಿಬಂದ ಸಂದರ್ಭದಲ್ಲಿ ಸಂತೋಷ್ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಈಶ್ವರಪ್ಪ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ಇದು ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿ ಸಾಕಷ್ಟುಚರ್ಚೆಗೆ ಕಾರಣವಾಯಿತು. ಬಳಿಕ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಉಡುಪಿ ಪೊಲೀಸರು ಸಲ್ಲಿಸಿದ್ದ ಅಂತಿಮ ವರದಿಯಲ್ಲಿ, ‘ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಕ್ಕೆ ಸಾಕ್ಷ್ಯಗಳೇ ಇಲ್ಲ. ಈಶ್ವರಪ್ಪ ಅವರು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ’ ಎಂದು ಉಲ್ಲೇಖ ಮಾಡಿದ್ದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್: ಕ್ಲೀನ್ ಚಿಟ್ ಸಿಕ್ರೂ ಈಶ್ವರಪ್ಪಗೆ ಬಿಡದ ಸಂಕಷ್ಟ
ಪೊಲೀಸರು ತನಿಖೆ ವೇಳೆ ಸಿಸಿ ಕ್ಯಾಮೆರಾ ವಿಡಿಯೋ, ಮೊಬೈಲ್ ಸಂದೇಶ, ಆಡಿಯೋಗಳನ್ನು ಪರಿಗಣಿಸಿದ್ದರು. ಬ್ಯಾಂಕ್ ದಾಖಲೆ, ಗುತ್ತಿಗೆಯ ವಿವರ, ಮೃತರ ಕುಟುಂಬಸ್ಥರು, ಸ್ನೇಹಿತರ ಹೇಳಿಕೆಗಳನ್ನು ತೆಗೆದುಕೊಂಡಿದ್ದರು. ಎಲ್ಲಾ ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸಿ, ‘ಆತ್ಮಹತ್ಯೆಗೆ ಪ್ರಚೋದನೆ ಎಂಬುದಕ್ಕೆ ಸಾಕ್ಷ್ಯವಿಲ್ಲ. ಈಶ್ವರಪ್ಪ ಅವರಿಂದಾಗಲಿ ಅಥವಾ ಈಶ್ವರಪ್ಪ ಅವರ ಕಡೆಯವರಿಂದಾಗಲಿ ಬೆದರಿಕೆ ಬಂದಿರುವುದಕ್ಕೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ’ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ