‘ಉದ್ಯೋಗಕ್ಕೆ ಕೇಳುವ ಅನುಭವ ಮದುವೆ ಹುಡುಗನಿಕೇಗೆ ಕೇಳಲ್ಲ’

By Kannadaprabha NewsFirst Published Mar 20, 2020, 10:34 AM IST
Highlights

ಉದ್ಯೋಗ ಕೇಳಿದರೆ ಅನುಭವ ಕೇಳುವವರು ಮದುವೆಯಾಗುವ ಹುಡುಗನಿಗೆ ಯಾಕೆ ಅನುಭವ ಕೇಳಲ್ಲ ಎನ್ನುವ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳೀಕೆ ಸಾಕಷ್ಟು ವಿವಾದಕ್ಕೆ ಕಾರಣವಾಯ್ತು.

ಬೆಂಗಳೂರು [ಮಾ.20]: ‘ಉದ್ಯೋಗ ಕೇಳಿದರೆ ಅನುಭವ ಕೇಳುವವರು, ತಮ್ಮ ಮಗಳನ್ನು ಮದುವೆಯಾಗುವ ಹುಡುಗನಿಗೆ ಅನುಭವ ಇದೆಯೇ ಎಂದು ಯಾಕೆ ಕೇಳುವುದಿಲ್ಲ’ ಎಂದು ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಆಡಿದ ಮಾತು ಸದನದಲ್ಲಿ ಕೆಲವು ಕಾಲ ಕಾವೇರುವಂತೆ ಮಾಡಿತಲ್ಲದೆ, ಸದಸ್ಯರ ಮಾತಿಗೆ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಸದಸ್ಯ ತೇಜಸ್ವಿನಿಗೌಡ ಸದನದಿಂದ ಹೊರ ಹೋದ ಘಟನೆ ನಡೆಯಿತು.

ಸಂವಿಧಾನ ಕುರಿತು ಮಾತನಾಡುವ ಸಂದರ್ಭದಲ್ಲಿ ಸಿ.ಎಂ. ಇಬ್ರಾಹಿಂ ಅವರು, ಸರ್ಕಾರ 18 ವರ್ಷಕ್ಕೆ ಮತದಾನದ ಹಕ್ಕು ನೀಡಿದ್ದು ತಪ್ಪಾಯಿತೇನೋ ಎಂದು ಅನೇಕ ಸಾರಿ ಅನಿಸುತ್ತದೆ. 

ಹುಡುಗನಿಗೆ ಮದುವೆ ಆಗಲು 21 ವರ್ಷ ಆಗಿರಬೇಕು ಎಂದು ಹೇಳುತ್ತದೆ, ಉದ್ಯೋಗ ಕೇಳಲು ಹೋದರೆ ಅನುಭವ ಕೇಳುತ್ತಾರೆ. ಉದ್ಯೋಗ ಸಿಗದೆ ಹೇಗೆ ಅನುಭವ ಸಿಗಲು ಸಾಧ್ಯ, ಅನುಭವ ಕೇಳುವ ಅಧಿಕಾರಿ 20 ವರ್ಷ ತಾನು ಬೆಳೆಸಿದ ಮಗಳನ್ನು ಮದುವೆಯಾಗುವ ಹುಡುಗನಿಗೆ ಅನುಭವ ಇದೆಯಾ ಎಂದು ಏಕೆ ಕೇಳುವುದಿಲ್ಲ ಎಂದು ನಗುತ್ತಾ ಹೇಳಿದರು.

ಅನರ್ಹ ಶಾಸಕ ಮುನಿರತ್ನ ಗೆಲುವು ಅಕ್ರಮವಾ ? ಸಕ್ರಮವಾ? ಆದೇಶಕ್ಕೆ ಕ್ಷಣಗಣನೆ..!

ಆದರೆ ಈ ಮಾತಿನಿಂದ ಕೆರಳಿದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ಅರುಣ ಶಹಾಪುರ, ರವಿಕುಮಾರ್, ಲೆಹರ್‌ಸಿಂಗ್, ತೇಜಸ್ವಿನಿಗೌಡ ಮುಂತಾದವರು, ಸದಸ್ಯರು ಇಷ್ಟಬಂದ ಹಾಗೆ ಸಂತೆಯಲ್ಲಿ ಮಾತನಾಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದನ್ನೆಲ್ಲ ಕೇಳಲು ನಾವು ಬಂದಿಲ್ಲ. ಸಂವಿಧಾನದ ಮೇಲೆ ನಡೆಯುತ್ತಿರುವ ಚರ್ಚೆಯ ವೇಳೆ ಇಂತಹ ಉದಾಹರಣೆಗಳು ನೀಡಬೇಕಾ ಎಂದು ಪ್ರಶ್ನಿಸಿದರು. ಇದರ ಮಧ್ಯ ತೇಜಸ್ವಿನಿಗೌಡ ಅವರು ತೀವ್ರ ಅಸಮಾಧಾನದಿಂದ ಸದನದಿಂದ ಹೊರ ನಡೆದರು. 

ಮತ್ತೆ ಗದ್ದಲ ಮುಂದುವರಿದು ಇಬ್ರಾಹಿಂ ಅವರು ಕ್ಷಮೆ ಕೇಳಬೇಕು. ಕಡತದಿಂದ ಮಾತನ್ನು ತೆಗೆಯಬೇಕು ಎಂದು ಒತ್ತಾಯಿಸತೊಡಗಿದರು. ಈ ಮಾತಿಗೆ ಇಬ್ರಾಹಿಂ ಅವರು ಮಾತು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿಚರ್ಚೆ ಮುಂದುವರೆಸಿದರು. ಕೆಲವು ನಿಮಿಷದ ನಂತರ ತೇಜಸ್ವಿನಿಗೌಡ ಮತ್ತೆ ಕಲಾಪದಲ್ಲಿ ಭಾಗಿಯಾದರು.

click me!