ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಪತ್ರದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಬೆಂಗಳೂರು [ಜ.31]: ನೆರೆ ಹಾಗೂ ಬರದಿಂದ ನಲುಗಿರುವ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು. ಪ್ರಸ್ತುತ ಬೆಂಬಲ ವ್ಯಾಪ್ತಿಗೆ ತಂದಿರುವ ಬೆಳೆಗಳಲ್ಲದೆ ಕಡಲೆ, ಗೋಧಿ, ಸೂರ್ಯಕಾಂತಿ, ಹೆಸರು, ಹತ್ತಿ, ಉದ್ದು, ಕುಸುಬೆ ಮತ್ತಿತರ ಬೆಳೆಗಳನ್ನೂ ಬೆಂಬಲ ಬೆಲ ವ್ಯಾಪ್ತಿಗೆ ತರಬೇಕು ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕಳೆದ ವರ್ಷದ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಸುರಿದ ಮಳೆಯಿಂದ 22ಕ್ಕೂ ಹೆಚ್ಚು ಜಿಲ್ಲೆಗಳ ಜನರ ಬದುಕು ಛಿದ್ರಗೊಂಡಿದೆ. ನೆರೆಯಿಂದಾಗಿ ಮುಂಗಾರಿನಲ್ಲಿ ರೈತರು ಬಿತ್ತನೆ ಮಾಡಿದ್ದ ಜಮೀನುಗಳಲ್ಲಿ ತೀವ್ರ ಬೆಳೆ ಹಾನಿಯಾಗಿದೆ. ಹೀಗಿದ್ದರೂ ಕಷ್ಟಪಟ್ಟು ಉಳಿಸಿಕೊಂಡಿರುವ ಬೆಳೆಗಳಿಗೂ ಬೆಲೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
undefined
ಬಿಎಸ್‌ವೈ ದೆಹಲಿ ಬ್ರೇಕಿಂಗ್, ಯಾರಿಗೆಲ್ಲ ಶುಭ ಶುಕ್ರವಾರ?...
ಪ್ರಸ್ತುತ ಬೆಂಬಲ ಬೆಲೆ ಯೋಜನೆಯಡಿ ಭತ್ತ, ಜೋಳ, ರಾಗಿ, ತೊಗರಿ, ಶೇಂಗಾ, ಸೋಯಾಬೀನ್ ಬೆಳೆಗಳಿಗೆ ಮಾತ್ರ ಬೆಂಬಲ ನೀಡಿ ಖರೀದಿಸಲು ತೀರ್ಮಾನಿಸಲಾಗಿದೆ. ಇವುಗಳಿಗೂ ಸರ್ಕಾರ ನಿಗದಿ ಮಾಡಿರುವ ಬೆಂಬಲ ತುಂಬಾ ಕಡಿಮೆ. ಬೆಂಬಲ ಬೆಲೆಗೂ ರೈತ ಬೆಳೆ ಬೆಳೆಯಲು ವೆಚ್ಚ ಮಾಡಿರುವ ಮೊತ್ತಕ್ಕೂ ಹೋಲಿಕೆ ಮಾಡಿದರೆ ರೈತರಿಗೆ ಯಾವುದೇ ಲಾಭ ಉಂಟಾಗುವುದಿಲ್ಲ. ಅಲ್ಲದೆ, ನೆರೆ ಹಾಗೂ ಬರಪೀಡಿತ ಪ್ರದೇಶಗಳಲ್ಲಿ ಪ್ರಮುಖವಾಗಿ ಬೆಳೆಯುವ ಕಡಲೆ, ಗೋಧಿ, ಸೂರ್ಯಕಾಂತಿ, ಹೆಸರು, ಹತ್ತಿ, ಉದ್ದು, ಕುಸುಬೆ ಮತ್ತಿತರ ಬೆಳೆಗಳನ್ನು ಬೆಂಬಲ ಬೆಲೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದು ಅನ್ಯಾಯವಾಗಿದ್ದು, ಈ ಬೆಳೆಗಳಿಗೂ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ, ಡಾ.ಸ್ವಾಮಿನಾಥನ್ ವರದಿ ಪ್ರಕಾರ ರೈತರ ಖರ್ಚು ಕಳೆದು ಶೇ.50 ರಷ್ಟಾದರೂ ರೈತರಿಗೆ ಲಾಭಾಂಶ ಇರಬೇಕು. ಆದರೆ, ಕೇಂದ್ರ ಸರ್ಕಾರ ಈವರೆಗೂ ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡಿಲ್ಲ. ಹೀಗಾಗಿ ಕೂಡಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಬೇಕು ಎಂದು ಆಗ್ರಹಿಸಿದರು.
ಜನವರಿ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ