
ಬೆಂಗಳೂರು (ಆ.18): ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ವೃದ್ಧಾಪ್ಯ, ವಿಧವಾ, ವಿಕಲಚೇತನ ಹಾಗೂ ಸಂಧ್ಯಾ ಸುರಕ್ಷಾ ಮಾಸಿಕ ಪಿಂಚಣಿ ಪಡೆಯುತ್ತಿರುವ ಲಕ್ಷಾಂತರ ಬಡ ಫಲಾನುಭವಿಗಳಿಗೆ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದೆ. ನಿಯಮಾನುಸಾರ ಆದಾಯ ಮಿತಿ ಸೇರಿದಂತೆ ಇತರ ಮಾನದಂಡಗಳ ಉಲ್ಲಂಘನೆ ಶಂಕೆಯ ಮೇಲೆ 23.14 ಲಕ್ಷ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ದಾಖಲೆಗಳನ್ನು ಮರುಪರಿಶೀಲಿಸಿ ಅರ್ಹರಿರುವ ಪ್ರತಿಯೊಬ್ಬರಿಗೂ ಮತ್ತೆ ಪಿಂಚಣಿ ಮರುಪಾವತಿ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
ವಿಧಾನಸಭೆಯ ಕಲಾಪದಲ್ಲಿ ಕಾಂಗ್ರೆಸ್ ಶಾಸಕಿ ಎಂ. ರೂಪಕಲಾ ಅವರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಈ ಮಾಹಿತಿ ನೀಡಿದ್ದಾರೆ.
51,720 ಪಿಂಚಣಿಗಳು ಶಾಶ್ವತ ರದ್ದು: ನಿಯಮಬಾಹಿರವಾಗಿ ಪಡೆಯುತ್ತಿದ್ದ 51,720 ಅನರ್ಹ ಫಲಾನುಭವಿಗಳ ಪಿಂಚಣಿಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
23.14 ಲಕ್ಷ ಪಿಂಚಣಿಗಳು ತಾತ್ಕಾಲಿಕ ಸ್ಥಗಿತ: ಆದಾಯ ಮಿತಿ ಹಾಗೂ ಇತರ ಕಾರಣಗಳಿಂದಾಗಿ 23.14 ಲಕ್ಷ ಮಂದಿಯನ್ನು ಸಂದೇಹಾಸ್ಪದ ಫಲಾನುಭವಿಗಳು ಎಂದು ಗುರುತಿಸಿ ಸದ್ಯಕ್ಕೆ ಪಿಂಚಣಿ ಪಾವತಿ ತಡೆಹಿಡಿಯಲಾಗಿದೆ.
ದಾಖಲೆ ಪರಿಶೀಲಿಸಿ ಮರುಸ್ಥಾಪನೆ: ಸ್ಥಗಿತಗೊಂಡಿರುವ ಫಲಾನುಭವಿಗಳ ದಾಖಲೆಗಳನ್ನು ಮರುಪರಿಶೀಲಿಸಿ, ಅವರು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ತಕ್ಷಣವೇ ಪಿಂಚಣಿಯನ್ನು ಪುನರಾರಂಭಿಸಲಾಗುವುದು.
ವಿಕಲಚೇತನರು ಹಾಗೂ ವೃದ್ಧರು ಪಿಂಚಣಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ವಿಶೇಷ ಕ್ರಮ ಕೈಗೊಂಡಿದೆ. ಗ್ರಾಮ ಆಡಳಿತಾಧಿಕಾರಿಗಳು (VAO) ಅಂಗವಿಕಲರು ಹಾಗೂ ವೃದ್ಧ ಫಲಾನುಭವಿಗಳ ಮನೆಗೇ ಖುದ್ದಾಗಿ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ. ದಾಖಲೆಗಳ ತ್ವರಿತ ಪರಿಶೀಲನೆ ನಡೆಸಿ ಅರ್ಹರಿಗೆ ಯಾವುದೇ ಅಡೆತಡೆಯಿಲ್ಲದೆ ಪಿಂಚಣಿ ಮರುಚಾಲನೆಗೆ ಆದ್ಯತೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಮತ್ತೊಂದೆಡೆ, ಸರ್ಕಾರದ ಈ ದಿಢೀರ್ ಕ್ರಮದಿಂದಾಗಿ ಬಡವರು, ವಿಧವೆಯರು, ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷವು ಆಗಸ್ಟ್ 31 ರಂದು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ವಾರ್ಷಿಕ ₹32,000 ಆದಾಯ ಮಿತಿಯ ಬದಲಿಗೆ, ಈ ಹಿಂದಿನಂತೆಯೇ ಬಿಪಿಎಲ್ (BPL) ರೇಷನ್ ಕಾರ್ಡ್ ಅನ್ನೇ ಪ್ರಮುಖ ಮಾನದಂಡವಾಗಿ ಪರಿಗಣಿಸಬೇಕು. ಮರುಪರಿಶೀಲನೆ ಪ್ರಕ್ರಿಯೆಯನ್ನು ಸರಳಗೊಳಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಮಾಡಿಸಬೇಕು. ಈ ಮೂಲಕ ಫಲಾನುಭವಿಗಳು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂದು ಎಸ್‌ಯುಸಿಐ ಮುಖಂಡ ರಾಮಾಂಜನಪ್ಪ ಆಲ್ದಳ್ಳಿ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ