ಕಾಂಗ್ರೆಸ್‌ ಸರ್ಕಾರದ ಕಮೀಷನ್ ಆಸೆಗೆ ಕಳಪೆ ಔಷಧಿ ಖರೀದಿ; 150 ಬಾಣಂತಿಯರ ಸಾವು: ಪಿ.ರಾಜೀವ್ ಗಂಭೀರ ಆರೋಪ

By Sathish Kumar KHFirst Published Mar 30, 2024, 8:05 PM IST
Highlights

ಕಾಂಗ್ರೆಸ್‌ ಸರ್ಕಾರ ಕಮೀಷನ್ ಆಸೆಗೆ ಬ್ಲ್ಯಾಕ್‌ ಲಿಸ್ಟ್‌ಗೆ ಸೇರಿಸಿದ ಕಂಪನಿಯಿಂದ ಔಷಧಿ ಖರೀದಿಸಿ, ಬಾಣಂತಿಯರ ಚಿಕಿತ್ಸೆಗೆ ಬಳಸಿದೆ. ಈ ಔಷಧಿ ಪಡೆದ 150ಕ್ಕೂ ಅಧಿಕ ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆರೋಪ ಮಾಡಿದ್ದಾರೆ.

ಬೆಂಗಳೂರು (ಮಾ.30): ಕಾಂಗ್ರೆಸ್ ಸರ್ಕಾರದ ಕಮಿಷನ್ ದಾಹಕ್ಕೆ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಕರ್ನಾಟಕದಲ್ಲಿ 150ಕ್ಕೂ ಅಧಿಕ ಬಾಣಂತಿಯರು ಜೀವ ಕಳೆದುಕೊಂಡಿದ್ದಾರೆ. ಚುನಾವಣೆ ನಡೆಸಲು ಹಣವನ್ನು ಹೊಂದಿಸುವುದಕ್ಕಾಗಿ ಬೇರೆ ರಾಜ್ಯದಲ್ಲಿ ಬ್ಲಾಕ್ ಲಿಸ್ಟ್ಗಗೆ ಸೇರಿಸಿರುವ ಪಶ್ಚಿಮ್ ಬಂಗಾ ಔಷಧ ಸಂಸ್ಥೆಯ ಲಿಂಜರ್ ಲ್ಯಾಕ್ಟೆಡ್ ಇನ್ಫ್ಯೂಷನ್ ಎಂಬ ಔಷಧಿಯನ್ನು ಖರೀದಿ ಮಾಡಲು ರಾಜ್ಯದಲ್ಲಿ ಟೆಂಡರ್ ಕೊಟ್ಟಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆರೋಪ ಮಾಡಿದ್ದಾರೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಕಮೀಷನ್ ಆಸೆಗೆ ಬೇರೆ ರಾಜ್ಯಗಳಲ್ಲಿ ಬ್ಲ್ಯಾಕ್‌ ಲಿಸ್ಟ್‌ಗೆ ಸೇರಿಸಿದ ಪಶ್ಚಿಮ್ ಬಂಗಾ ಔಷಧ ಕಂಪನಿಯಿಂದ ಲಿಂಜರ್ ಲ್ಯಾಕ್ಟೆಡ್ ಇನ್ಫ್ಯೂಷನ್ ಎಂಬ ಔಷಧಿಯನ್ನು ಖರೀದಿ ಮಾಡಿದೆ. ಇದನ್ನು ಕಿಡ್ನಿ ಸಮಸ್ಯೆ ಸೇರಿದಂತೆ ಬಾಣಂತಿಯರ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತದೆ. ಹೀಗೆ, ಬಾಣಂತಿಯರಿಗೆ ಕೊಟ್ಟ ಈ ಔಷಧಿಯಿಂದ ರಾಜ್ಯದಲ್ಲಿ ಕಳೆದೆರಡು ತಿಂಗಳಲ್ಲಿ 150ಕ್ಕೂ ಅಧಿಕ ಬಾಣಂತಿಯರು ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಪಾವಗಡದಲ್ಲಿ 3, ತುಮಕೂರಿನ ಶಿರಾದಲ್ಲಿ 2, ಗುಬ್ಬಿ ತಾಲೂಕಿನಲ್ಲಿ 2, ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ 3 ಬಾಣಂತಿಯರ ಸಾವು ಸಂಭವಿಸಿದೆ. ಇಡೀ ರಾಜ್ಯದಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಮೆಟರ್ನಲ್ ಡೆತ್ ಕನಿಷ್ಠ 150ಕ್ಕಿಂತ ಹೆಚ್ಚಾಗಿದೆ ಎಂದು ಆರೋಪ ಮಾಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾಪಿ ಹೊಡೆಸಿದ ಆರೋಪ; ನಾಲ್ವರು ಶಿಕ್ಷಕರು ಅಮಾನತು

ಕೋಲಾರದ ಭವಾನಿ ಎಂಬ ಹೆಣ್ಣು ಮಗಳು ಫೆಬ್ರವರಿ ತಿಂಗಳಲ್ಲಿ ಮೃತರಾಗ್ತಾರೆ. ಭವಾನಿಯ ಪತಿ ಗೋಪಾಲ್ ಕಂಪ್ಲೇಂಟ್ ಲಾರ್ಜ್‌ ಮಾಡುತ್ತಾರೆ. ಪಾವಗಡದಲ್ಲಿ ಅನಿತಾ ಅನ್ನೋ ಹೆಣ್ಣು ಮಗಳು ಸಂತಾನಹರಣ ಚಿಕಿತ್ಸೆಗೆ ದಾಖಲಾಗ್ತಾರೆ. ಬಳಿಕ ಮರಣ ಹೊಂದುತ್ತಾರೆ. ಅಂಜಲಿ ಅನ್ನೋ ಹೆಣ್ಣುಮಗಳು ಸಿಸೇರಿಯನ್‌ಗೆ ಒಳಗಾಗಿ ಸೀರಿಯಸ್ ಆಯ್ತು ಅಂತ್ಹೇಳಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗುತ್ತಾಳೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗ್ತಾರೆ. ನರಸಮ್ಮ ಎಂಬ ಹೆಣ್ಣು ಮಗಳು ವಾಣಿ ವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇಲ್ಲಿಯೇ ಒಟ್ಟು 7 ಜನ ಇದೇ ರೀತಿಯಾಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪತ್ರಿಕೆಯಲ್ಲಿ ಈ ಬಗ್ಗೆ ಸುದ್ದಿ ಬಂದಿದೆ ಎಂದು ತಿಳಿಸಿದರು.

ಎಮ್ಮೆಗೆ ಜ್ವರ ಬಂದ್ರೆ ಕೋಣಕ್ಕೆ ಬರೆ ಎಳಿ ಅನ್ನೋ ತರಾ ಸರ್ಕಾರ ಇದೆ. ಈ ಘಟನೆ ನಂತರ 3-4 ಜನ ಡಾಕ್ಟರ್ ಮೇಲೆ ಕ್ರಮ ಕೈಗೊಂಡರು. ಇದಕ್ಕೆ ಅಸಲಿ ಕಾರಣ ಅವಧಿ ಮುಗಿದಿರುವ ಪಶ್ಚಿಮ್ ಬಂಗಾ ಫಾರ್ಮಾಸಿಟಿಕಲ್ ಸಂಸ್ಥೆಯಿಂದ ಖರೀದಿ ಮಾಡಿದ ಔಷಧಿ ಕಾರಣವಾಗಿದೆ. ಫೆಬ್ರವರಿಯಲ್ಲಿ ಬಾಣಂತಿಯರ ಮರಣ ಆಯ್ತು. ಈ ಬಗ್ಗೆ ಡಾಕ್ಟರ್ ಗ್ರೂಪ್ ಗಳಲ್ಲಿ ಡಿಸ್ಕಷನ್ ಆಗುತ್ತದೆ. ಮಾ.23ಕ್ಕೆ ಡ್ರಗ್ ಕಂಟ್ರೋಲ್ ಬೋರ್ಡ್ ಆದೇಶ ಹೊರಡಿಸಿ ಪಶ್ಚಿಮ್ ಬಂಗಾ ಸಂಸ್ಥೆ ಪೂರೈಸಿರುವ ಔಷಧಿ ಬಳಕೆಯೇ ಇದಕ್ಕೆಲ್ಲಾ ಕಾರಣವೆಂದು, ಈ ಔಷಧಿಯನ್ನು ಕರ್ನಾಟಕದಲ್ಲಿಯೂ ಬ್ಲಾಕ್ ಲಿಸ್ಟ್‌ಗೆ ಸೇರ್ಪಡೆ ಮಾಡಲಾಗುತ್ತದೆ. ಅಂದರೆ, ಲಿಂಜರ್ ಲ್ಯಾಕ್ಟೆಡ್ ಇನ್ಫ್ಯೂಷನ್ ಅನ್ನುವ ಔಷಧಿಯನ್ನು ಕೂಡಲೆ ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು. ಆದರೆ, ಫೆಬ್ರವರಿಯಿಂದ ಈ ಸರ್ಕಾರ ಕೋಣನ ನಿದ್ರೆ ಮಾಡ್ತಾ ಇತ್ತಾ? ಈ ಸರ್ಕಾರ ಇದರ ಬಗ್ಗೆ ಆಲೋಚನೆ ಮಾಡ್ಬೇಕಿತ್ತು ಎಂದು ಕಿಡಿಕಾರಿದರು.

ಹುಟ್ಟುಹಬ್ಬ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ತಿಂದ 10 ವರ್ಷ ಬಾಲಕಿ ನಿಧನ, ಕುಟುಂಬಸ್ಥರು ಅಸ್ವಸ್ಥ!

ಈ ಔಷಧಿಯನ್ನು ಕೇವಲ ಗರ್ಭಿಣಿಯರಿಗೆ ಕೊಡೋದಿಲ್ಲ. ಕಿಡ್ನಿ ಸಮಸ್ಯೆ ಸೇರಿದಂತೆ ಬೇರೆ ಸಮಸ್ಯೆಗೂ ಬಳಸ್ತಾರೆ. ಕರ್ನಾಟಕದಲ್ಲಿ ಇದನ್ನು ಬಳಸಿ ಕನಿಷ್ಠ 5 ಸಾವಿರ ಜನ ಮರಣ ಹೊಂದಿದ್ದಾರೆ. ಬೇರೆ ರಾಜ್ಯದಲ್ಲಿ ಬ್ಲಾಕ್ ಲಿಸ್ಟ್ ನಲ್ಲಿ ಇದ್ದರೂ ಈ ರಾಜ್ಯದಲ್ಲಿ ಟೆಂಡರ್ ಕೊಟ್ಟಿದ್ದೇಕೆ? ಚುನಾವಣೆ ನಡೆಸಲು ಹಣ ಬೇಕು ಅಂತ್ಹೇಳಿ ಕೊಲೆ ಮಾಡುವ ಸ್ಥಿತಿಗೆ ತಲುಪಿದ್ಯಾ?  ಇದರ ಬಗ್ಗೆ ಕ್ರಮ ಆಗಬೇಕು ಎಂದು ಆಗ್ರಹ ಮಾಡ್ತೇವೆ. ಇನ್ನು ಈ ಔಷಧಿ ಪಡೆದು ಮರಣ ಹೊಂದಿದ ಹೆಣ್ಣು ಮಕ್ಕಳ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ನಿಷೇಧಿತ ಔಷಧಿ ಬಳಕೆಯಿಂದ ಸಾವನ್ನಪ್ಪಿದ ಸಂತ್ರಸ್ತ ಕುಟುಂಬದ ಜೊತೆಗೆ ಬಿಜೆಪಿಯ ಕಾನೂನು ವಿಭಾಗ ನಿಲ್ಲುತ್ತದೆ. ಈಗ ಕೋಲಾರದಲ್ಲಿ ಮಾತ್ರ ಎಫ್‌ಐಆರ್ ದಾಖಲಾಗಿದೆ. ರಾಜ್ಯದ ಉಳಿದ ಕಡೆ ಡಾಕ್ಟರ್‌ಗಳೇ ಬಾಣಂತು ಕುಟುಂಬದವರನ್ನು ದಾರಿ ತಪ್ಪಿಸಿದ್ದಾರೆ. ಇನ್ನು ಕೆಲವು ಕಡೆ ಹೋರಾಟಗಳೂ ನಡೆದಿವೆ. ನಾನು ಮನವಿ ಮಾಡ್ತೇನೆ, ಯಾರಾದರೂ ಈ ರೀತಿ ಅನ್ಯಾಯಕ್ಕೆ ಒಳಗಾಗಿದ್ದರೆ ಕೂಡಲೆ ದೂರು ದಾಖಲಿಸಿ. ರಾಜ್ಯದ ಯಾವುದೇ ಠಾಣೆಗಳಲ್ಲಿ ಪೊಲೀಸರು ದೂರು ದಾಖಲಿಸಲು ಹಿಂದೇಟು ಹಾಕಿದರೆ, ಬಿಜೆಪಿಯ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಮನವಿ ಮಾಡಿದರು.

click me!