Vande Mataram: ಕಾಂಗ್ರೆಸ್ ಎರಡೇ ಪ್ಯಾರಾ ಹಾಡೋದು: ಸೋನಿಯಾ ವಿರುದ್ಧ RSS ಕುತಂತ್ರ

Published : Aug 19, 2026, 06:37 AM IST
BK Hariprasad

ಸಾರಾಂಶ

ಕಾಂಗ್ರೆಸ್‌ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲ, ನೇಣು ಹಾಕಿದರೂ ಎರಡೇ ಪ್ಯಾರಾ ಹಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಸೋನಿಯಾ ಗಾಂಧಿ ಅವರ ಮೇಲಿನ ಆರೋಪವು ಆರ್‌ಎಸ್‌ಎಸ್‌ನ ಕುತಂತ್ರ ಎಂದು ಅವರು ಆರೋಪಿಸಿದ್ದಾರೆ.

ನವದೆಹಲಿ: ಜೈಲಿಗೆ ಹಾಕಿ, ನೇಣು ಹಾಕಿದ್ರೂ ಕಾಂಗ್ರೆಸ್‌ ಕಾರ್ಯಕ್ರಮಗಳಲ್ಲಿ ನಾವು ‘ವಂದೇ ಮಾತರಂ’ ಗೀತೆಯನ್ನು ಪೂರ್ಣವಾಗಿ ಹಾಡಲ್ಲ, ಎರಡೇ ಪ್ಯಾರಾ ಹಾಡೋದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸೋನಿಯಾ ಗಾಂಧಿ ಅವರು ವಂದೇ ಮಾತರಂಗೆ ಅವಮಾನ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನ ಯಾವ ಕಾರ್ಯಕ್ರಮಗಳಲ್ಲೂ ಪೂರ್ಣ ಗೀತೆ ಹಾಡಲ್ಲ. ನೇಣು ಹಾಕಿದರೂ, ಜೈಲಿಗೆ ಹಾಕಿದರೂ ನಾವು ಹಾಡುವುದು ಎರಡೇ ಪ್ಯಾರಾ ಎಂದರು.

ಜನಗಣಮನ ಗೀತೆಗೆ ಅವಮಾನ

ಬಿಜೆಪಿಯವರು ಹಳೆಯ ಸಿದ್ದಾಂತ ಅನುಸರಿಸುತ್ತಿದ್ದಾರೆ. ರಾಷ್ಟ್ರಗೀತೆ, ರಾಷ್ಟ್ರಚಿಹ್ನೆ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ. ವಂದೇ ಮಾತರಂಗೆ ರಾಷ್ಟ್ರಗೀತೆಯ ಸ್ಥಾನಮಾನ ನೀಡಲು ಕಾನೂನು ಮಾಡಿದ್ದಾರೆ. ವಂದೇ ಮಾತರಂ ಗೀತೆಯನ್ನು ಕಡ್ಡಾಯ ಮಾಡುವ ಮೂಲಕ ಜನಗಣಮನ ಗೀತೆಯನ್ನು ಎರಡನೇ ದರ್ಜೆಗೆ ತರುವ ಪ್ರಯತ್ನ ಮಾಡಿದ್ದಾರೆ. ಆ ಮೂಲಕ ಜನಗಣಮನ ಗೀತೆಗೆ ಅವಮಾನ ಮಾಡಿದ್ದಾರೆ. ನಾವು ವಂದೇ ಮಾತರಂ ವಿರುದ್ಧ ಇಲ್ಲ. ಆದರೆ, ಬಕೀಂ ಚಟರ್ಜಿ ಬರೆದ ಎರಡು ಸಾಲುಗಳನ್ನು ಮಾತ್ರ ನಾವು ಹಾಡುತ್ತೇವೆ ಎಂದರು.

ರಾಜ್ಯದಲ್ಲಿ ಸರ್ಕಾರದ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆ ಹಾಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಸರ್ಕಾರ ಜನರಿಂದ ಆಯ್ಕೆಯಾಗಿದೆ. ಕಾನೂನು ಪಾಲನೆ ಮಾಡಲಿ, ನಮ್ಮ ಆಕ್ಷೇಪವಿಲ್ಲ ಎಂದರು.

ಇದೆ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಬಿ.ಕೆ.ಹರಿಪ್ರಸಾದ್‌, ಬಿಜೆಪಿಯವರು 2024ರ ಮುನ್ನ ಸಂವಿಧಾನ ಬದಲಿಸಲು ಹೊರಟಿದ್ದರು. ಅದಕ್ಕೆ ಜನರು ಸೂಕ್ತ ಉತ್ತರ ಕೊಟ್ಟರು. ಬಿಜೆಪಿಯವರು ಆಜಾದ್ ಹಿಂದ್ ಜಿಂದಾಬಾದ್, ಇಂಕಿಲಾಬ್ ಜಿಂದಾಬಾದ್ ಎಂಬ ಘೋಷಣೆ ಕೂಗುತ್ತಾರಾ? ಎಂದು ಪ್ರಶ್ನಿಸಿದರು.

ಸದಾ ವತ್ಸಲೇ ಏನು ರಾಷ್ಟ್ರಗೀತೆನಾ?

ಆರ್‌ಎಸ್‌ಎಸ್‌ ಹಾಗೂ ಹಿಂದೂ ಮಹಾಸಭಾದ ಚಟುವಟಿಕೆಗಳನ್ನು ಪ್ರಸ್ತಾಪಿಸಿದ ಹರಿಪ್ರಸಾದ್, ಅವರು ತಮ್ಮ ಕಾರ್ಯಕ್ರಮಗಳಲ್ಲಿ ಎಷ್ಟು ಸಾರಿ ರಾಷ್ಟ್ರ‌ಗೀತೆಯನ್ನು ಹಾಡಿದ್ದಾರೆ?. ಅದು ದೇಶದ್ರೋಹದ ಕೆಲಸ ಅಲ್ವಾ?. ಸದಾ ವತ್ಸಲೇ ಏನು ರಾಷ್ಟ್ರಗೀತೆನಾ?. ದೇಶದಲ್ಲಿ ಸೌಹಾರ್ದತೆ ಹಾಳು ಮಾಡುವ ಪ್ರಯತ್ನ ಇದು ಎಂದು ಟೀಕಿಸಿದರು.

ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್‌ ಭವನದಲ್ಲಿ ನಡೆದ ಕಾರ್ಯಕ್ರಮದ ವೇಳೆ ವಂದೇ ಮಾತರಂಗೆ ಸೋನಿಯಾ ಗಾಂಧಿ ಅವಮಾನ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಇದೊಂದು ಆರ್‌ಎಸ್‌ಎಸ್ ಕುತಂತ್ರ. ಸೋನಿಯಾ ಅವರು ಗೀತೆಗೆ ಅವಮಾನ ಮಾಡಿಲ್ಲ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುರ್ಚಿ ಕೇಳಿದ್ರು ಎಂದು ಸಮಜಾಯಿಸಿ ನೀಡಿದರು.

ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿ, ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿಗೆ ಬಂದಿದ್ದೇನೆ. ಎಐಸಿಸಿ ಪ್ರತಿನಿಧಿಗಳು ಜಿಲ್ಲಾವಾರು ಸಭೆ ಮಾಡಿದ್ದಾರೆ. ಸಂಘಟನೆ ಬಗ್ಗೆ ವರದಿ ನೀಡಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡಲು ಬಂದಿದ್ದೇನೆ. ಜಿಲ್ಲಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ ನಡೆಯಲಿದೆ. ಈ ತಿಂಗಳಾಂತ್ಯಕ್ಕೆ ಹೊಸ ಜಿಲ್ಲಾಧ್ಯಕ್ಷರ ನೇಮಕವಾಗಲಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka Latest News Live: Bengaluru - ಸೋಂಕು ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಕ್ಲಾರೆನ್ಸ್ ಶಾಲೆಗೆ ನೋಟಿಸ್‌
ರಾಜ್ಯ ಸರ್ಕಾರದಿಂದ 23 ಲಕ್ಷ ಜನರ ಪಿಂಚಣಿ ಸ್ಥಗಿತ: ಈ ದಾಖಲೆಗಳನ್ನು ಸಲ್ಲಿಸಿ, ಪೆನ್ಷನ್ ಹಣ ಪಡೆಯಿರಿ!