ಮೂರನೇ ಬಾರಿ ಅಭಯ್ ಕುಮಾರ್ ಪಾಟೀಲ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅಭಯಕುಮಾರ್ ಪಾಟೀಲ್ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ.
ಬೆಂಗಳೂರು(ಮೇ.20): ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಕುಮಾರ್ ಪಾಟೀಲ ವಿರುದ್ಧದ ಖಾಸಗಿ ದೂರನ್ನು ಹೈಕೋರ್ಟ್ ಮೂರನೇ ಬಾರಿ ರದ್ದುಪಡಿಸಿದೆ.
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಖಾಸಗಿ ದೂರಿನ ತನಿಖೆಗೆ ಶಿಫಾರಸು ಮಾಡಿ 2017ರಲ್ಲಿ ಬೆಳಗಾವಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಲೋಕಾಯುಕ್ತ ವಿಶೇಷ) ಮೂರನೇ ಬಾರಿಗೆ ಹೊರಡಿಸಿದ್ದ ಆದೇಶ ಮತ್ತು ಈ ಸಂಬಂಧ ಬೆಳಗಾವಿ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಪಾಟೀಲ್ ಹೈಕೋರ್ಟ್‌ಗೆ ಮೂರನೇ ಬಾರಿ ತಕರಾರು ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿ ಪುರಸ್ಕರಿಸಿರುವ ಹೈಕೋರ್ಟ್, ಪಾಟೀಲ್ ವಿರುದ್ಧದ ಖಾಸಗಿ ದೂರನ್ನು ಮೂರನೇ ಬಾರಿ ರದ್ದುಪಡಿಸಿ ಆದೇಶಿಸಿದೆ.
ಬೆಳಗಾವಿಗೆ ಗುಜರಿ ಬಸ್‌ಗಳೇ ಗತಿ: ಅಭಯ ಪಾಟೀಲ
ಆದೇಶದ ವಿವರ:
ಪ್ರಕರಣವನ್ನು ತನಿಖೆಗೆ ಶಿಫಾರಸು ಮಾಡಿದ ಸಂದರ್ಭದಲ್ಲಿ ಅರ್ಜಿದಾರರು ಶಾಸಕರಾಗಿರಲಿಲ್ಲ. ಹಾಗಾಗಿ, ದೂರು ಹಾಗೂ ಎಫ್‌ಐಆರ್ ದಾಖಲಿಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲವೆಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ. ಆದರೆ, 2012ರಲ್ಲಿ ಖಾಸಗಿ ದೂರು ದಾಖಲಾಗಿದ್ದ ವೇಳೆ ಅವರು ಶಾಸಕರಾಗಿದ್ದರು. 2017ರಲ್ಲಿ ಪ್ರಕರಣ ಮೂರನೇ ಬಾರಿಗೆ ತನಿಖೆಗೆ ಶಿಫಾರಸುಗೊಂಡಿದ್ದ ವೇಳೆ ಅವರು ಶಾಸಕರು ಆಗಿರದೇ ಇರಬಹುದು. ಆದರೆ, ಇದೇ ಹೈಕೋರ್ಟ್‌ನ ಮತ್ತೊಂದು ಪೀಠ, ಅರ್ಜಿದಾರರು ಶಾಸಕರಾಗಿದ್ದಾಗ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ಖಾಸಗಿ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಎರಡು ಬಾರಿ ಪೊಲೀಸರ ಎಫ್‌ಐಆರ್ ಅನ್ನು ರದ್ದುಪಡಿಸಿದೆ. ಹೀಗಿದ್ದರೂ ಕೂಡ ಪೂರ್ವಾನುಮತಿಯಿಲ್ಲದೇ ಮೂರನೇ ಬಾರಿ ಎಫ್‌ಐಆರ್ ಹಾಕಲಾಗಿದೆ ಎಂದು ನ್ಯಾಯಮೂರ್ತಿ ಆರ್.ನಟರಾಜನ್ ಅವರ ಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಪೊಲೀಸರಿಗೆ ದೂರು ಸಲ್ಲಿಸದೆ ಪೂರ್ವಾನುಮತಿ ಇಲ್ಲದೇ ನೇರವಾಗಿ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದರೆ, ಆ ದೂರನ್ನು ತನಿಖೆಗಾಗಿ ಪೊಲೀಸರಿಗೆ ನ್ಯಾಯಾಲಯ ಶಿಫಾರಸು ಮಾಡುವುದು ಊರ್ಜಿತವಾಗುವುದಿಲ್ಲ. ಪೂರ್ವಾನುಮತಿ ಮತ್ತು ಪೊಲೀಸರಿಂದ ಸೋರ್ಸ್ ರಿಪೋರ್ಟ್ ಇಲ್ಲದೆಯೇ ಖಾಸಗಿ ದೂರು, ಎಫ್‌ಐಆರ್ ದಾಖಲಿಸಿರುವುದು ಮತ್ತು ತನಿಖೆ ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗಿದೆ ಎಂದಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧದ ಖಾಸಗಿ ದೂರು ಮತ್ತು ಎಸಿಬಿ ಪೊಲೀಸರು/ಲೋಕಾಯುಕ್ತ ಪೊಲೀಸರು 2017ರಲ್ಲಿ ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸಿದೆ.
ಮೂರು ಬಾರಿ ತನಿಖೆಗೆ ಶಿಫಾರಸು
2004ರಿಂದ 2008ರ ಅವಧಿಯಲ್ಲಿ ಶಾಸಕರಾಗಿದ್ದ ಅಭಯ್ ಪಾಟೀಲ್ ಆದಾಯ ಮೀರಿ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಆರೋಪಿಸಿ 2012ರಲ್ಲಿ ವ್ಯಕ್ತಿಯೊಬ್ಬರು ಬೆಳಗಾವಿ ಲೋಕಾಯುಕ್ತ ಕೋರ್ಚ್‌ಗೆ ಖಾಸಗಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ನ್ಯಾಯಾಲಯ ಲೋಕಾಯುಕ್ತ ಪೊಲೀಸರ ತನಿಖೆಗೆ ಆದೇಶಿಸಿತ್ತು. ಲೋಕಾಯುಕ್ತ ಪೊಲೀಸರು 2012ರಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಅದನ್ನು ಪ್ರಶ್ನಿಸಿ ಅಭಯ್ ಕುಮಾರ್ ಪಾಟೀಲ್ 2013ರಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಚ್ ಎಫ್‌ಐಆರ್ ರದ್ದುಪಡಿಸಿ, ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿತ್ತು. ಆದರೆ ಮತ್ತೊಮ್ಮೆ ಅದೇ ಖಾಸಗಿ ದೂರನ್ನು ಲೋಕಾಯುಕ್ತ ಪೊಲೀಸರ ತನಿಖೆಗೆ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಈ ವೇಳೆ ಅಸ್ತಿತ್ವದಲ್ಲಿದ್ದ ಎಸಿಬಿ ಪೊಲೀಸರು 2017ರಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಮತ್ತೆ ಅಭಯ್ ಕುಮಾರ್ ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದರು.ಎರಡನೇ ಬಾರಿ ಕೂಡ ಹೈಕೋರ್ಚ್, ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಿ 2017ರ ಆ.8ರಂದು ಆದೇಶಿಸಿತ್ತು.
ಇದಾದ ಬಳಿಕ ಮೂರನೇ ಬಾರಿ ಖಾಸಗಿ ದೂರನ್ನು ಪೊಲೀಸರ ತನಿಖೆಗೆ ವಿಶೇಷ ನ್ಯಾಯಾಲಯ ಶಿಫಾರಸು ಮಾಡಿತ್ತು. ಎಸಿಬಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿತ್ತು. ಈ ಮಧ್ಯೆ ಎಸಿಬಿ ರಚನೆಯನ್ನು ಹೈಕೋರ್ಟ್ ಅಸಿಂಧು ಮಾಡಿದ ಕಾರಣ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದರು. ಇದರಿಂದ ಮೂರನೇ ಬಾರಿ ಅಭಯ್ ಕುಮಾರ್ ಪಾಟೀಲ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅಭಯಕುಮಾರ್ ಪಾಟೀಲ್ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ.