
ಬೀದರ್ (ಆ.12): ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಬೀದರ್ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದ, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಹಾಡಹಗಲಿನ ಎಟಿಎಂ ದರೋಡೆ ಹಾಗೂ ಕೊಲೆ ಪ್ರಕರಣಕ್ಕೆ ಕೊನೆಗೂ ಬಿಗ್ ಕ್ಲೈಮ್ಯಾಕ್ಸ್ ಸಿಕ್ಕಿದೆ! ಪ್ರಕರಣ ನಡೆದ ಭೀಕರ ಘಟನೆಗೆ ಭರ್ತಿ 1 ವರ್ಷ 7 ತಿಂಗಳ (19 ತಿಂಗಳು) ಬಳಿಕ, ಪ್ರಕರಣದ ಇಬ್ಬರು ಕುಖ್ಯಾತ ದರೋಡೆಕೋರರ ಹೆಡೆಮುರಿಯನ್ನು ಬೀದರ್ ಪೊಲೀಸರು ಬಿಹಾರದಲ್ಲಿ ಕಟ್ಟಿದ್ದಾರೆ.
ಬಂಧಿತ ಆರೋಪಿಗಳನ್ನು ಬಿಹಾರ ಮೂಲದ ಅಮನ್‌ಕುಮಾರ್ ಸಿಂಗ್ ಹಾಗೂ ಅಲೋಕ್‌ಕುಮಾರ್ ಎಂದು ಗುರುತಿಸಲಾಗಿದೆ. ಬಿಹಾರದ ವೈಶಾಲಿ ಜಿಲ್ಲೆಯ ಧಾಮೋದರ್ ಗ್ರಾಮದಲ್ಲಿ ಇಂದು ಮಧ್ಯಾಹ್ನ ಬೀದರ್ ಪೊಲೀಸರು ಅತ್ಯಂತ ಚಾಣಾಕ್ಷತನದ ಕಾರ್ಯಾಚರಣೆ ನಡೆಸಿ ಈ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜನವರಿ 16, 2025ರಂದು ಬೀದರ್ ನಗರದ ಹೃದಯಭಾಗದಲ್ಲಿರುವ ಎಸ್‌ಬಿಐ (SBI) ಬ್ಯಾಂಕ್ ಹಾಗೂ ಎಟಿಎಂ ಮುಂಭಾಗದಲ್ಲಿ ಅತ್ಯಂತ ಭೀಕರ ದರೋಡೆ ನಡೆದಿತ್ತು. ಸಿಎಮ್‌ಎಸ್ (CMS) ಏಜೆನ್ಸಿಯ ಕ್ಯಾಶ್ ವ್ಯಾನ್‌ನಿಂದ ಹಣ ತುಂಬಲು ಬಂದಿದ್ದ ಸಿಬ್ಬಂದಿಯ ಮೇಲೆ ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸಿಎಮ್‌ಎಸ್ ಸಿಬ್ಬಂದಿ ಗಿರಿ ವೆಂಕಟೇಶ್ ಎಂಬುವವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದರೆ, ಶಿವಕುಮಾರ್ ಗುನ್ನಳ್ಳಿ ಎಂಬ ಇನ್ನೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು. ದುಷ್ಕರ್ಮಿಗಳು ಸ್ಥಳದಲ್ಲೇ ಬರೋಬ್ಬರಿ 83 ಲಕ್ಷ ರೂಪಾಯಿ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು.
ಪ್ರಕರಣ ನಡೆದ ದಿನದಿಂದಲೂ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಬೀದರ್ ಪೊಲೀಸರಿಗೆ ಕಳೆದ 20 ದಿನಗಳ ಹಿಂದೆ ಆರೋಪಿಗಳ ಖಚಿತ ಸುಳಿವು ಸಿಕ್ಕಿತ್ತು. ಸುಳಿವು ಸಿಕ್ಕ ತಕ್ಷಣವೇ ಕಾರ್ಯಪ್ರವೃತ್ತರಾದ ಬೀದರ್ ಖಾಕಿ ಪಡೆ, ಕಳೆದ 20 ದಿನಗಳಿಂದ ಬಿಹಾರದಲ್ಲೇ ಬೀಡುಬಿಟ್ಟು ಆರೋಪಿಗಳ ಪ್ರತಿಯೊಂದು ಚಲನವಲನಗಳ ಮೇಲೆ ನಿರಂತರ ನಿಗಾ ಇಟ್ಟಿತ್ತು. ವಿಶೇಷವೆಂದರೆ, ಈ ಕಾರ್ಯಾಚರಣೆಯಲ್ಲಿ ಬಿಹಾರ ಅಥವಾ ಇತರ ಯಾವುದೇ ರಾಜ್ಯದ ಪೊಲೀಸರ ಸಹಾಯವನ್ನು ಪಡೆಯದೇ, ಮಾಹಿತಿ ಸೋರಿಕೆಯಾಗದಂತೆ ಅತ್ಯಂತ ಗೌಪ್ಯವಾಗಿ ಬೀದರ್ ಪೊಲೀಸರೇ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬೀದರ್ ಎಸ್‌ಪಿ ಪ್ರದೀಪ್ ಗುಂಟಿ ಅವರ ನೇರ ಉಸ್ತುವಾರಿಯಲ್ಲಿ ಈ ಹೈ-ವೋಲ್ಟೇಜ್ ಆಪರೇಷನ್ ನಡೆದಿದೆ. ಈ ಕ್ರೈಂ ಆಪರೇಷನ್ ತಂಡದಲ್ಲಿ:
ಕಳೆದ 19 ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಹಂತಕ ದರೋಡೆಕೋರರನ್ನು ಬಂಧಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ, ಬೀದರ್‌ನ ಎಸ್‌ಬಿಐ ಬ್ಯಾಂಕ್ ಮುಂಭಾಗ ಸಾರ್ವಜನಿಕರು ಹಾಗೂ ಬ್ಯಾಂಕ್ ಸಿಬ್ಬಂದಿ ಸಂಭ್ರಮಾಚರಣೆ ನಡೆಸಿದರು. ಸತತ ಪ್ರಯತ್ನ ನಡೆಸಿ ಖದೀಮರ ಹೆಡೆಮುರಿ ಕಟ್ಟಿದ ಎಸ್‌ಪಿ ಪ್ರದೀಪ್ ಗುಂಟಿ ಹಾಗೂ ಅವರ ಇಡೀ ತಂಡಕ್ಕೆ ಬೀದರ್ ಜನತೆ ಸಾಷ್ಟಾಂಗ ನಮನ ಸಲ್ಲಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಸದ್ಯ ಬಂಧಿತ ಆರೋಪಿಗಳನ್ನು ಬಿಹಾರದಿಂದ ಬೀದರ್‌ಗೆ ಬಿಗಿ ಭದ್ರತೆಯಲ್ಲಿ ಕರೆತರಲಾಗುತ್ತಿದ್ದು, ವಿಚಾರಣೆಯ ಬಳಿಕ ದರೋಡೆ ಮಾಡಿದ 83 ಲಕ್ಷ ರೂಪಾಯಿ ಹಣ, ಬಳಸಿದ ಮಾರಕಾಸ್ತ್ರಗಳು ಹಾಗೂ ಈ ಕೃತ್ಯದ ಹಿಂದೆ ಇರುವ ಇತರ ಜಾಲದ ಬಗ್ಗೆ ಇನ್ನಷ್ಟು ಸ್ಫೋಟಕ ಸತ್ಯಗಳು ಹೊರಬರುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ