ಬೆಂಗಳೂರು (ಆ.11): ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಿದರೆ ಬಿಜೆಪಿ ಅವಧಿಯಲ್ಲಿ ವಿವಿಧ ಯೋಜನೆಗಳಿಗೆ ಇಟ್ಟಿರುವ ಹೆಸರುಗಳಿಗೆ ಮಸಿ ಬಳಿದು ಹೋರಾಟ ಮಾಡುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯವರು ಹೆಸರು ಇಡಬೇಕಾದರೆ ಸ್ವತಃ ಯೋಜನೆ ರೂಪಿಸಿ ಹೆಸರು ಇಟ್ಟುಕೊಳ್ಳಲಿ. ಇಂದಿರಾಗಾಂಧಿ ಅವರಿಗೆ ಅಗೌರವ ತೋರಲು ಯತ್ನಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ದ್ವೇಷದ ಸಂಸ್ಕೃತಿ ಬಿತ್ತಿದರೆ ಮುಂದೆ ನಮ್ಮ ಸರ್ಕಾರ ಬಂದಾಗ ಬಿಜೆಪಿಯವರು ಇಟ್ಟಹೆಸರನ್ನು ನಾವೂ ಬದಲಾವಣೆ ಮಾಡುವ ಕಾಲ ಬರಲಿದೆ ಎಂದು ಎಚ್ಚರಿಸಿದರು. ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಇಂದಿರಾ ಗಾಂಧಿ ಹೆಸರಿನಲ್ಲಿ ಬಡವರಿಗಾಗಿ ಕ್ಯಾಂಟೀನ್ ಮಾಡಿದ್ದೆವು. ರಾಷ್ಟ್ರಕ್ಕಾಗಿ ಪ್ರಾಣ ಕಳೆದುಕೊಂಡ ಇಂದಿರಾಗಾಂಧಿ ಹೆಸರಿನ ಬಗ್ಗೆ ಸಿ.ಟಿ. ರವಿ ಅಪಸ್ವರ ತೆಗೆದಿದ್ದಾರೆ. ಬಿಜೆಪಿಯವರು ಅಂತಹ ಕ್ರಮಕ್ಕೆ ಮುಂದಾದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದರು.
ಕೆಲವು ಮೇಲ್ಸೇತುವೆಗಳಿಗೆ ಬಿಜೆಪಿ ನಾಯಕರ ಹೆಸರಿಟ್ಟಿದ್ದಾರೆ. ದೀನದಯಾಳ್ ಉಪಾಧ್ಯಾಯ ಹೆಸರನ್ನು ಯಶವಂತಪುರ ಮೇಲ್ಸೇತುವೆಗೆ ಇಟ್ಟಿದ್ದಾರೆ. ಬಸ್ ನಿಲ್ದಾಣಕ್ಕೆ ವಾಜಪೇಯಿ ಹೆಸರಿಟ್ಟಿದ್ದಾರೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿದರೆ ಬಿಜೆಪಿಯವರು ನಾಮಕರಣ ಮಾಡಿದ ಈ ಎಲ್ಲಾ ಬೋರ್ಡ್‌ಗಳಿಗೆ ಮಸಿ ಬಳಿಯುತ್ತೇವೆ. ಬಿಜೆಪಿಯವರಿಗೆ ಅವರದ್ದೇ ದಾಟಿಯಲ್ಲಿ ಉತ್ತರಿಸುತ್ತೇವೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜವಾಬ್ದಾರಿ ಮರೆತು ಹೇಳಿಕೆ ನೀಡಬಾರದು ಎಂದು ಕಿಡಿಕಾರಿದರು.
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಚರ್ಚೆ: ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಅಶೋಕ್
ರಾಜೀವ್‌ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಿಸಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದ ಅವರು ರಾಜೀವ್‌ಗಾಂಧಿ ಸಹ ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಅಂತಹವರ ಹೆಸರು ಬದಲಿಸಿರುವುದು ಸರಿಯಲ್ಲ. ಧ್ಯಾನ್‌ಚಂದ್ ಅವರ ಹೆಸರನ್ನು ಬೇರೆ ಒಂದು ಉತ್ತಮ ಯೋಜನೆ ಮಾಡಿ ನಾಮಕರಣ ಮಾಡಬಹುದಿತ್ತು ಎಂದರು.
ಸ್ಟೇಡಿಯಂಗೆ ಮೋದಿ ಹೆಸರೇಕೆ?
ಗುಜರಾತ್‌ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂ ಅಂತ ಹೆಸರಿಟ್ಟಿದ್ದಾರೆ. ಕ್ರೀಡಾ ಪ್ರಶಸ್ತಿಗೆ ರಾಜೀವ್‌ಗಾಂಧಿ ಹೆಸರು ಆಕ್ಷೇಪಿಸುವವರು ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರು ಏಕೆ ಎಂಬುದನ್ನು ಉತ್ತರಿಸಬೇಕು. ಮೋದಿ ಏನು ದೊಡ್ಡ ಆಟಗಾರರೇ? ನೂರು ಕ್ಯಾಚ್ ಹಿಡಿದಿದ್ದಾರಾ? ಸೆಂಚುರಿ ಬಾರಿಸಿದ್ದಾರಾ? ಎಂದು ಪ್ರಶ್ನಿಸಿದರು.
ವಿಧಾನಪರಿಷತ್‌ನ ಮುಖ್ಯ ಸಚೇತಕ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹಾಜರಿದ್ದರು.