ಇಂದಿನಿಂದ ವಿಧಾನಮಂಡಲ ಅಧಿವೇಶನ: ಸಿಎಂ ಡಿಕೆಗೆ ಅಗ್ನಿಪರೀಕ್ಷೆ; ನಾಗೇಂದ್ರ ಸೇರ್ಪಡೆ, ಬಿಡದಿ ಗದ್ದಲ ಸಂಭವ

Kannadaprabha News   | Kannada Prabha
Published : Aug 13, 2026, 05:30 AM IST
DK shivakumarA testing legislature session for cm dk Shivakumar as Oppn to target Cong govt on multiple fronts rav

ಸಾರಾಂಶ

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದ ಮೊದಲ ವಿಧಾನಮಂಡಲ ಅಧಿವೇಶನವು ಗುರುವಾರದಿಂದ ಆರಂಭವಾಗಲಿದ್ದು, ಸಚಿವ ಬಿ.ನಾಗೇಂದ್ರ ಅವರ ಮರುಸೇರ್ಪಡೆ ಮತ್ತು ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಸಂಘರ್ಷ ನಡೆಯುವ ಸಾಧ್ಯತೆಯಿದೆ.

  • ವಾಲ್ಮೀಕಿ ಕೇಸಿನ ಆರೋಪಿ ಸಚಿವ ನಾಗೇಂದ್ರ ಕೈಬಿಡದಿದ್ರೆ ಕಲಾಪಕ್ಕೆ ಬಿಡಲ್ಲ ಎಂದು ವಿಪಕ್ಷ ಪಟ್ಟು
  • ಇದರ ಜೊತೆಗೆ ಬಿಡದಿ ಟೌನ್‌ಶಿಪ್‌ ಬಗ್ಗೆಯೂ ಸರ್ಕಾರ ಕಟ್ಟಿಹಾಕಲು ಬಿಜೆಪಿ, ಜೆಡಿಎಸ್‌ ತಂತ್ರ
  • ಗ್ಯಾರಂಟಿ ಯೋಜನೆ ಪರಿಷ್ಕರಣೆ ಬಳಿಕ ಉಂಟಾಗಿರುವ ಗೊಂದಲ ಬಗ್ಗೆಯೂ ತರಾಟೆಗೆ ಸಜ್ಜು
  • ವಿಪಕ್ಷಗಳನ್ನು ಎದುರಿಸಲು ಹೊಸ ಸಚಿವ ಸಂಪುಟದೊಂದಿಗೆ ಸಜ್ಜಾಗಿರುವ ಮುಖ್ಯಮಂತ್ರಿ ಡಿಕೆಶಿ

ಬೆಂಗಳೂರು (ಆ.13): ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ವಿಧಾನಮಂಡಲದ ಉಭಯ ಸದನಗಳ ಮೊದಲ ಅಧಿವೇಶನ ಗುರುವಾರದಿಂದ ಆರಂಭವಾಗಲಿದ್ದು, ನೂತನ ಸಚಿವ ಬಿ.ನಾಗೇಂದ್ರ ಅವರ ಸೇರ್ಪಡೆ ಹಾಗೂ ಬಿಡದಿ ಟೌನ್‌ಶಿಪ್ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಡುವೆ ಜಂಗೀ ಕುಸ್ತಿ ನಡೆಯುವ ಸಾಧ್ಯತೆಯಿದೆ.

ಮೊದಲ ದಿನ ಸಂಪ್ರದಾಯಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಲಿದೆ. ನಂತರದ ದಿನಗಳಲ್ಲಿ ಕ್ಲೀನ್‌ಚಿಟ್‌ಗೂ ಮೊದಲೇ ಬಿ.ನಾಗೇಂದ್ರಗೆ ಸಚಿವ ಸ್ಥಾನ ನೀಡಿರುವುದು, ಬಿಡದಿ ಟೌನ್‌ಶಿಪ್‌, ಕಾವೇರಿ ನದಿ ನೀರು ವಿಚಾರ ಸೇರಿದಂತೆ ಹಲವು ವಿಚಾರಗಳ ಕುರಿತು ಉಭಯ ಸದನಗಳಲ್ಲೂ ಕದನ ಏರ್ಪಡುವುದು ನಿಶ್ಚಿತವಾಗಿದೆ.

ಶಿವಕುಮಾರ್‌ ಅವರು ಸಚಿವರಾಗಿ, ಉಪಮುಖ್ಯಮಂತ್ರಿ ಹಲವು ಅಧಿವೇಶನಗಳಲ್ಲಿ ಭಾಗಿಯಾಗಿದ್ದಾರೆ. ಆದರೆ, ಮುಖ್ಯಮಂತ್ರಿಯಾಗಿ ಅವರಿಗೆ ಇದು ಮೊದಲ ಅಧಿವೇಶನ. ಅವರಷ್ಟೇ ಅಲ್ಲದೆ ಅವರ ಸಂಪುಟದ ಹಲವು ಸಚಿವರಿಗೂ ಮೊದಲ ಅಧಿವೇಶನವಾಗಿದೆ. ಅಧಿವೇಶನದಲ್ಲಿ ವಿಧಾನಸಭೆಗೆ ಹೊಸ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ, ವಿಧಾನ ಪರಿಷತ್‌ನಲ್ಲೂ ಹೊಸ ಸಭಾಪತಿ, ಉಪಸಭಾಪತಿ ಆಯ್ಕೆ ಪ್ರಕ್ರಿಯೆಗಳು ನಡೆಯಲಿದ್ದು ಭಾರೀ ಕುತೂಹಲ ಮೂಡಿಸಿದೆ.

ವಾಲ್ಮೀಕಿ ಅಭಿವೃದ್ದಿ ನಿಗಮದ ಅಕ್ರಮ ಆರೋಪದಲ್ಲಿ ಕ್ಲೀನ್‌ಚಿಟ್‌ ಸಿಗುವ ಮೋದಲೇ ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿರುವ ನಾಗೇಂದ್ರ ಅವರನ್ನು ಕೈಬಿಡುವಂತೆ ಆಗ್ರಹಿಸಿ ಅಧಿವೇಶನಕ್ಕೂ ಮೊದಲೇ ಹೋರಾಟ ಶುರು ಮಾಡಿರುವ ಪ್ರತಿಪಕ್ಷ ಬಿಜೆಪಿಯವರು, ಅವರನ್ನು ಸಂಪುಟದಿಂದ ಕೈಬಿಡುವವರೆಗೆ ಅಧಿವೇಶನ ನಡೆಸಲೂ ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಇದರ ಜೊತೆಗೆ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ನಿರಂತರ ಜಿದ್ದಾಜಿದ್ದಿಗೆ ಕಾರಣವಾಗಿರುವ ಬಿಡದಿ ಟೌನ್‌ಶಿಪ್‌, ಕೆಪಿಎಸ್ಸಿ ಹಗರಣದ ವಿಚಾರಗಳು ಬಿಸಿಬಿಸಿ ಚರ್ಚೆ, ಆರೋಪ, ಪ್ರತ್ಯಾರೋಪ, ಕೋಲಾಹಲಕ್ಕೆ ಕಾರಣವಾಗುವ ಎಲ್ಲಾ ನಿರೀಕ್ಷೆಗಳಿವೆ. ಇವುಗಳ ಜೊತೆಗೆ ಕಾವೇರಿ ವಿವಾದ, ಬರ ನಿರ್ವಹಣೆ ವೈಫಲ್ಯ, ರೈತರ ಆತ್ಮಹತ್ಯೆ, ಗೃಹಲಕ್ಷ್ಮೀ ಸೇರಿದಂತೆ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯಿಂದಾಗುತ್ತಿರುವ ಸಮಸ್ಯೆ ಸೇರಿದಂತೆ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ.

ವಿಧಾನ ಪರಿಷತ್‌ನಲ್ಲಿ ಸಭಾಪತಿ ಸ್ಥಾನದಿಂದ ಬಸವರಾಜ ಹೊರಟ್ಟಿ ಅವರನ್ನು ಕೆಳಗಿಳಿಸಿದ್ದು, ಸಭಾಪತಿ ಸ್ಥಾನ ಪಕ್ಷಾತೀತವಾದರೂ ಕಾಂಗ್ರೆಸ್‌ ಪಕ್ಷದ ಲೆಟರ್‌ಹೆಡ್‌ನಲ್ಲಿ ಅಭ್ಯರ್ಥಿ ಹೆಸರು ಪ್ರಕಟಿಸಿದ ವಿಚಾರಗಳು ಜಟಾಪಟಿಗೆ ಕಾರಣವಾಗುವ ಸಾಧ್ಯತೆ ಇದೆ. ಇದೆಲ್ಲದಕ್ಕೂ ಪ್ರತ್ಯುತ್ತರ ನೀಡಲು ಆಡಳಿತ ಪಕ್ಷ ತಯಾರಿ ಮಾಡಿಕೊಂಡಿದೆ. ಇವುಗಳ ನಡುವೆ ಸಂಪುಟ ವಿಸ್ತರಣೆ ಅಸಮಾಧಾನ, ಖಾತೆ ಹಂಚಿಕೆ ಗೊಂದಲದಂತ ಆಂತರಿಕ ವಿಚಾರಗಳಿಗೆ ಆಡಳಿತ ಪಕ್ಷ ಕಾಂಗ್ರೆಸ್‌ ಸದನದಲ್ಲಿ ಉತ್ತರ ನೀಡಬೇಕಾದ ಪರಿಸ್ಥಿತಿ ಎದುರಿಸಬೇಕಾಗಬಹುದು.==

ಆ.14 ರಂದು ಸಭಾಧ್ಯಕ್ಷ, ಸಭಾಪತಿ ಚುನಾವಣೆ:

ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಮತ್ತು ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಆ.14ರಂದು ಚುನಾವಣೆ ನಡೆಯಲಿದ್ದು, ಈ ಕುರಿತು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅಧಿಸೂಚನೆ ಹೊರಡಿಸಿದ್ದಾರೆ. ಸಭಾಧ್ಯಕ್ಷರಾಗಿ ರೋಣ ಕ್ಷೇತ್ರದ ಶಾಸಕ ಜಿ.ಎಸ್‌. ಪಾಟೀಲ ಹಾಗೂ ಸಭಾಪತಿ ಸ್ಥಾನಕ್ಕೆ ಸಲೀಂ ಅಹಮದ್‌ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಈಗಾಗಲೇ ಘೋಷಿಸಿದೆ. ಈ ಇಬ್ಬರೂ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಉಭಯ ಸದನಗಳಲ್ಲಿ ಮೊದಲ ದಿನ ಅಗಲಿದ ಗಣ್ಯರಿಗೆ ಮೊದಲ ದಿನ ಸಂತಾಪ ಸೂಚನೆ ನಡೆಯಲಿದೆ. ಮರುದಿನ ಸಭಾಧ್ಯಕ್ಷ, ಸಭಾಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ.

ಸಭಾಧ್ಯಕ್ಷರಾಗಿದ್ದ ಯು.ಟಿ. ಖಾದರ್‌ ಸಚಿವರಾಗಿರುವುದರಿಂದ ಹಂಗಾಮಿ ಸಭಾಧ್ಯಕ್ಷರಾಗಿ ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ ಕಾರ್ಯನಿರ್ವಹಿಸಲಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ ನಂತರ, ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಅವರನ್ನು ಹಂಗಾಮಿ ಸಭಾಪತಿಯಾಗಿ ನೇಮಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೀದರ್ ಎಟಿಎಂ ₹83 ಲಕ್ಷ ದರೋಡೆ: 19 ತಿಂಗಳ ಬಳಿಕ ಬಿಹಾರದಲ್ಲಿ ಖದೀಮರ ಬೇಟೆಯಾಡಿದ ಕರ್ನಾಟಕ ಪೊಲೀಸರು!
ಡಿ.ಕೆ.ಶಿವಕುಮಾರ್ ಸಂಪುಟದ ಸಚಿವರಿಗೆ ಕೊನೆಗೂ ಸಿಕ್ತು ಖಾತೆ: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಅಧಿಕೃತ ಪಟ್ಟಿ!