
ವಿಧಾನಸಭೆ(ಸೆ.15) : ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯುವ ವಿಚಾರವಾಗಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ವಪಕ್ಷ ಸಭೆ ಕರೆದು ಸಭೆ ನಡೆಸಲಾಗುವುದು ಮತ್ತು ಅಕ್ರಮದ ಕುರಿತು ತನಿಖೆ ನಡೆಸಲಾಗುವುದು ಎಂದು ಆಶ್ವಾಸನೆ ಕೊಟ್ಟಬಳಿಕ ಧರಣಿ ವಾಪಸ್ ಪಡೆದ ಪ್ರಸಂಗ ನಡೆಯಿತು.
ಒತ್ತುವರಿ ತೆರವು, ಸಾಮಾನ್ಯರ ಮುಂದೆ ಅಬ್ಬರಿಸಿದ ಜೆಸಿಬಿ, ದೊಡ್ಡವರ ಮುಂದೆ ಸೈಲೆಂಟ್!
ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಕೊಳವೆಬಾವಿ ಕೊರೆದಿದ್ದರೂ ಈವರೆಗೆ ಮೋಟಾರ್ ಪಂಪ್ ವಿತರಣೆಯಾಗಲಿ, ವಿದ್ಯುತ್ ಸಂಪರ್ಕವಾಗಲಿ ನೀಡಿಲ್ಲ ಎಂದು ಸರ್ಕಾರದ ಗಮನಕ್ಕೆ ತಂದರು. ಇದಕ್ಕೆ ಸರ್ಕಾರ ಪರವಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉತ್ತರ ನೀಡಿದರು. ಈ ವೇಳೆ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಅವರು ಕೊಳವೆಬಾವಿ ಕೊರೆಯಲು ಹಿಂದುಳಿದ ವರ್ಗಕ್ಕೆ 84 ಸಾವಿರ ರು. ಮತ್ತು ಎಸ್‌ಸಿ/ಎಸ್‌ಟಿ ವರ್ಗಕ್ಕೆ 1.24 ಲಕ್ಷ ರು. ನೀಡಲಾಗುತ್ತದೆ. ಈ ತಾರತಮ್ಯ ಯಾಕೆ ಮತ್ತು ಗುತ್ತಿಗೆದಾರರು ನಕಲಿ ದಾಖಲೆಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ. ಈ ಬಗ್ಗೆ ಸಭೆ ಕರೆದು ಚರ್ಚೆ ಮಾಡಿ ಇತ್ಯರ್ಥ ಮಾಡಲಾಗುವುದು ಎಂದು ಹೇಳಿದರು. ಮುಖ್ಯಮಂತ್ರಿಗಳ ಉತ್ತರದಿಂದಲೂ ಸಮಾಧಾನವಾಗದ ಪ್ರಿಯಾಂಕ್ ಖರ್ಗೆ ಅವರು ಬಾವಿಗಿಳಿದು ಧರಣಿ ನಡೆಸಿದರು. ಇತರೆ ಕಾಂಗ್ರೆಸ್ ಸದಸ್ಯರು ಸಹ ಧರಣಿಗೆ ಸಾಥ್ ನೀಡಿದರು. ಸಭಾಧ್ಯಕ್ಷರು ಮಾಡಿದ ಮನವೊಲಿಕೆ ಪ್ರಯತ್ನವೂ ಸಫಲವಾಗಲಿಲ್ಲ. ಆಡಳಿತ ಪಕ್ಷದ ಸದಸ್ಯರು ಪ್ರತಿಪಕ್ಷ ಸದಸ್ಯರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಲೋಕಾಯುಕ್ತ ಬಲ ಪಡಿಸಲು ಒಪ್ಪಿಗೆ: ಹೆಚ್ಚುವರಿ ರಿಜಿಸ್ಟ್ರಾರ್ ನೇಮಕಕ್ಕೆ ಸಚಿವ ಸಂಪುಟ ತೀರ್ಮಾನ
ಧರಣಿ ಮುಂದುವರಿಸಿದಾಗ ಮತ್ತೆ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ, ದರದಲ್ಲಿ ತಾರತಮ್ಯವಾಗಿರುವುದು ಮತ್ತು ಗುತ್ತಿಗೆದಾರರ ಅಕ್ರಮ ಕುರಿತು ಪ್ರತಿಪಕ್ಷ ಸದಸ್ಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ನಡೆದಿರುವ ಅಕ್ರಮ ಕುರಿತು ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಮುಖ್ಯಮಂತ್ರಿಗಳ ಆಶ್ವಾಸನೆ ಬಳಿಕ ಧರಣಿಯನ್ನು ಹಿಂಪಡೆದುಕೊಳ್ಳಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ