
ಆನಂದ್ ಎಂ. ಸೌದಿ
ಯಾದಗಿರಿ(ಜ.28): ಪಿಎಸೈ ಅಕ್ರಮದ ತನಿಖಾಧಿಕಾರಿ ಶಂಕರಗೌಡ ಪಾಟೀಲ್ ವಿರುದ್ಧ ಲಂಚದ ಆರೋಪದ ಹಿಂದೆ ಕಾಣದ ಕೈಗಳ ಕೈವಾಡ ಅಡಗಿತ್ತೇ?. ಡಿವೈಎಸ್ಪಿ ಹಾಗೂ ತಂಡದ ವಿರುದ್ಧ ಲಂಚದ ಆರೋಪ ಹೊರಿಸಿದರೆ ಇಡೀ ಪ್ರಕರಣ ಸಡಿಲಗೊಳ್ಳುವ ಮೂಲಕ ಆರೋಪಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಯತ್ನ ನಡೆಸಲಾಗಿತ್ತೇ ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿವೆ. ಅಕ್ರಮ ಜಾಲದ ಬೆನ್ನು ಬಿದ್ದಿದ್ದ ಡಿವೈಎಸ್ಪಿ ಶಂಕರಗೌಡ ಹಾಗೂ ತಂಡದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರೆ ಸರ್ಕಾರ ಅವರನ್ನು ಬದಲಾಯಿಸಬಹುದು ಎಂಬ ಆರೋಪಿಗಳ ಲೆಕ್ಕಾಚಾರ ಇದೀಗ ಬ್ಯಾಂಕು ನೀಡಿದ ಪ್ರತಿಕ್ರಿಯೆಯಿಂದಾಗಿ ತಲೆಕೆಳಗಾದಂತಾಗಿದೆ.
ಬ್ಯಾಂಕ್‌ನಿಂದ 76 ಲಕ್ಷ ರು.ಗಳನ್ನು ಡ್ರಾ ಮಾಡಿಸಿ, ಅಳಿಯನ ಮೂಲಕ ಡಿವೈಎಸ್ಪಿಗೆ ನೀಡಿದ್ದಾಗಿ ಆರೋಪಿ ರುದ್ರಗೌಡ ಪಾಟೀಲ್ ಆರೋಪ ಮಾಡಿದ್ದರಿಂದ ಸಿಐಡಿ ಕಾರ್ಯವೈಖರಿಯನ್ನೇ ಓರೆಗೆ ಹಚ್ಚಿದಂತಾಗಿ, ಸಾಕಷ್ಟುಟೀಕೆಗಳಿಗೆ ಗುರಿಯಾಗಿದ್ದವು.
PSI Recruitment Scam: ಎಸ್‌ಐ ಕೇಸ್ ವಿಚಾರಣೆಯಿಂದ ಸಿಜೆ ಪೀಠ ಹಿಂದಕ್ಕೆ
ಈ ಆರೋಪಗಳನ್ನು ತಳ್ಳಿ ಹಾಕಿದ್ದ ಸಿಐಡಿ, ಜ.25 ರಂದು ಬ್ಯಾಂಕಿಗೆ ಪತ್ರ ಬರೆದು, ರುದ್ರಗೌಡ ಹಾಗೂ ಅಳಿಯ ಶ್ರೀಕಾಂತ ಖಾತೆಯ ವಹಿವಾಟುಗಳ ವಿವರ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಬ್ಯಾಂಕ್ ಆಫ್ ಬರೋಡಾದ ಚೀಫ್ ಮ್ಯಾನೇಜರ್, ಈ ಖಾತೆಗಳಿಂದ 76 ಲಕ್ಷ ರು.ಗಳ ವಹಿವಾಟೇ ನಡೆದಿಲ್ಲ. ಅಲ್ಲದೆ, ಕಳೆದ ವರ್ಷ ಮೇ 19 ರಂದೇ ಈ ಇಬ್ಬರ ಖಾತೆಗಳನ್ನು ಫ್ರೀಜ್ ಮಾಡಲಾಗಿತ್ತು ಎಂದು ತಿಳಿಸಿದೆ. ಜೊತೆಗೆ, ಆರೋಪಿ ರುದ್ರಗೌಡ ಪಾಟೀಲ್ ತಮ್ಮ ಹೆಸರನ್ನು ಪ್ರಸ್ತಾಪಿಸಿದ್ದನ್ನು ಬ್ಯಾಂಕಿನ ಅಂದಿನ ಮ್ಯಾನೇಜರ್ ಮಲ್ಲಿಕಾರ್ಜುನ ಬಿಲಗುಂದಿ ಅಲ್ಲಗೆಳೆದಿದ್ದಾರೆ.
ಕಳೆದ ಜುಲೈನಲ್ಲೇ ಆಮಿಷದ ಬಗ್ಗೆ ಮಾಹಿತಿ :
ಇನ್ನು, ವಿಚಾರಣೆಯ ವೇಳೆ ತನಿಖಾಧಿಕಾರಿಗಳಿಗೆ ಆಮಿಷ ಒಡ್ಡಲೆತ್ನಿಸಿದ ರುದ್ರಗೌಡ ಪಾಟೀಲ್ ನಡೆ ಕುರಿತು ಕಳೆದ ಜುಲೈ 16ರಂದೇ ನ್ಯಾಯಾಲಯಕ್ಕೆ ವರದಿ ನೀಡಿದ್ದ ತನಿಖಾಧಿಕಾರಿಗಳು, ಪ್ರಭಾವಿಯಾದ ಈತ ಅಕ್ರಮದ ಸಾಕ್ಷಿಗಳ ನಾಶ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಜಾಮೀನು ನೀಡದಂತೆ ಕೋರಿದ್ದರು.
ಬಂಧನ ಭೀತಿಯಲ್ಲಿ ಶರಣಾಗತಿ:
8-9 ತಿಂಗಳ ನ್ಯಾಯಾಂಗ ಬಂಧನದ ನಂತರ ಷರತ್ತುಬದ್ಧ ಜಾಮೀನು ಪಡೆದು ಹೊರಬಂದಿದ್ದ ಆರ್‌ಡಿ.ಪಾಟೀಲ್, ನಂತರ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಸಿಐಡಿ ನೀಡಿದ್ದ ಐದು ನೋಟಿಸ್‌ಗಳಿಗೆ ಕ್ಯಾರೇ ಅನ್ನದಿದ್ದ ಆರ್ಡಿಪಿ, ಕೊನೆಗೆ ಜಾಮೀನು ರದ್ದುಪಡಿಸುವಂತೆ ಸಿಐಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಾಗ ಹಾಗೂ ಮತ್ತೊಂದು ಪ್ರಕರಣದಲ್ಲಿ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಬಂಧನ ಭೀತಿಯಲ್ಲಿ ನ್ಯಾಯಾಲಯಕ್ಕೆ ಶರಣಾದ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ