85,000 ‘ಶ್ರೀಮಂತರ' ಬಿಪಿಎಲ್‌ ಕಾರ್ಡ್‌ ರದ್ದು..!

By Kannadaprabha News  |  First Published Aug 11, 2021, 7:10 AM IST

*  ತೆರಿಗೆ ಪಾವತಿ ಮಾಡುತ್ತಿದ್ದರೂ ಪಡಿತರ ಚೀಟಿ ಪಡೆದಿದ್ದವರಿಗೆ ಶಾಕ್‌
* ಆದಾಯ ತೆರಿಗೆ ಇಲಾಖೆ ನೆರವಿನೊಂದಿಗೆ ಆಹಾರ ಇಲಾಖೆ ಶಿಸ್ತು ಕ್ರಮ
* ಕಾರ್ಡು ಹಿಂದಿರುಗಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದ ಇಲಾಖೆ 
 


ಸಂಪತ್‌ ತರೀಕೆರೆ

ಬೆಂಗಳೂರು(ಆ.11): ಅಕ್ರಮವಾಗಿ ಪಡೆದಿದ್ದ ಬಿಪಿಎಲ್‌ ಮತ್ತು ಅಂತ್ಯೋದಯ ಪಡಿತರ ಚೀಟಿ ಹಿಂದಿರುಗಿಸದ 85,107 ಮಂದಿ ತೆರಿಗೆ ಪಾವತಿದಾರರನ್ನು ಪತ್ತೆ ಮಾಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಲ್ಲರ ಪಡಿತರ ಚೀಟಿಗಳನ್ನು ರದ್ದು ಪಡಿಸಿದೆ.

Tap to resize

Latest Videos

undefined

ಅನರ್ಹರು ಸುಳ್ಳು ಮಾಹಿತಿ ನೀಡಿ ಪಡೆದಿರುವ ಅಂತ್ಯೋದಯ ಮತ್ತು ಬಿಪಿಎಲ್‌ ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಸರ್ಕಾರ ನಾಲ್ಕೈದು ಬಾರಿ ಅವಕಾಶ ನೀಡಿತ್ತು. ಆದರೂ ಸಹ ಹಲವರು ಕಾರ್ಡುಗಳನ್ನು ವಾಪಸ್‌ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ತೆರಿಗೆ ಪಾವತಿ ಮಾಡುತ್ತಿರುವವರ ದತ್ತಾಂಶ ನೀಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೋರಿತ್ತು.

ಆದಾಯ ತೆರಿಗೆ ಇಲಾಖೆಯಿಂದ ತೆರಿಗೆ ಪಾವತಿಸುತ್ತಿರುವವರ ಮಾಹಿತಿ ಪಡೆದ ಆಹಾರ ಇಲಾಖೆ ಅವರ ಆಧಾರ್‌ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ಲಿಂಕ್‌ ಆಗಿದ್ದ (ಇಕೆವೈಸಿ) ಆಧಾರ್‌ ಸಂಖ್ಯೆಗೆ ಜೋಡಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸುಮಾರು 85,204 ಮಂದಿ ತೆರಿಗೆ ಪಾವತಿದಾರರಾಗಿದ್ದು ಬಿಪಿಎಲ್‌ ಮತ್ತು ಅಂತ್ಯೋದಯ ಚೀಟಿ ಪಡೆದಿರುವುದು ಕಂಡು ಬಂದಿತ್ತು. ಜೊತೆಗೆ ತೆರಿಗೆ ಪಾವತಿದಾರರ ಮಾಹಿತಿಯನ್ನು ಆಯಾ ಜಿಲ್ಲೆಗಳಿಗೆ ಕಳುಹಿಸಿ ಪರಿಶೀಲಿಸಿದ್ದು 85,107 ಮಂದಿಯ ಪಡಿತರ ಕಾರ್ಡುಗಳನ್ನು ಇಲಾಖೆ ರದ್ದು ಮಾಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತೆ ಶಾಮ್ಲಾ ಇಕ್ಬಾಲ್‌ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಅಕ್ರಮ ಬಿಪಿಎಲ್ ಕುಟುಂಬಗಳ ಶಿಕಾರಿ ವರದಿ ಫಲಶೃತಿ, ಕಾರ್ಡ್ ವಾಪಸ್ ಮಾಡಲು ಡೆಡ್‌ಲೈನ್ ಫಿಕ್ಸ್..!

200 ಕೋಟಿ ರು.ಹೊರೆ: ಕೇಂದ್ರ ಸರ್ಕಾರ ಯೂನಿಟ್‌ ಆಧಾರದಲ್ಲಿ ಆಹಾರ ಧಾನ್ಯಗಳನ್ನು 4.04 ಕೋಟಿ ಜನರಿಗೆ ಮಾತ್ರ ಕೊಡುತ್ತಿದೆ. ಆದರೆ ರಾಜ್ಯಸರ್ಕಾರ ಬಿಪಿಎಲ್‌, ಅಂತ್ಯೋದಯ ಫಲಾನುಭವಿಗಳಾದ 4.18 ಕೋಟಿ ಜನಸಂಖ್ಯೆಗೆ ಆಹಾರ ಧಾನ್ಯ ಹಂಚಿಕೆ ಮಾಡುತ್ತಿದೆ. ಅಂದರೆ ಕೇಂದ್ರ ಸರ್ಕಾರ ನಿಗದಿ ಪಡಿಸಿದ್ದಕ್ಕಿಂತ 14 ಲಕ್ಷ ಜನರಿಗೆ ಹೆಚ್ಚುವರಿಯಾಗಿ ಸ್ವಂತ ಖರ್ಚಿನಲ್ಲಿ ಪಡಿತರ ವಿತರಣೆಯನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಅದು ರಾಜ್ಯ ಸರ್ಕಾರಕ್ಕೆ ಹೊರೆಯಾಗುತ್ತಿದ್ದು, ಹೆಚ್ಚುವರಿಯಾಗಿ ಸುಳ್ಳು ಮಾಹಿತಿ ನೀಡಿ ಪಡೆದಿರುವ 14 ಲಕ್ಷ ಜನರನ್ನು ಕಡಿಮೆ ಮಾಡಬೇಕಿದೆ. ಹೆಚ್ಚುವರಿ ಫಲಾನುಭವಿಗಳಿಗೆ ಪಡಿತರ ಆಹಾರ ಧಾನ್ಯ ಖರೀದಿ ಮಾಡಿ ವಿತರಿಸಲು ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ 200 ಕೋಟಿ ರು.ಗಳಿಗೂ ಹೆಚ್ಚು ಹೊರೆ ಬೀಳುತ್ತಿದೆ.

36268 ಕಾರ್ಡ್‌ ವಾಪಸ್‌: 

ಅನರ್ಹರು ಪಡೆದುಕೊಂಡಿರುವ ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡುಗಳನ್ನು ಹಿಂದಿರುಗಿಸುವಂತೆ ಇಲಾಖೆ ಸೂಚಿಸತ್ತು. ಜೂ.30ರೊಳಗೆ ಅಂತಹ ಕಾರ್ಡು ಹಿಂದಿರುಗಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ 1360 ಅಂತ್ಯೋದಯ ಹಾಗೂ 34,908 ಬಿಪಿಎಲ್‌ ಕಾರ್ಡುಗಳು ಸೇರಿದಂತೆ 36,268 ಕಾರ್ಡುಗಳನ್ನು ಪಡಿತರ ಚೀಟಿದಾರರು ಸ್ವಯಂ ಪ್ರೇರಿತರಾಗಿ ವಾಪಸ್‌ ನೀಡಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತೆ ಶಾಮ್ಲಾ ಇಕ್ಬಾಲ್‌ ಮಾಹಿತಿ ನೀಡಿದರು.

ಬಿಪಿಎಲ್‌ ಕಾರ್ಡು ಹೊಂದಿದ ಕುಟುಂಬದಲ್ಲಿ ತೆರಿಗೆ ಪಾವತಿಸುವ ಮಗ ಅಥವಾ ಮಗಳಿದ್ದು ವೈಯಕ್ತಿಕ ಕಾರಣದಿಂದ ಅವರು ಕುಟುಂಬದಿಂದ ಬೇರ್ಪಟ್ಟಿದ್ದರೆ ಕೂಡಲೇ ಪಡಿತರದಿಂದ ಅವರ ಹೆಸರನ್ನು ತೆಗೆದು ಹಾಕಬೇಕಿತ್ತು. ಆದರೆ ಹೆಸರು ತೆಗೆಯದಿದ್ದ ಕಾರಣ ಕಾರ್ಡು ರದ್ದಾಗುವಂತಾಗಿದೆ. ಈ ಬಗ್ಗೆ ಕುಟುಂಬಸ್ಥರು ಅರ್ಜಿ ಸಲ್ಲಿಸಿದರೆ ಪರಿಶೀಲಿಸಲಾಗುವುದು ಎಂದು ಅಹಾರ ಇಲಾಖೆ ಆಯುಕ್ತೆ ಶಾಮ್ಲಾ ಇಕ್ಬಾಲ್‌ ತಿಳಿಸಿದ್ದಾರೆ. 

ಜಿಲ್ಲಾವಾರು ವಿವರ

ಬೆಂಗಳೂರು- 14,366, ಬೆಂಗಳೂರು ಪಶ್ಚಿಮ- 4232, ಶಿವಮೊಗ್ಗ- 4117, ಮಂಡ್ಯ- 3396, ಗದಗ- 3490, ಬಾಗಲಕೋಟೆ- 1295, ಬಳ್ಳಾರಿ- 2584, ಬೆಂಗಳೂರು ಪೂರ್ವ 1423, ಬೆಂಗಳೂರು ಉತ್ತರ- 1950, ಬೆಂಗಳೂರು ದಕ್ಷಿಣ- 2712, ಬೆಳಗಾವಿ- 3273, ಬೆಂಗಳೂರು ಗ್ರಾಮಾಂತರ- 3235, ಬೀದರ್‌- 1456, ಚಾಮರಾಜನಗರ- 797, ಚಿಕ್ಕಬಳ್ಳಾಪುರ- 2465, ಚಿಕ್ಕಮಗಳೂರು- 1676, ಚಿತ್ರದುರ್ಗ- 1640, ದಕ್ಷಿಣ ಕನ್ನಡ-- 1595, ದಾವಣಗೆರೆ- 2049, ಧಾರವಾಡ- 1943, ಹಾಸನ- 3490, ಹಾವೇರಿ- 1052, ಕಲಬುರಗಿ- 2071, ಕೊಡಗು- 541, ಕೋಲಾರ 3344,ಕೊಪ್ಪಳ- 1092, ಮೈಸೂರು- 3691, ರಾಯಚೂರು- 1856, ರಾಮನಗರ- 3081, ಶಿವಮೊಗ್ಗ- 2154, ಉಡುಪಿ- 2671, ಉತ್ತರ ಕನ್ನಡ- 1167, ವಿಜಯಪುರ- 1229, ಯಾದಗಿರಿ- 710 ಹೀಗೆ ಒಟ್ಟು 85,107 ಪಡಿತರ ಕಾರ್ಡುಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಇಲಾಖೆ ದಾಖಲೆ ಮಾಹಿತಿ ನೀಡಿದೆ.

ಶ್ರೀಮಂತರ ಪತ್ತೆ ಹೇಗೆ?

ಆದಾಯ ತೆರಿಗೆ ಇಲಾಖೆಯಿಂದ ತೆರಿಗೆ ಪಾವತಿಸುತ್ತಿರುವವರ ಮಾಹಿತಿ ಪಡೆದ ಆಹಾರ ಇಲಾಖೆ ಅವರ ಆಧಾರ್‌ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ಲಿಂಕ್‌ ಆಗಿದ್ದ (ಇಕೆವೈಸಿ)ಆಧಾರ್‌ ಸಂಖ್ಯೆಗೆ ಜೋಡಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸುಮಾರು 85,204 ಮಂದಿ ತೆರಿಗೆ ಪಾವತಿದಾರರಾಗಿದ್ದು ಬಿಪಿಎಲ್‌ ಮತ್ತು ಅಂತ್ಯೋದಯ ಚೀಟಿ ಪಡೆದಿರುವುದು ಕಂಡು ಬಂದಿತ್ತು.
 

click me!