ರಾಜ್ಯದಲ್ಲಿ ಪಾನ್‌ ಮಸಾಲ, ಗುಟ್ಕಾ ಸಂಪೂರ್ಣ ನಿಷೇಧ: ಆಹಾರ ಇಲಾಖೆಯಿಂದ ಮಹತ್ವದ ಆದೇಶ! ಅಡಕೆ ಬೆಳೆಗಾರರ ಮೇಲೆ ಪರಿಣಾಮವೇನು?

Kannadaprabha News   | Kannada Prabha
Published : Aug 13, 2026, 05:47 AM IST
Complete ban on pan masala and gutkha in Karnataka Food Department order what impact on arecanut growers rav

ಸಾರಾಂಶ

ಕರ್ನಾಟಕದಲ್ಲಿ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಎಲ್ಲಾ ರೀತಿಯ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟವನ್ನು ಒಂದು ವರ್ಷದ ಕಾಲ ಸಂಪೂರ್ಣವಾಗಿ ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ.

  • ರಾಜ್ಯದಲ್ಲಿ ಈಗಾಗಲೇ ನಿಕೋಟಿನ್‌ ಉಳ್ಳ ಗುಟ್ಕಾ, ಪಾನ್ ಮಸಾಲಾ ಮಾರಾಟಕ್ಕೆ ನಿಷೇಧ ಇದೆ
  • ಆದರೆ ನಿಷೇಧ ತಪ್ಪಿಸಲು ಪ್ರತ್ಯೇಕ ಪ್ಯಾಕಲ್ಲಿ ಗುಟ್ಕಾ, ಪಾನ್ ಮಸಾಲಾ ಮಾರುತ್ತಿದ್ದ ಕಂಪನಿಗಳು
  • ಗುಟ್ಕಾದಲ್ಲಿ ಡ್ರಗ್ಸ್‌ ಮಿಶ್ರಣ ಬಗ್ಗೆ ಸಿಎಂ ಡಿಕೆಶಿ ಎಚ್ಚರಿಕೆ ಬೆನ್ನಲ್ಲೇ ಇಂಥ ಮಾರಾಟಕ್ಕೂ ನಿಷೇಧ
  • ಇಂಥ ಉತ್ಪನ್ನ ತಯಾರಿ, ಸಂಗ್ರಹ, ಮಾರಾಟ ಪತ್ತೆಗೆ ರಾಜ್ಯವ್ಯಾಪಿ ಅಭಿಯಾನಕ್ಕೆ ಸರ್ಕಾರ ಸಜ್ಜು

ಬೆಂಗಳೂರು (ಆ.13): ತಂಬಾಕು ಹಾಗೂ ನಿಕೋಟಿನ್‌ ಹೊಂದಿರುವ ಎಲ್ಲ ರೀತಿಯ ಗುಟ್ಕಾ, ಪಾನ್‌ ಮಸಾಲ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಹಾಗೂ ಮಾರಾಟವನ್ನು ಸಂಪೂರ್ಣ ನಿಷೇಧ ಮಾಡಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ.

ಅಧಿಸೂಚನೆ ಹೊರಡಿಸಿರುವ ಆ.10ರಿಂದ ಅನ್ವಯವಾಗುವಂತೆ ಒಂದು ವರ್ಷದ ಕಾಲ ಒಟ್ಟಾಗಿ ಅಥವಾ ಪ್ರತ್ಯೇಕ ಸ್ಯಾಚೆಟ್‌, ಪೌಚ್‌, ಪ್ಯಾಕೆಟ್‌, ಡಬ್ಬಿ ಸೇರಿ ಇತರೆ ಯಾವುದೇ ಮಾದರಿಯಲ್ಲಿ ತಂಬಾಕು ಹಾಗೂ ನಿಕೋಟಿನ್‌ ಉಳ್ಳ ಗುಟ್ಕಾ ಅಥವಾ ಪಾನ್‌ ಮಸಾಲ ಮಾರಾಟ ಮಾಡುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಇದರಿಂದಾಗಿ ಗುಟ್ಕಾ ನಿಷೇಧದಿಂದ ಪಾರಾಗಲು ತಂಬಾಕು ಹಾಗೂ ಅಡಕೆಯನ್ನು ಬಿಡಿಬಿಡಿಯಾಗಿ ಮಾರುತ್ತಿದ್ದ ಕಂಪನಿಗಳ ಅಡ್ಡದಾರಿಗೆ ಬ್ರೇಕ್‌ ಬಿದ್ದಂತಾಗಿದೆ. ಈ ನಿರ್ಧಾರದಿಂದ ಅಡಕೆ ಬೆಳೆಗಾರರ ಮೇಲೆ ಆಗುವ ಪರಿಣಾಮ ಏನು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.

ಇತ್ತೀಚೆಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಪಾನ್ ಮಸಾಲಾ ಮತ್ತು ಗುಟ್ಕಾದಲ್ಲಿ ನಿಷೇಧಿತ ನಶೆ ಪದಾರ್ಥಗಳನ್ನು ಬೆರೆಸುತ್ತಿರುವುದು ದೃಢಪಟ್ಟರೆ, ರಾಜ್ಯದಲ್ಲಿ ಎಲ್ಲ ರೀತಿಯ ಪಾನ್ ಮಸಾಲಾ ಮತ್ತು ಗುಟ್ಕಾ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವುದಾಗಿ ಎಚ್ಚರಿಸಿದ ಬೆನ್ನಲ್ಲೇ ಈ ಮಹತ್ವದ ಆದೇಶ ಹೊರ ಬಿದ್ದಿದೆ.

ಈ ಮೊದಲಿನಿಂದಲೂ ನಿಷೇಧಿತ ನಿಕೋಟಿನ್ ಉತ್ಪನ್ನ ಉಳ್ಳ ಗುಟ್ಕಾ ಹಾಗೂ ಪಾನ್‌ ಮಸಾಲಾ ರಾಜ್ಯದಲ್ಲಿ ನಿಷೇಧದಲ್ಲಿದೆ. ಆದರೆ, ಗುಟ್ಕಾ ಕಂಪನಿಗಳು ಗುಟ್ಕಾ ಹಾಗೂ ನಿಷೇಧಿತ ನಿಕೋಟಿನ್‌ ಮತ್ತಿತರ ಉತ್ಪನ್ನಗಳನ್ನು ಪ್ರತ್ಯೇಕ ಸ್ಯಾಚೆಟ್‌ಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿವೆ. ಹೀಗಾಗಿ ಆರೋಗ್ಯ ಇಲಾಖೆಯು ಈ ಕ್ರಮ ಕೈಗೊಂಡಿದೆ.

ಅಧಿಸೂಚನೆಯಲ್ಲಿ ಏನಿದೆ?:

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ತಂಬಾಕು ಹಾಗೂ ನಿಕೋಟಿನ್‌ ಉಳ್ಳ ಗುಟ್ಕಾ ಹಾಗೂ ಪಾನ್‌ ಮಸಾಲ ಮಾರಾಟ, ಸಂಗ್ರಹಣ, ಸಾಗಣೆ, ಉತ್ಪಾದನೆ ನಿಷೇಧಿಸಲಾಗಿದೆ. ಅಲ್ಲದೆ, ತಂಬಾಕು ಹಾಗೂ ನಿಕೋಟಿನ್‌ ಉಳ್ಳ ಯಾವುದೇ ಹೆಸರಿನ ಯಾವುದೇ ಉತ್ಪನ್ನವೂ ನಿಷೇಧವಾಗಲಿದೆ.

ಅದು ಪ್ಯಾಕೇಜ್ಡ್‌ ಆಗಿರಲಿ ಪ್ಯಾಕೇಜ್ಡ್ ಅಲ್ಲದಿರಲಿ, ಎರಡೂ ಉತ್ಪನ್ನಗಳನ್ನು ಪ್ರತ್ಯೇಕ ಪಾಕೆಟ್‌ಗಳಲ್ಲೇ ಮಾರಾಟ ಮಾಡುತ್ತಿದ್ದರೆ ಅದನ್ನು ನಿಷೇಧಿಸಲಾಗಿದೆ. ಗುಟ್ಕಾ ಕಂಪನಿಗಳು ನಿಷೇಧ ವಸ್ತುಗಳನ್ನು ಪ್ರತ್ಯೇಕ ಪ್ಯಾಕೆಟ್‌ನಲ್ಲಿ ನೀಡಿ ಗ್ರಾಹಕರು ಮಿಶ್ರಣ ಮಾಡಿ ಬಳಕೆ ಮಾಡಲು ಉತ್ತೇಜನ ನೀಡುತ್ತಿದ್ದವು. ಹೀಗಾಗಿ ತಂಬಾಕು, ನಿಕೋಟಿನ್‌ ಉಳ್ಳ ಯಾವುದೇ ಗುಟ್ಕಾ, ಪಾನ್‌ ಮಸಾಲ ಉತ್ಪನ್ನಗಳ ಯಾವುದೇ ಪ್ಯಾಕೇಜಿಂಗ್‌ನಲ್ಲಿ ಲಭ್ಯವಿದ್ದರೂ ಅದು ಅಕ್ರಮ. ಮುಂದಿನ ಒಂದು ವರ್ಷದವರೆಗೆ ರಾಜ್ಯದಲ್ಲಿ ಯಾವುದೇ ರೂಪದಲ್ಲೂ ಈ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ರಾಜ್ಯಾದ್ಯಂತ ದಾಳಿಗೆ ಸಿದ್ಧತೆ:

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಂಬಾಕು ಹಾಗೂ ನಿಕೋಟಿನ್‌ ಹೊಂದಿರುವ ಉತ್ಪನ್ನಗಳ ವಿರುದ್ಧ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಆಹಾರ ಸುರಕ್ಷತಾ ಇಲಾಖೆ ಆಯುಕ್ತರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಶೇಷ ತಪಾಸಣೆ ಜಾರಿ:

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಕಲಂ 30(2)(ಎ) ಅನ್ವಯ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ರಾಜ್ಯದಲ್ಲಿ ತಂಬಾಕು ಹಾಗೂ ನಿಕೋಟಿನ್‌ ಹೊಂದಿರುವ ಉತ್ಪನ್ನಗಳ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿ ಆ.10 ರಂದು ಸರ್ಕಾರಿ ಅಧಿಸೂಚನೆ ಹೊರಡಿಸಲಾಗಿದೆ.

ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ಆರೋಗ್ಯಕರ ಹಾಗೂ ವ್ಯಸನಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸುವಂತೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯಿಂದ ಜಾಗೃತಿ ಮೂಡಿಸಲಾಗುವುದು. ಜತೆಗೆ ಅಕ್ರಮ ದಾಸ್ತಾನು, ಮಾರಾಟ ಮಾಡುವವರ ವಿರುದ್ಧ ದಾಳಿ ಮಾಡಲಾಗುವುದು ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದಿನಿಂದ ವಿಧಾನಮಂಡಲ ಅಧಿವೇಶನ: ಸಿಎಂ ಡಿಕೆಗೆ ಅಗ್ನಿಪರೀಕ್ಷೆ; ನಾಗೇಂದ್ರ ಸೇರ್ಪಡೆ, ಬಿಡದಿ ಗದ್ದಲ ಸಂಭವ
ಬೀದರ್ ಎಟಿಎಂ ₹83 ಲಕ್ಷ ದರೋಡೆ: 19 ತಿಂಗಳ ಬಳಿಕ ಬಿಹಾರದಲ್ಲಿ ಖದೀಮರ ಬೇಟೆಯಾಡಿದ ಕರ್ನಾಟಕ ಪೊಲೀಸರು!