
ಮದ್ದೂರು (ಏ.25): ಮಂಡ್ಯ ಮಿಮ್ಸ್ ಹೆರಿಗೆ ಆಸ್ಪತ್ರೆಗೆ ಮತ್ತಷ್ಟು ಮೂಲ ಸೌಲಭ್ಯಗಳೊಂದಿಗೆ ಆಧುನೀಕರಣಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಹೇಳಿದರು. ಬೆಂಗಳೂರಿನಿಂದ ಮಲೈ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ತಾಲೂಕಿನ ಕುದರಗುಂಡಿ ಗ್ರಾಮದ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್.ನಾಗೇಶ್ ನಿವಾಸದಲ್ಲಿ ಉಪಾಹಾರ ಸೇವಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲಾ ಕೇಂದ್ರ ಮಂಡ್ಯ ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸೇರಿದಂತೆ ಕೆಲವೊಂದು ಮೂಲ ಸೌಲಭ್ಯಗಳ ಕೊರತೆ ಇದೆ. ಹೀಗಾಗಿ ಹೆರಿಗೆ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲು ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಹಾಗೂ ಕಳಪೆ ಗುಣಮಟ್ಟದ ಕುಡಿಯುವ ನೀರು ಘಟಕಗಳ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಆದೇಶ ನೀಡಲಾಗಿದೆ. ಆದರೂ ಸಹ ಕೆಳಹಂತದ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸಮರ್ಪಕವಾಗಿ ಅನುಷ್ಠಾನ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂದಿರಾ ಗಾಂಧಿಯಂತೆ ಮೋದಿ ದಿಟ್ಟ ಕ್ರಮ ಕೈಗೊಳ್ಳಲಿ: ಸಚಿವ ರಾಮಲಿಂಗಾರೆಡ್ಡಿ
ಕಳಪೆ ಗುಣಮಟ್ಟದ ನೀರು ಪೂರೈಕೆ ಮತ್ತು ಪ್ಲಾಸ್ಟಿಕ್ ಪೂರೈಕೆ ಮಾಡುವ ಕ್ಲಬ್ ಗಳು ಮತ್ತು ಮದ್ಯದ ಅಂಗಡಿ ಸೇರಿದಂತೆ ವ್ಯಾಪಾರ ವಾಣಿಜ್ಯ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಕಾನೂನು ಕ್ರಮ ಜರುಗಿಸಲು ವಿಶೇಷ ತಂಡವನ್ನು ರಚನೆ ಮಾಡಲಾಗುವುದು. ತಂಡದ ವಿರುದ್ಧ ಸಾರ್ವಜನಿಕವಾಗಿ ದೂರು ಬಂದಲ್ಲಿ ಅವರ ಮೇಲೂ ಸಹ ಶಿಸ್ತು ಕ್ರಮ ಜರುಗಿಸಲು ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಈ ವೇಳೆ ರೈತ ಸಂಘದ ಮುಖಂಡ ಕುದರಗುಂಡಿ ನಾಗರಾಜು, ಗೆಜ್ಜಲಗೆರೆ ಸೊಸೈಟಿ ನಿರ್ದೇಶಕ ಕೆ.ಪಿ.ಶ್ರೀಧರ ಮತ್ತಿತರರು ಇದ್ದರು.
ನಿರ್ಮಿತಿ ಕೇಂದ್ರದ ಸಿಸಿ ಟೀವಿ ದೃಶ್ಯಗಳ ರಕ್ಷಣೆಗೆ ಮನವಿ: ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಸಾಕ್ಷ್ಯಾಧಾರಗಳು ನಾಶವಾಗದಂತೆ ಕೇಂದ್ರದ ಸಿಸಿ ಟೀವಿ ದೃಶ್ಯಾವಳಿಗಳನ್ನು ಸಂರಕ್ಷಿಸುವಂತೆ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸೈಟ್ ಎಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮ ನಡೆದಿರುವ ಕುರಿತು ನೀಡಿದ ದೂರಿನ ಹಿನ್ನೆಲೆಯಲ್ಲಿ ಈಗಾಗಲೇ ಅಪರ ಜಿಲ್ಲಾಧಿಕಾರಿಗಳನ್ನೊಳಗೊಂಡ ತನಿಖಾ ತಂಡವು ಮೂವರು ಸೈಟ್ ಎಂಜಿನಿಯರ್‌ಗಳನ್ನು ಹುದ್ದೆಯಿಂದ ಕೈಬಿಡುವಂತೆ ಶಿಫಾರಸು ಮಾಡಿದೆ. ಆದರೆ, ದೂರು ನೀಡಿದ ನಂತರ ನಡೆದ ವಿಚಾರಣೆಯಲ್ಲಿ ಹಾಲಿ ಯೋಜನಾ ನಿರ್ದೇಶಕ ಬಿ. ಜಯಪ್ರಕಾಶ್ ಅವರು ಈ ಆರೋಪಿಗಳ ಜೊತೆ ಸೇರಿಕೊಂಡು ಪ್ರಕರಣಗಳನ್ನು ಮುಚ್ಚಿಹಾಕಲು ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಇರುವ ಬಗ್ಗೆಯೂ ತನಿಖೆ ನಡೆಸುವಂತೆ ವಿಚಾರಣಾಧಿಕಾರಿಗಳ ಎದುರು ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ.
ಬಾಹ್ಯಶಕ್ತಿಗಳ ವಿರುದ್ಧ ನಾವೆಲ್ಲ ಒಗ್ಗಟ್ಟಿನಿಂದ ಇರಬೇಕು: ಎಚ್.ಡಿ.ದೇವೇಗೌಡ
ನಾನು ದೂರು ನೀಡಿದ ಬಳಿಕ ಬಿ.ಜಯಪ್ರಕಾಶ್ ಮತ್ತು ಆರೋಪಿತ ಸೈಟ್ ಎಂಜಿನಿಯರ್‌ಗಳು, ಸಿಬ್ಬಂದಿ ಹಾಗೂ ಕೆಲವು ಖಾಸಗಿ ವ್ಯಕ್ತಿಗಳು ನಿರ್ಮಿತಿ ಕೇಂದ್ರದ ಕಚೇರಿಯಲ್ಲಿ ಹಗಲು-ರಾತ್ರಿ ವೇಳೆ ದಾಖಲೆಗಳನ್ನು ತಿದ್ದುವುದು, ದಾಖಲೆಗಳ ಸಾಕ್ಷ್ಯಾಧಾರಗಳನ್ನು ನಾಶಪಡಿಸಿರುವ ಬಗ್ಗೆ ನನಗೆ ಮಾಹಿತಿ ಇದ್ದು, ಖಾಸಗಿ ವ್ಯಕ್ತಿಗಳಿಗೆ ನಿರ್ಮಿತಿ ಕೇಂದ್ರದ ದಾಖಲೆಗಳನ್ನು ಅನಧಿಕೃತವಾಗಿ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ನಿರ್ಮಿತಿ ಕೇಂದ್ರ ಕಚೇರಿಯಲ್ಲಿ ಅಳವಡಿಸಲಾಗಿರುವ ಎಲ್ಲಾ ಸಿಸಿ ಕ್ಯಾಮೆರಾದಲ್ಲಿ ಈಗಾಗಲೇ ಸೆರೆಯಾಗಿರುವ ದೃಶ್ಯಾವಳಿಗಳನ್ನು ಕಾನೂನು ರೀತಿಯಲ್ಲಿ ಸಂರಕ್ಷಿಸುವಂತೆ ಕೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ