ಬೆಂಗಳೂರು (ಸೆ.15) : ಬಿಬಿಎಂಪಿ ಹಾಗೂ ವಿವಿಧ ನಗರ ಪಾಲಿಕೆಗಳ ವ್ಯಾಪ್ತಿ ಹೊರತುಪಡಿಸಿ ಉಳಿದ ಪ್ರದೇಶದ ಸರ್ಕಾರಿ ಭೂ ಒತ್ತುವರಿ ಪ್ರಕರಣಗಳನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯಿದೆ ವ್ಯಾಪ್ತಿಯಿಂದ ಕೈಬಿಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಬುಧವಾರ ವಿಧಾನಸಭೆಯಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ವಿಧೇಯಕ ಮಂಡಿಸಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ವಿಧೇಯಕ ಮಂಡಿಸಿದ್ದು, ವಿಧೇಯಕಕ್ಕೆ ಉಭಯ ಸದನಗಳಲ್ಲಿ ಅಂಗೀಕಾರ ದೊರೆತರೆ ಅನುಷ್ಠಾನಕ್ಕೆ ಬರಲಿದೆ.
Encroachment on Govt Land: ಬಿಡಿಎಯಿಂದ 300 ಕೋಟಿ ಮೌಲ್ಯದ ಆಸ್ತಿ ಒತ್ತುವರಿ ತೆರವು
ಈ ಮೂಲಕ ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದ ರೈತರು, ಕಾಫಿ ಬೆಳೆಗಾರರಂತಹವರ ಮೇಲೆ ‘ಭೂ ಕಬಳಿಕೆ’ ಅಡಿ ಕ್ರಿಮಿನಲ್ ಪ್ರಕರಣಗಳು ದಾಖಲಿಸುವುದು ತಪ್ಪಲಿದೆ. ಅಲ್ಲದೆ, ಪ್ರತಿಯೊಬ್ಬ ಒತ್ತುವರಿ ಆರೋಪಿತ ರೈತನೂ ಬೆಂಗಳೂರಿನಲ್ಲಿರುವ ಭೂ ಕಬಳಿಕೆ ವಿಶೇಷ ನ್ಯಾಯಾಲಯಕ್ಕೆ ಅಲೆದು ಕಿರುಕುಳ ಅನುಭವಿಸುವುದು ತಪ್ಪಲಿದೆ.
ಭೂ ಕಬಳಿಕೆ ತಡೆಯಲು ಭೂ ಕಬಳಿಕೆ ನಿಷೇಧ ಕಾಯಿದೆ ರೂಪಿಸಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿತ್ತು. ಇದರಡಿ ಪ್ರಕರಣ ದಾಖಲಾದರೆ ಒಂದು ಗುಂಟೆ ಒತ್ತುವರಿ ಮಾಡಿದ್ದರೂ ದಂಡ ವಿಧಿಸಿ ವ್ಯಕ್ತಿಯನ್ನು ಬಂಧಿಸಲು ಅವಕಾಶವಿದೆ. ಒತ್ತುವರಿ ತೆರವು ಮಾಡಿದ್ದರೂ ‘ಕಬಳಿಕೆ’ ಪ್ರಕರಣ ಮುಂದುವರೆಯುತ್ತಿತ್ತು. ಜತೆಗೆ ಯಾವುದೇ ಜಿಲ್ಲೆಯಲ್ಲಿ ಪ್ರಕರಣ ದಾಖಲಾದರೂ ಬೆಂಗಳೂರಿನ ಭೂ ಕಬಳಿಕೆ ವಿಶೇಷ ನ್ಯಾಯಾಲಯಕ್ಕೆ ಆಗಮಿಸಿ ಪ್ರಕರಣದ ಎದುರಿಸಬೇಕು. ಇದನ್ನೇ ನೆಪ ಮಾಡಿಕೊಂಡು ಕೃಷಿಕರಿಗೆ ಕಂದಾಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರು.
ಹೀಗಾಗಿ, ಭೂ ಕಬಳಿಕೆ ನಿಷೇಧ ಕಾಯಿದೆಯ ಕಲಂ 2 (ಡಿ) ತೆಗೆದು ಅನಧಿಕೃತ ಸಾಗುವಳಿದಾರರು, ರೈತರು, ಕಾಫಿ ಬೆಳೆಗಾರರು ನಿಟ್ಟುಸಿರು ಬಿಡುವಂತೆ ಮಾಡಬೇಕು ಎಂದು ತೀವ್ರ ಒತ್ತಾಯ ಕೇಳಿ ಬಂದಿತ್ತು.
ವಿಧೇಯಕದಲ್ಲೇನಿದೆ?:
ಇದೀಗ ವಿಧೇಯಕದಲ್ಲಿ ಬಿಬಿಎಂಪಿ ಅಥವಾ ಪಾಲಿಕೆ ವ್ಯಾಪ್ತಿಯಲ್ಲಿನ ಸರ್ಕಾರ, ವಕ್ಫ್ ಅಥವಾ ಹಿಂದೂ ಧಾರ್ಮಿಕ ಸಂಸ್ಥೆಗಳು, ಸ್ಥಳೀಯ ಪ್ರಾಧಿಕಾರಗಳು, ಸರ್ಕಾರದ ಒಡೆತನ, ನಿಯಂತ್ರಣ ಹಾಗೂ ವ್ಯವಸ್ಥೆಯಲ್ಲಿರುವ ಜಾಗದ ಒತ್ತುವರಿ ಹೊರತುಪಡಿಸಿ, ಉಳಿದ ಪ್ರದೇಶಗಳಲ್ಲಿನ ಒತ್ತುವರಿಗಳನ್ನು ‘ಭೂ ಕಬಳಿಕೆ ನಿಷೇಧ ಕಾಯಿದೆ’ಯಿಂದ ಕೈಬಿಡಲಾಗಿದೆ. ಜತೆಗೆ ಬಾಕಿ ವಿವಾದಗಳು ತಕ್ಷಣದಿಂದ ಕೊನೆಗೊಳ್ಳಬೇಕು ಎಂದು ತಿಳಿಸಲಾಗಿದೆ.
ವಿಧೇಯಕದ ಪರಿಣಾಮ:
ಭೂ ಕಬಳಿಕೆ ಕಾಯಿದೆ ವ್ಯಾಪ್ತಿಯಿಂದ ಹೊರಗುಳಿದರೆ ಕಬಳಿಕೆ ಬದಲು ‘ಒತ್ತುವರಿ’ ಎಂದು ಪರಿಗಣಿಸಿ ಪ್ರಸ್ತುತ ಭೂ ಕಬಳಿಕೆ ನ್ಯಾಯಾಲಯದಲ್ಲಿರುವ ಪ್ರಕರಣಗಳು ರದ್ದಾಗಬಹುದು. ಇದರಿಂದ ಎಂದಿನಂತೆ ಭೂ ಒತ್ತುವರಿಯನ್ನು ಒತ್ತುವರಿ ಎಂದು ಪರಿಗಣಿಸಿ ಕಂದಾಯ ಇಲಾಖೆ ನೋಟಿಸ್ ನೀಡಿ ಒತ್ತುವರಿ ತೆರವುಗೊಳಿಸುತ್ತದೆ. ಇಲ್ಲದಿದ್ದರೆ ಒತ್ತುವರಿದಾರರು ಜಿಲ್ಲಾಧಿಕಾರಿಗಳ ಅಡಿ ಬರುವ ನ್ಯಾಯಾಲಯ ವ್ಯವಸ್ಥೆಯಲ್ಲಿ ಕಾನೂನು ಹೋರಾಟ ಮಾಡಲು ಅವಕಾಶವಿರುತ್ತದೆ.
Bengaluru| ಬಿಡಿಎಯಲ್ಲಿ ಬಗೆದಷ್ಟು ಬ್ರಹ್ಮಾಂಡ ಭ್ರಷ್ಟಾಚಾರ..!
ಜತೆಗೆ ರಾಜ್ಯ ಸರ್ಕಾರವು ಹೊಸದಾಗಿ ರೂಪಿಸುತ್ತಿರುವ ಕಾನೂನಿನ ಪ್ರಕಾರ ಒತ್ತುವರಿ ಜಮೀನನ್ನು ಒತ್ತುವರಿದಾರರಿಗೆ ಗುತ್ತಿಗೆ ನೀಡಲು ಸಹ ಅವಕಾಶವಿದೆ. ಒಟ್ಟಾರೆಯಾಗಿ ರೈತರು, ಆ ಭಾಗದ ಒತ್ತುವರಿದಾರರಿಗೆ ಕಿರುಕುಳ ತಪ್ಪಲಿದೆ ಎಂದು ಅಧಿಕಾರಿಗಳ ಮಾತು.