ಮೋದಿ ನರಕ ತೋರಿಸ್ತಿದ್ದಾರೆ : ಅವರು ಕಳಪೆ ಪ್ರಧಾನಿ

By Kannadaprabha NewsFirst Published Jun 12, 2021, 7:35 AM IST
Highlights
  • ನರೇಂದ್ರ ಮೋದಿ ಅವರು ಜನರ ರಕ್ತ ಕುಡಿಯುವ ತಿಗಣೆಯಾಗಿ ನರಕ ತೋರುತ್ತಿದ್ದಾರೆ. 
  • ಕೊರೋನಾ ಸಂಕಷ್ಟದಲ್ಲಿರುವ ಜನರನ್ನು ಪೆಟ್ರೋಲ್‌-ಡೀಸೆಲ್‌ ಬೆಲೆ ಹೆಚ್ಚಳದ ಮೂಲಕ ಸುಲಿಗೆ 
  • ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ  ಕಿಡಿ

ಬೆಂಗಳೂರು (ಜೂ.12):   ಅಚ್ಛೇ ದಿನ್‌ ಭರವಸೆ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನರ ರಕ್ತ ಕುಡಿಯುವ ತಿಗಣೆಯಾಗಿ ನರಕ ತೋರುತ್ತಿದ್ದಾರೆ. ಕೊರೋನಾ ಸಂಕಷ್ಟದಲ್ಲಿರುವ ಜನರನ್ನು ಪೆಟ್ರೋಲ್‌-ಡೀಸೆಲ್‌ ಬೆಲೆ ಹೆಚ್ಚಳದ ಮೂಲಕ ಸುಲಿಗೆ ಮಾಡುತ್ತಿರುವ ನರೇಂದ್ರ ಮೋದಿಗೆ ನಾಚಿಕೆ ಆಗಬೇಕು ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.

ಪೆಟ್ರೋಲ್‌ ಬೆಲೆ 100 ರು. ಗಡಿ ದಾಟಿದ ಹಿನ್ನೆಲೆಯಲ್ಲಿ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್‌ ಹಮ್ಮಿಕೊಂಡಿರುವ ‘100 ನಾಟೌಟ್‌’ ಪ್ರತಿಭಟನಾ ಅಭಿಯಾನದಲ್ಲಿ ಭಾಗವಹಿಸಿ ಶುಕ್ರವಾರ ಮಾತನಾಡಿದ ಅವರು, ಮೋದಿ ಅವರೊಬ್ಬ ಕಳಪೆ ಪ್ರಧಾನಮಂತ್ರಿ ಎಂದು ಟೀಕಿಸಿದರು.

'ಗಾರು' ಎಂದ ಪ್ರತಾಪ್‌ಗೆ ಸಿದ್ದರಾಮಯ್ಯ ಕೊಟ್ಟ ರಿಯಾಕ್ಷನ್!

ಅಗತ್ಯ ವಸ್ತುಗಳು, ಅಡುಗೆ ಅನಿಲ, ಪೆಟ್ರೋಲ್‌-ಡೀಸೆಲ್‌ ಎಲ್ಲ ಬೆಲೆ ಹೆಚ್ಚಾಗುತ್ತಿದೆ. ಪೆಟ್ರೋಲ್‌, ಡೀಸೆಲ್‌ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುವ ಮೂಲಕ ಮೋದಿ ಜನರ ಸುಲಿಗೆ ಮಾಡುತ್ತಿದ್ದಾರೆ. ಬೈಕ್‌ನಲ್ಲಿ ಓಡಾಡುವ ಯುವಕರು ಅಚ್ಛೇ ದಿನ್‌ ಬರುತ್ತದೆ ಎನ್ನುತ್ತಿದ್ದರು. ಈಗ ಅವರೇ ಶಾಪ ಹಾಕುತ್ತಿದ್ದಾರೆ ಎಂದರು.

ರಾವಣನ ಶ್ರೀಲಂಕಾದಲ್ಲಿ ಪೆಟ್ರೋಲ್‌ ದರ 59 ರು., ರಾಮನ ಭಾರತದಲ್ಲಿ ಬೆಲೆ 100 ರು. ಇದೆ. ರಾವಣ ರಾಜ್ಯ ಬಡವರ ಪರವಾಗಿದೆ. ರಾಮ ರಾಜ್ಯದಲ್ಲಿ ಬಡವರ ರಕ್ತ ಹೀರಲಾಗುತ್ತಿದೆ. ರಾಮನ ಹೆಸರು ಹೇಳುವ ಬಿಜೆಪಿಯವರಿಗೆ ಸಾಮಾನ್ಯ ಜನರ ಕಷ್ಟಅರ್ಥ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಮೋದಿಯೇ ಈ ಹಿಂದೆ ಬೆಲೆ ಏರಿಕೆಯನ್ನು ವಿರೋಧಿಸಿದ್ದರು. ಸಾಮಾನ್ಯ ಜನರು ಸಣ್ಣ ವಾಹನ ಇಟ್ಟುಕೊಂಡಿರುತ್ತಾರೆ. ಅವರ ಪರಿಸ್ಥಿತಿ ಏನು? ಲಾಕ್‌ ಡೌನ್‌ನಿಂದ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉತ್ಪಾದನೆ ನಿಂತು ಹೋಗಿದೆ. ಇಂಧನ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆ ಆಗುತ್ತದೆ. ಕೇಂದ್ರ ಸರ್ಕಾರ ಇಂತಹ ಸಂಧರ್ಭದಲ್ಲೂ ಕಟುಕತನದಿಂದ ವರ್ತಿಸಿದರೆ ಬಡವರು ಬದುಕುವುದು ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.

click me!