ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ (Mookambika Temple) ಟಿಪ್ಪು ಹೆಸರಿನಲ್ಲಿ ನಡೆಯುತ್ತಿರೋ ಸಲಾಂ ಆರತಿ ನಿಲ್ಲಿಸಲು ವಿಎಚ್ ಪಿ ಮನವಿ ಕೊಟ್ಟ ವಿಚಾರಕ್ಕೆ ಸಂಬಂಧಿಸಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ (UT Khadar) ಮಂಗಳೂರಿನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ (Mookambika Temple) ಟಿಪ್ಪು ಹೆಸರಿನಲ್ಲಿ ನಡೆಯುತ್ತಿರೋ ಸಲಾಂ ಆರತಿ ನಿಲ್ಲಿಸಲು ವಿಎಚ್ ಪಿ ಮನವಿ ಕೊಟ್ಟ ವಿಚಾರಕ್ಕೆ ಸಂಬಂಧಿಸಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ (UT Khadar) ಮಂಗಳೂರಿನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯು.ಟಿ.ಖಾದರ್, ಇತಿಹಾಸ ಪ್ರಸಿದ್ದ ದೇವಸ್ಥಾನದ ಪರಂಪರೆ ಬಗ್ಗೆ ಆಡಳಿತ ಮಂಡಳಿ ಇದೆ. ರಸ್ತೆ ಬದಿಯಲ್ಲಿ ನಿಂತವರು ಇದೆಲ್ಲಾ ಮಾತನಾಡಿದ್ರೆ ಆಗಲ್ಲ. ಧಾರ್ಮಿಕ ಪರಂಪರೆ ಅರಿತ ಸ್ವಾಮೀಜಿ, ಗುರುಗಳು ಇದಾರೆ. ಅದು ಬೇಕಾ ಬೇಡ್ವಾ ಎನ್ನುವುದು ಆಡಳಿತ ಮಂಡಳಿಗೆ ಬಿಟ್ಟ ವಿಚಾರ. ಹೆಚ್ಚು ಕಡಿಮೆ ಇದ್ದರೆ ಅದನ್ನ ದೇವರು ನೋಡಿಕೊಳ್ತಾರೆ. ನಾವು ಮನುಷ್ಯರು ಕೊಟ್ರೆ ಎಷ್ಟು ಕೊಡಬಹುದು, ದೇವರು ಕೊಟ್ಟರೆ ಸಹಿಸಲಾರದಷ್ಟು ಕೊಡ್ತಾರೆ.
ಈ ಬಗ್ಗೆ ಆಡಳಿತ ಮತ್ತು ದೇವಸ್ಥಾನದ ಸಮಿತಿ ತೀರ್ಮಾನಿಸಲಿ. ಅದು ಬಿಟ್ಟು ಸಂಸ್ಕೃತಿ, ಇತಿಹಾಸದ ಬಗ್ಗೆ ಸುಮ್ಮನೆ ಮಾತನಾಡೋದು ಶೋಭೆ ತರುವಂಥದ್ದಲ್ಲ ಎಂದು ಹೇಳಿದ್ದಾರೆ. ಇನ್ನು ಪಠ್ಯ ಪುಸ್ತಕದಲ್ಲಿ ಟಿಪ್ಪು ವೈಭವೀಕರಣ ಕೈ ಬಿಡುವ ವಿಚಾರ ಸಂಬಂಧಿಸಿ ಮಾತನಾಡಿದ ಖಾದರ್, ಟಿಪ್ಪು ಸುಲ್ತಾನ್ ಚರಿತ್ರೆ ಪಠ್ಯ ಪುಸ್ತಕ ಮಾತ್ರವಲ್ಲ, ವಿಶ್ವದ ಎಲ್ಲಾ ಮ್ಯೂಸಿಯಂನಲ್ಲಿ ಇದೆ. ಇಂಗ್ಲೆಂಡ್, ಫ್ರಾನ್ಸ್ ಎಲ್ಲಾ ಕಡೆ ಟಿಪ್ಪು ಇತಿಹಾಸ ಇದೆ. ಅದನ್ನ ಯಾರೂ ಬದಲಾವಣೆ ಮಾಡಲು ಆಗಲ್ಲ. ಟಿಪ್ಪು ಇತಿಹಾಸ ರಾಜ್ಯದಲ್ಲೂ ಅನೇಕ ಕಡೆ ಕಣ್ಣ ಮುಂದೆ ಕಾಣುತ್ತೆ. ಇದು ಸರ್ಕಾರದ ಮನೋಭಾವ ತಿಳಿಸುವ ಕೆಲಸ ಅಷ್ಟೇ.ಬಿಜೆಪಿ ಸರ್ಕಾರ ಮಕ್ಕಳಿಗಾಗಿ ಶಾಲೆ, ಕಾಲೇಜು ತೆರೆದಿಲ್ಲ.ಶಿಕ್ಷಕರ ಸಂಬಂಧಿಸಿದ ಯಾವುದೇ ಅಭಿವೃದ್ಧಿಯೂ ಈ ಸರ್ಕಾರ ಮಾಡಿಲ್ಲ ಎಂದರು.
'ಸಮವಸ್ತ್ರ ನಿಯಮ ಗೌರವಿಸಿ ಪರೀಕ್ಷೆ ಬರೆಯಬೇಕು'
ನಾಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಿಜಾಬ್ ನಿರ್ಬಂಧ ಆದೇಶ ವಿಚಾರ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದು, ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಲಕ್ಷಾಂತರ ವಿದ್ಯಾರ್ಥಿಗಳು ಹಾಜರಾಗ್ತಿದಾರೆ. ಎಲ್ಲರೂ ನೆಮ್ಮದಿಯಿಂದ, ಮಾನಸಿಕ ಒತ್ತಡ ಇಲ್ಲದೇ ಪರೀಕ್ಷೆ ಬರೆಯಿರಿ. ಸರ್ಕಾರ ಈಗಾಗಲೇ ಹಿಜಾಬ್ ಕುರಿತು ಆದೇಶ ಮಾಡಿದೆ. ಹೆಣ್ಮಕ್ಕಳ ಶಿಕ್ಷಣಕ್ಕೆ ಒತ್ತು ಕೂಡೋದು ಸರ್ಕಾರದ ಜವಾಬ್ದಾರಿ. ಹೀಗಾಗಿ ಅವರಿಗೆ ಮಾನಸಿಕ ಒತ್ತಡ ಆಗದಂತೆ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು. ಅದೇ ರೀತಿ ಹೆತ್ತವರು ಕೂಡ ಈ ಬಗ್ಗೆ ಅಗತ್ಯ ಗಮನ ಹರಿಸಬೇಕು. ಸರ್ಕಾರದ ಆದೇಶದಂತೆ ಸಮವಸ್ತ್ರ ನಿಯಮ ಗೌರವಿಸಿ ಪರೀಕ್ಷೆ ಬರೆಯಬೇಕು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಲಿನ ನಿಯಮ ಪಾಲಿಸಬೇಕು. ಖಾಸಗಿಯವರು ಶಿಕ್ಷಣಕ್ಕೆ ಒತ್ತು ಕೊಟ್ಟು ಎಲ್ಲವನ್ನೂ ನಿಭಾಯಿಸಲಿ. ಎಲ್ಲಾ ಧಾರ್ಮಿಕ ಗುರುಗಳು ಈ ಬಗ್ಗೆ ಪೂರಕವಾಗಿ ಮಾತನಾಡಿದ್ದಾರೆ. ಸಂವಿಧಾನಬದ್ದ ಹಕ್ಕಿನ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಇದಕ್ಕೆ ನ್ಯಾಯ ಸಿಗಬಹುದು ಎಂಬ ವಿಶ್ವಾಸ ಇದೆ. ವಿದ್ಯಾರ್ಥಿಗಳು ಈ ಬಗ್ಗೆ ಚಿಂತೆ ಮಾಡಬಾರದು, ಪರೀಕ್ಷೆ ಅಷ್ಟೇ ಬರೆಯಲಿ. ನನ್ನ ಮಗಳಿಗಾದ್ರೂ ನಾನು ಇದನ್ನೇ ಹೇಳುತ್ತೇನೆ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಮಾಡಿದ ಆದೇಶ ಗೌರವಿಸಿ. ಆ ಆದೇಶ ಗೌರವಿಸಿ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯಿರಿ. ಹೆತ್ತವರು ಕೂಡ ಈ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಸಹಕಾರ ನೀಡಿ ಎಂದರು.
'ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯಾರಾದ್ರೂ ಸ್ವಾಮೀಜಿ ಪ್ರತಿಭಟನೆ ಮಾಡಿದ್ರಾ?'
ಸ್ವಾಮೀಜಿಗಳ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಸಿದ್ದರಾಮಯ್ಯನವರು ಎಲ್ಲಾ ಧರ್ಮದ ಗುರುಗಳಿಗೆ ಗೌರವ ಕೊಡ್ತಾ ಇದಾರೆ. ಆದರೆ ಬಿಜೆಪಿಯವರು ಹೇಳಿಕೆ ತಿರುಚಿ ಅಪಪ್ರಚಾರ ಮಾಡ್ತಿದಾರೆ. ಎಲ್ಲಾ ಸ್ವಾಮಿಗಳು ಸಿದ್ದರಾಮಯ್ಯನವರ ಜೊತೆ ಆತ್ಮೀಯತೆಯಿಂದ ಇದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯಾರಾದ್ರೂ ಸ್ವಾಮೀಜಿ ಪ್ರತಿಭಟನೆ ಮಾಡಿದ್ರಾ?. ಮೂಢನಂಬಿಕೆ ಕಾಯ್ದೆ ಕೂಡ ಆವತ್ತು ಸ್ವಾಮೀಜಿಗಳ ಮನವಿ ಮೇರೆಗೆ ಸಿದ್ದರಾಮಯ್ಯ ಕೈ ಬಿಟ್ಟಿದ್ದರು. ಆದ್ರೆ ಬಿಜೆಪಿ ಸರ್ಕಾರ ಯಾವುದಕ್ಕೂ ಬೆಲೆ ಕೊಡದೇ ಆ ಬಿಲ್ ಜಾರಿ ಮಾಡಿತ್ತು. ಬಿಜೆಪಿ ಸ್ವಾಮೀಜಿಯವರ ಬೇಡಿಕೆ ಮತ್ತು ಜನರ ಭಾವನೆ ಅರ್ಥ ಮಾಡಿಕೊಳ್ಳಲ್ಲ. ಸಿದ್ದರಾಮಯ್ಯ ದೇವಸ್ಥಾನದ ಅರ್ಚಕರ ಗೌರವಧನ ಹೆಚ್ಚಳ ಮಾಡಿದ್ರು. ಆದ್ರೆ ಬಿಜೆಪಿ ಈವರೆಗೆ ಆ ಕೆಲಸ ಮಾಡಲೇ ಇಲ್ಲ. ಅದನ್ನ ಬಿಟ್ಟು ಸುಮ್ಮನೇ ಜನರ ಮಧ್ಯೆ ಬಿಜೆಪಿ ಗೊಂದಲ ಸೃಷ್ಟಿಸ್ತಿದೆ. ಈ ಮೂಲಕ ಜನರನ್ನು ದಿಕ್ಕು ತಪ್ಪಿಸೋ ಕೆಲಸ ಬಿಜೆಪಿ ಮಾಡ್ತಿದೆ ಎಂದರು.
- ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು