ಪಠ್ಯಪುಸ್ತಕ ಪುನರ್‌ ಪರಿಷ್ಕರಣೆ: ಬರಗೂರು ರಾಮಚಂದ್ರಪ್ಪ ಜತೆ ಸಚಿವ ಮಧು ಬಂಗಾರಪ್ಪ ಚರ್ಚೆ

By Kannadaprabha NewsFirst Published Jun 3, 2023, 4:45 AM IST
Highlights

ಬಿಜೆಪಿ ಸರ್ಕಾರದಲ್ಲಾದ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಪುನರ್‌ಪರಿಷ್ಕರಿಸಲು ಕಾಂಗ್ರೆಸ್‌ ಸರ್ಕಾರ ತೀರ್ಮಾನಿಸಿರುವ ಬೆನ್ನಲ್ಲೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಶುಕ್ರವಾರ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ನಿವಾಸಕ್ಕೆ ಖುದ್ದು ಭೇಟಿ ನೀಡಿ ಪಠ್ಯ ಪುನರ್‌ ಪರಿಷ್ಕರಣೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಬೆಂಗಳೂರು (ಜೂ.03): ಬಿಜೆಪಿ ಸರ್ಕಾರದಲ್ಲಾದ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಪುನರ್‌ಪರಿಷ್ಕರಿಸಲು ಕಾಂಗ್ರೆಸ್‌ ಸರ್ಕಾರ ತೀರ್ಮಾನಿಸಿರುವ ಬೆನ್ನಲ್ಲೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಶುಕ್ರವಾರ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ನಿವಾಸಕ್ಕೆ ಖುದ್ದು ಭೇಟಿ ನೀಡಿ ಪಠ್ಯ ಪುನರ್‌ ಪರಿಷ್ಕರಣೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಸಚಿವರು ಪಠ್ಯಪುಸ್ತಕದಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಸಮಿತಿಯೊಂದನ್ನು ರಚಿಸಲು ನಿರ್ಧರಿಸಿದ್ದೇವೆ. ಅದಕ್ಕೆ ಸಹಕಾರ ನೀಡಬೇಕು ಎಂದು ಬರಗೂರು ರಾಮಚಂದ್ರಪ್ಪ ಅವರಲ್ಲಿ ವಿನಂತಿಸಿದರು. ಜತೆಗೆ, ಈಗಾಗಲೇ ಶಾಲೆಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ಹಾಗೂ ಬಿಜೆಪಿ ಅವಧಿಯಲ್ಲಿ ಆದಂತೆ ಗೊಂದಲಗಳಿಗೆ ಅವಕಾಶವಾಗದಂತೆ ಹೇಗೆ ನಿರ್ಧಾರಗಳನ್ನು ಕೈಗೊಳ್ಳುವುದು ಎಂಬ ಬಗ್ಗೆ ಸಚಿವರು ಬರಗೂರು ರಾಮಚಂದ್ರಪ್ಪ ಅವರಿಂದ ಸಲಹೆ, ಅಭಿಪ್ರಾಯ ಪಡೆದರು ಎಂದು ತಿಳಿದು ಬಂದಿದೆ.

ಈ ವೇಳೆ ಬರಗೂರು ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚಿಸಲಾಗಿದ್ದ ಸಮಿತಿಯು ಪಠ್ಯಪುಸ್ತಕಗಳಿಂದ ತೆಗೆದುಹಾಕಿದ, ಹೊಸದಾಗಿ ಸೇರಿಸಿದ ಪಾಠಗಳು, ತಿರುಚಿದ, ತಿದ್ದುಪಡಿ ಮಾಡಿದ ವಿಷಯಗಳ ಕುರಿತು ಸವಿಸ್ತಾರವಾಗಿ ಸಚಿವರಿಗೆ ವಿವರಿಸಿದರು. ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲೇ ಶೇ.25ಕ್ಕಿಂತ ಹೆಚ್ಚು ಪಾಠಗಳನ್ನು ಬದಲಿಸಲಾಗಿದೆ. ಸೂಕ್ತ ವಿವರಣೆ ಪಡೆದ ನಂತರವೇ ಬದಲಾವಣೆ ಮಾಡಬೇಕಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ನನಗೆ ಮಂತ್ರಿ ಸ್ಥಾನಕ್ಕಿಂತ ಸಿದ್ದರಾಮಯ್ಯ ಸಿಎಂ ಆಗಿದ್ದು ಸಂತಸ ತಂದಿದೆ: ಶಾಸಕ ರಾಯರಡ್ಡಿ

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯರಚನಾ ಸಮಿತಿಯು ಪರಿಷ್ಕರಿಸಿದ್ದ ಶಾಲಾ ಪಠ್ಯಗಳಲ್ಲಿ ಎಡಪಂಥೀಯ ಚಿಂತನೆಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ರಚಿಸಿ ಪಠ್ಯ ಪುನರ್‌ಪರಿಷ್ಕರಿಸಲಾಗಿತ್ತು. ಇದಕ್ಕೆ ಬರಗೂರು ರಾಮಚಂದ್ರಪ್ಪ ಅವರೂ ಸೇರಿದಂತೆ ಹಲವು ಸಾಹಿತಿಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹಿಂದಿನ ಪಠ್ಯಪರಿಷ್ಕರಣೆಯಲ್ಲಿ ಆರೆಸ್ಸೆಸ್‌ ಹಾಗೂ ಬಲಪಂಥೀಯ ಚಂತನೆಯ ಅಂಶಗಳನ್ನು ಸೇರಿಸಲಾಗಿದೆ. ಅವುಗಳನ್ನು ಪರಿಷ್ಕರಿಸಬೇಕೆಂದು ಇತ್ತೀಚೆಗಷ್ಟೆಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ವಿವಿಧ ಸಾಹಿತಿಗಳು ಮನವಿ ಮಾಡಿದ್ದರು.

click me!