ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ನಿರಂತರ ಹೋರಾಟ: ಕೋಡಿಹಳ್ಳಿ ಚಂದ್ರಶೇಖರ್

By Kannadaprabha NewsFirst Published Dec 4, 2023, 8:41 PM IST
Highlights

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ರೈತರಿಗೆ ಭರವಸೆ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದೀಗ ಕೊಟ್ಟ ಮಾತು ಮರೆತಿದೆ. 

ಬೆಳಗಾವಿ (ಡಿ.04): ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ರೈತರಿಗೆ ಭರವಸೆ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದೀಗ ಕೊಟ್ಟ ಮಾತು ಮರೆತಿದೆ. ಈಗಲಾದರೂ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಸರ್ಕಾರದ ವಿರುದ್ಧ ನಿರಂತರ ಧರಣಿ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಸೋಮವಾರ ಸಮೀಪದ ಸುವರ್ಣ ವಿಧಾನಸೌಧದ ಎದುರಿನ ಕೊಂಡುಸಕೊಪ್ಪನಲ್ಲಿ ನಿರ್ಮಿಸಿರುವ ಪ್ರತಿಭಟನೆಯ ವೇದಿಕೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಕರ್ನಾಟಕದಲ್ಲಿ ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿತ್ತು. ಆಗ ಪ್ರತಿಪಕ್ಷದಲ್ಲಿ ಕಾಂಗ್ರೆಸ್ ಅವುಗಳನ್ನ ಬಲವಾಗಿ ವಿರೋಧಿಸಿ, ನಾವು ಅಧಿಕಾರಕ್ಕೆ ಬಂದರೆ ಆ ಮಸೂದೆಗಳನ್ನು ಹಿಂಪಡೆಯುವುದಾಗಿ ಹೇಳಿತ್ತು. ಆದರೆ, ಈಗ ಅಧಿಕಾರದಲ್ಲಿದ್ದರೂ ಕೂಡ ಹಿಂಪಡೆಯಲು ಮುಂದಾಗುತ್ತಿಲ್ಲ ಎಂದರು.

ಕನಕದಾಸರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕಿದೆ: ಸಿಎಂ ಸಿದ್ದರಾಮಯ್ಯ

ಸಚಿವ ಶಿವಾನಂದ ಪಾಟೀಲ ಅವರು ಕೃಷಿ ಮಸೂದೆ ಕಾಯ್ದೆಯ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡುವುದಾಗಿ ಹೇಳಿದ್ದರು. ಇದನ್ನು ನೋಡಿದರೆ ಬಿಜೆಪಿ ಸರ್ಕಾರ ಜಾರಿಗೆ ತಂದ ಕೃಷಿ ಮಸೂದೆ ಕಾಯ್ದೆಯನ್ನು ಅಂಗೀಕಾರಗೊಳಿಸಲು ಕಾಂಗ್ರೆಸ್ ಸರ್ಕಾರ ಸಹಕರಿಸುತ್ತಿರುವ ಅನುಮಾನ ಕಾಡುತ್ತಿದೆ. ಸಿಎಂ ಸಿದ್ದರಾಮಯ್ಯನವರು ಕೃಷಿಯಲ್ಲಿ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಈ ಕಾಯ್ದೆಯನ್ನು ಹಿಂಪಡೆಯಲು ಸಾಧ್ಯವಾಗುತ್ತಿಲ್ಲವೆ ಎಂದು ಕೋಡಿಹಳ್ಳಿ ಪ್ರಶ್ನಿಸಿದರು.

ರಾಜ್ಯದ ರೈತರಿಗೆ ಅನುಕೂಲವಾಗುವ ಹಾಗೂ ಹೈನುಗಾರಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಹಾಲಿಗೆ ₹2 ಪ್ರೋತ್ಸಾಹ ಧನ ಘೋಷಣೆ ಮಾಡಿದೆ. ಆದರೆ, ಇದರ ಬೆನ್ನಲ್ಲೇ ಜಾನುವಾರುಗಳ ಹಿಂಡಿ ಖರೀದಿಯಲ್ಲಿ ₹4ರೂ. ಹೆಚ್ಚಳ ಮಾಡಿದ್ದಾರೆ. ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಕಿತ್ತುಕೊಳ್ಳುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಹರಿಹಾಯ್ದರು.

ಮುಂದಿನ‌ ಲೋಕಸಭಾ ಚುನಾವಣೆಯಲ್ಲಿ ಮೋದಿ ಮಗದೊಮ್ಮೆ ಪ್ರಧಾನಿ: ನಳಿನ್‌ ಕಟೀಲ್

ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಇಲ್ಲಿನ ಸಚಿವರು ಪಂಚರಾಜ ಚುನಾವಣೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ. ನಿಮ್ಮ ಪಕ್ಷವನ್ನು ಗೆಲ್ಲಿಸಲು ಬೇರೆ ರಾಜ್ಯಕ್ಕೆ ಹೋಗಿ ದುಂದು ವೆಚ್ಚ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರ ಕರ್ನಾಟಕದಲ್ಲಿ ರೈತರಿಗಾಗಿ ಯಾವ ಯೋಜನೆ ತಂದಿದೆ? ರೈತರ ಪಂಪಸೆಟ್‌ಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿ ಅಳವಡಿಸಿಕೊಳ್ಳವಂತೆ ಹೇಳಿರುವುದು ಸರ್ಕಾರದ ದೊಡ್ಡ ಸಾಧನೆನಾ ಎಂದು ಪ್ರಶ್ನಿಸಿದರು. ಪ್ರತಿಭಟನೆ ವೇಳೆ ಆಯಿಷಾ ಸನದಿ, ರಾಜು ಮೊರವೆ, ಶರಪ್ಪ‌ ಚಿಲಜೇರಿ, ಮಹಾಂತೇಶ ಬಿರಾದಾರ, ರಮೇಶ ಕಾಕಡತಿ ಸೇರಿದಂತೆ ನೂರಾರು ರೈತರು ಇದ್ದರು.

click me!