ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಬಾಲರಾಮ (ರಾಮಲಲ್ಲಾ) ವಿಗ್ರಹದ ಕೃಷ್ಣಶಿಲೆ ಸಿಕ್ಕಿರುವ ಮೈಸೂರಿನ ಹಾರೋಹಳ್ಳಿ ಜಮೀನಿನಲ್ಲಿ ರಾಮ ಮಂದಿರ ನಿರ್ಮಿಸಲು ನಿರ್ಧರಿಸಲಾಗಿದ್ದು, ಜ.22 ರಂದು ಭೂಮಿಪೂಜೆ ನೆರವೇರಿಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಮೈಸೂರು (ಜ.21): ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಬಾಲರಾಮ (ರಾಮಲಲ್ಲಾ) ವಿಗ್ರಹದ ಕೃಷ್ಣಶಿಲೆ ಸಿಕ್ಕಿರುವ ಮೈಸೂರಿನ ಹಾರೋಹಳ್ಳಿ ಜಮೀನಿನಲ್ಲಿ ರಾಮ ಮಂದಿರ ನಿರ್ಮಿಸಲು ನಿರ್ಧರಿಸಲಾಗಿದ್ದು, ಜ.22 ರಂದು ಭೂಮಿಪೂಜೆ ನೆರವೇರಿಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು. ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರ ಮಾದರಿಯಲ್ಲಿ ವಿಗ್ರಹವನ್ನು ಕೆತ್ತನೆ ಮಾಡಿಸಲು ನಿರ್ಧರಿಸಲಾಗಿದೆ. ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದಲೇ ವಿಗ್ರಹ ಕೆತ್ತನೆ ಮಾಡಿಸಲು ಮನವಿ ಮಾಡಲಾಗುವುದು ಎಂದರು.
ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಮೈಸೂರು ತಾಲೂಕು ಗುಜ್ಜೇಗೌಡನಪುರ ಸಮೀಪದ ಹಾರೋಹಳ್ಳಿ ಸರ್ವೆ 196 ಮತ್ತು 197 ರಲ್ಲಿ ಇರುವ 2.16 ಎಕರೆ ಜಮೀನಿನಲ್ಲಿ ದಲಿತ ಸಮುದಾಯಕ್ಕೆ ಸೇರಿದ ರಾಮದಾಸ್ ಅವರ ಜಮೀನಿನಲ್ಲಿ ಕೃಷ್ಣಶಿಲೆ ದೊರೆತಿದೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ರಾಮಲಲ್ಲಾನ ವಿಗ್ರಹವು ಈ ಜಮೀನಿನಲ್ಲಿ ಸಿಕ್ಕಿರುವುದು ದೇಶದ ಗಮನ ಸೆಳೆದಿದೆ ಎಂದು ಅವರು ಹೇಳಿದರು. ಹಾರೋಹಳ್ಳಿಯ ಒಬ್ಬ ದಲಿತ ರೈತನ ಜಮೀನಿನಲ್ಲಿ ದೊರೆತ ಕಲ್ಲನ್ನು ಪಡೆದು ಶಿಲ್ಪಿ ಅರುಣ್ ಯೋಗಿರಾಜ್ ಅವರು ಶಿಲೆಯನ್ನು ಕೆತ್ತಿದ್ದಾರೆ. ಅದೇ ರೀತಿ ಪೂಜಾ ಕಾರ್ಯಕ್ರಮಗಳಲ್ಲೂ ಕರ್ನಾಟಕದ ಅರ್ಚಕರೇ ಭಾಗವಹಿಸುತ್ತಿರುವುದರಿಂದ ರಾಜ್ಯಕ್ಕೆ ಹೆಮ್ಮೆ ತಂದಿದೆ ಎಂದರು.
ಹೊಸ ದೇವಸ್ಥಾನಕ್ಕಿಂತ ಈಗಿರುವ ಗುಡಿಗಳ ಪುನರುಜ್ಜೀವನ ಅಗತ್ಯ: ಕಿಮ್ಮನೆ ರತ್ನಾಕರ್
ಜ.22 ರಂದು ಕಲ್ಲು ಸಿಕ್ಕಿದ ಭೂಮಿಯಲ್ಲಿ ಬೆಳಗ್ಗೆ 6 ರಿಂದ 8 ರವರೆಗೆ ಭೂಮಿ ಪೂಜೆ ನೆರವೇರಿಸುವ ಜೊತೆಗೆ ಧ್ಯಾನ, ಭಜನೆ ಕಾರ್ಯಕ್ರಮಗಳು ನಡೆಯಲಿವೆ. ಮುಂದಿನ ದಿನಗಳಲ್ಲಿ ಈ ಜಾಗದಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡುವ ಕಾರಣ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದಲೇ ವಿಗ್ರಹ ಕೆತ್ತನೆ ಮಾಡಿಸಲಾಗುವುದು ಎಂದು ಅವರು ತಿಳಿಸಿದರು. ಹಳ್ಳಿಯಲ್ಲಿ ರಾಮಮಂದಿರ ನಿರ್ಮಾಣ ಮಾಡಿ ಮೊದಲಿನಿಂದಲೂ ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ಈ ಊರಿನಲ್ಲಿ ದೇಣಿಗೆ ಸಂಗ್ರಹಿಸಿ ನಿರ್ಮಾಣ ಮಾಡುತ್ತೇವೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸುತ್ತಿರುವ ಮೂರ್ತಿಯ ಶಿಲೆಯು ಈ ನೆಲದಲ್ಲಿ ದೊರೆತಿರುವುದರಿಂದ ಎಲ್ಲರ ಸೌಭಾಗ್ಯವಾಗಿದೆ. ಹೀಗಾಗಿಯೇ, ಈ ಸ್ಥಳವನ್ನು ಪ್ರಮುಖ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಅವರು ವಿವರಿಸಿದರು.
ಶಿಲ್ಪಿ ಅರುಣ್ ಯೋಗಿರಾಜ್ ಅವರು ಮೈಸೂರಿಗೆ ವಾಪಸ್ ಬಂದ ಮೇಲೆ ಅವರ ಸಮ್ಮುಖದಲ್ಲೇ ಭೂ ಮಾಲೀಕರು, ಕಲ್ಲು ತೆಗೆದವರಿಗೂ ಸನ್ಮಾನ ಮಾಡಲಾಗುವುದು. ಅವರೊಂದಿಗೆ ಉತ್ತರಪ್ರದೇಶದ ಅಯೋಧ್ಯೆ ವೀಕ್ಷಣೆಗೂ ಕಳುಹಿಸಿಕೊಡಲಾಗುವುದು. ವಿಗ್ರಹ ಕೆತ್ತನೆಗೂ ಅವರಲ್ಲಿ ಕೋರಲಾಗುವುದು ಎಂದರು. ಜಮೀನು ಮಾಲೀಕ ರಾಮದಾಸ್, ಕಲ್ಲು ಹೊರ ತೆಗೆದ ಶ್ರೀನಿವಾಸ್ ಮೊದಲಾದವರು ಇದ್ದರು.
ಬಸವಣ್ಣ ವಿಷಯದಲ್ಲಿ ರಾಜಕೀಯ ಎನ್ನುವವರು ಕ್ಷುಲ್ಲಕ ಮನಸಿನವರು: ಸಚಿವ ಎಚ್.ಕೆ.ಪಾಟೀಲ್
ಹಾರೋಹಳ್ಳಿಯ ಶಿಲೆಯಲ್ಲಿ ರಾಮಲಲ್ಲಾ ವಿಗ್ರಹ ಕೆತ್ತನೆ ಮಾಡಿದ್ದನ್ನು ಆಯ್ಕೆ ಮಾಡಿದ ಬಳಿಕ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ನಾನು ಕೂಡ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆ ಹೇಳುತ್ತೇನೆ. ಶ್ರೀರಾಮನ ಭಕ್ತನಾಗಿರುವ ಮೋದಿ ಅವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡೇಶ್ವರಿದೇವಿಯ ಅಶೀರ್ವಾದ ಪಡೆದಿದ್ದರು. ದೇವರ ಆಶೀರ್ವಾದದಿಂದಲೇ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಮನ ಮೂರ್ತಿಯ ಶಿಲೆ ದೊರೆತಿರುವುದು ವಿಶೇಷವಾಗಿದೆ
- ಜಿ.ಟಿ. ದೇವೇಗೌಡ, ಶಾಸಕ