
ಕಲಬುರಗಿ(ಡಿ.29): ಕಲಬುರಗಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು, ಕಲಬುರಗಿ ಬಿಜೆಪಿ ಅಧ್ಯಕ್ಷ ಚಂದು ಪಾಟೀಲ್, ಮಣಿಕಂಠ ರಾಠೋಡ ಮತ್ತು ಆಂದೋಲಾ ಸ್ವಾಮೀಜಿ ಕೊಲೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಹಾಗೂ ಗ್ಯಾಂಗ್ ಸಂಚು ರೂಪಿಸಿತ್ತು ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ.
ಇತ್ತೀಚೆಗೆ ಕಪನೂರ ವಿರುದ್ಧ ಕಿರುಕುಳ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಪಂಚಾಳ ಬರೆದಿಟ್ಟ ಡೆತ್ ನೋಟಲ್ಲಿ ಈ ಅಂಶ ಇದೆ ಎಂದು ಗೊತ್ತಾಗಿದೆ. ಇದು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಬಗ್ಗೆ ಚಂದು ಪಾಟೀಲ್ ದೂರು ನೀಡಿದ್ದು, ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಇದಕ್ಕೂ ಮುನ್ನ ಎಫ್‌ಐಆರ್ ದಾಖಲಿಗೆ ಪೊಲೀಸರು ಶುಕ್ರವಾರ ಮೀನ ಮೇಷ ಎಣಿಸಿದ ಹಿನ್ನೆಲೆಯಲ್ಲಿ ಭಾರಿ ಹೈಡ್ರಾಮಾ ನಡೆದಿದ್ದು, ಕೋರ್ಟ್ ಆದೇಶದ ಬಳಿಕ ಎಫ್‌ಐಆರ್ ದಾಖಲಾಗಿದೆ. ಆದರೆ ಎಫ್‌ಐಆರ್‌ನಲ್ಲಿ ಎಲ್ಲೂ ಸಚಿವ ಪ್ರಿಯಾಂಕ್ ಖರ್ಗೆ ಹೆಸರಿಲ್ಲ. ಅವರ ಆಪ್ತ ರಾಜು ಕಪನೂರ ಹೆಸರು ಮಾತ್ರ ಇದೆ.
ಆಗಿದ್ದೇನು?:
ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಸೇರಿದಂತೆ ಬಿಜೆಪಿ ಮುಖಂಡರು ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಗೆ ಹೋಗಿ, 'ಸಚಿನ್ ಡೆತ್‌ನೋಟ್‌ನಲ್ಲಿ ನಮ್ಮ ಕೊಲೆಗೆ ಸಂಚು ರೂಪಿಸಿ ಸೊಲ್ಲಾಪುರದವರಿಗೆ ಸುಪಾರಿ ನೀಡಲಾದ ಅಂಶ ನಮೂದಾಗಿದೆ. ಹಾಗಾಗಿ ಸುಪಾರಿ ಕೊಟ್ಟವರ ವಿರುದ್ದ ದೂರು ದಾಖಲಿಸಬೇಕು' ಎಂದು ಶುಕ್ರವಾರ ಆಗ್ರಹಿಸಿದರಾದರೂ ಪೊಲೀಸರು ದೂರು ದಾಖಲಿಸಲೇ ಇಲ್ಲ. ಈ ಸಂಬಂಧ ಶಾಸಕ ಮತ್ತಿಮಡು ಹಾಗೂ ಇನ್ ಸ್ಪೆಕ್ಟರ್ ಶಕೀಲ್ ಅಂಗಡಿ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.
ಚಂದ್ರಶೇಖರ ಠಾಣೆಗೆ ಆಗಮಿಸಿದರಾದರೂ ಐಫ್‌ಐಆರ್ ದಾಖಲು ಬಗ್ಗೆ ಸ್ಪಷ್ಟ ನಿರ್ಣಯಕ್ಕೆ ಬರಲಿಲ್ಲ. ಈ ಮಧ್ಯೆ ಶನಿವಾರ ನ್ಯಾಯಾಲಯ ನೀಡಿದ ಸೂಚನೆ ಮೇರೆಗೆ, 'ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಮಣಿಕಂಠ ರಾಠೋಡ ಹಾಗೂ ಆಂದೋಲಾ ಸ್ವಾಮೀಜಿ ಕೊಲೆಗೆ ಸಂಚು ರೂಪಿಸಲಾಗಿದೆ' ಎಂದು ರಾಜು ಕಪನೂರ್ ಮತ್ತವರ ಗುಂಪಿನ ಸದಸ್ಯರ ವಿರುದ್ಧ ಸ್ಟೇಷನ್ ಬಜಾರ್‌ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸಚಿನ್ ಪಾಂಚಾಳ ಡೆತ್ ನೋಟಲ್ಲೇನಿದೆ?:
'ಯೋಜನಾ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನನಗೆ ಬೀದರ್ ಜಿಲ್ಲೆಯ ದುಬಲಗುಂಡಿ ಮೂಲದ ಸತೀಶ ರತ್ನಾಕರ್ ಎಂಬುವವರಿಂದ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಪರಿಚಯವಾಗಿತ್ತು. ಯುನಿಟಿ ಬಿಲ್ಡರ್ಸ್ ಹಾಕಿದ್ದ 12 ಕೋಟಿ ರು.ಗಳ ಟೆಂಡರ್ ಹಾಗೂ ಕಲುಬರಗಿ ಏರಪೋರ್ಟ್‌ನ ಸುಮಾರು 28 ಕೋಟಿ ರು. ಗಳ ಕಾಮಗಾರಿ ಅಲ್ಲದೆ ಕಲಬುರಗಿ ಮೃಗಾಲಯದ ಕಾಮಗಾರಿಯಲ್ಲೂ ಹಣ ಪಡೆದು ಮೋಸ ಮಾಡಲಾಗಿತ್ತು. ಕಾಮಗಾರಿಯೊಂದರ ಸಂಬಂಧ ರಾಜು ಕಪನೂರ್ ಶೇ. 5ರ ಲಂಚದ ಬೇಡಿಕೆ ಇಟ್ಟಿದ್ದರು. ಆ ಪ್ರಕಾರ 10 ಲಕ್ಷ ರು. ಮುಂಗಡ ತಲುಪಿಸಲಾಗಿತ್ತು. ನಮ್ಮ ಕಂಪನಿಯಿಂದ ಕೈಗೆತ್ತಿಕೊಳ್ಳಲಾಗಿದ್ದ ಕಲಬುರಗಿ ಮತ್ತು ಬೀದರ್ ಜಿಪಂನ 2 ಕೋಟಿ ರು.ಗಳ ಕಾಮಗಾರಿಗಳಿಗೂ 10 ಲಕ್ಷ ರು. ಬೇಡಿಕೆಯಿಟ್ಟಿದ್ದರು. ಅದರಂತೆ ಅವರ ಪತ್ನಿ ಖಾತೆಗೆ 5 ಲಕ್ಷ ರು. ಹಣ ವರ್ಗಾಯಿಸಿದ್ದೆ. ಆದರೆ ಬಾಕಿ 5 ಲಕ್ಷ ರು. ಹಣಕ್ಕೆ ಬೇಡಿಕೆ ಇರಿಸಿದ್ದ.
ಈ ಸಂಬಂಧ ನನಗೆ ಅವರಿಂದ ಬೆದರಿಕೆ ಬಂದಿತ್ತು. ನನಗಷ್ಟೇ ಅಲ್ಲ, ಶಾಸಕ ಬಸವರಾಜ ಮತ್ತಿಮಡು, ಚಂದು ಪಾಟೀಲ್, ಮಣಿಕಂಠ ರಾಠೋಡ್, ಆಂದೋಲಾ ಸ್ವಾಮೀಜಿಗೆ ಕಪನೂರ್‌ನಿಂದ ಕೊಲೆ ಬೆದರಿಕೆ ಇತ್ತು' ಎಂದು ಸಚಿನ್ ಡೆತ್‌ನೋಟಲ್ಲಿದೆ.
ಸಿ.ಟಿ ರವಿ ಹೇಳಿಕೆ ಸ್ವತಃ ಅವರ ಹೆಂಡತಿಯೂ ಒಪ್ಪುವುದಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಮತ್ತಿಮಡು ಆಕ್ರೋಶ:
'ಹತ್ಯೆ ಸ್ಕೆಚ್ ಹಿಂದೆ ಯಾರಿದ್ದಾರೆ? ಯಾರು ಯಾರಿಗೆ ಸುಪಾರಿ ಕೊಟ್ಟಿದ್ದಾರೆ? ಎಲ್ಲವೂ ಬಯಲಿಗೆ ಬರಬೇಕಾದರೆ ಸಿಬಿಐ ತನಿಖೆಯಾಗಬೇಕು. ನಿನ್ನೆ ಠಾಣೆಯಲ್ಲಿ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿರುವ ಇನ್‌ಸೆಕ್ಟರ್ ಶಕೀಲ್ ಅಂಗಡಿ ಸಸೆಂಡ್ ಮಾಡಬೇಕು ಎಂದು ಶಾಸಕ ಬಸವರಾಜ್ ಮತ್ತಿಮಡು ಆಗ್ರಹಿಸಿದ್ದಾರೆ.
ಸಚಿನ್ ಪಂಚಾಳ ಕುಟುಂಬದವರನ್ನು ಕಾಣಲು ಶಾಸಕ ಬಸವರಾಜ್ ಮತ್ತಿಮಡು, ಮಾಜಿ ಶಾಸಕ ರಾಜಕುಮಾರ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್ ಸೇರಿದಂತೆ ಕಲಬುರಗಿ ಬಿಜೆಪಿ ಮುಖಂಡರ ನಿಯೋಗ ಶನಿವಾರವೇ ಭಾಲ್ಕಿಗೆ ತೆರಳಿದೆ
ಡೆತ್‌ನೋಟಲ್ಲೇನಿದೆ?
* ಕಾಮಗಾರಿಗಳಿಗೆ ಸಂಬಂಧಿಸಿ ಪ್ರಿಯಾಂಕ್ ಆಪ್ತ ರಾಜು ಕಪನೂರ್ ಲಂಚದ ಬೇಡಿಕೆ ಇರಿಸಿದ್ದ
* ಅದರಂತೆ ಅವರ ಪತ್ನಿ ಖಾತೆಗೆ 5 ಲಕ್ಷ ವರ್ಗಾಯಿಸಿದ್ದೆ. ಆದರೆ 10 ಲಕ್ಷ ನೀಡಬೇಕು ಎಂದಿದ್ದ
* ಕೊಡದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿಕದ್ದ. ಜತೆಗೆ ಶಾಸಕ ಮತ್ತಿಮಡು, ಚಂದು ಪಾಟೀಲ್, ರಾಠೋಡ್, ಆಂದೋಲಾ ಸ್ವಾಮೀಜಿಗೂ ಆತನಿಂದ ಕೊಲೆ ಬೆದರಿಕೆ ಇತ್ತು: ಸಚಿನ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ