ACB Raid: 2020ರಲ್ಲೇ ಮಾಯಣ್ಣ ವಿರುದ್ಧ ದಾಖಲೆ ಸಮೇತ ದೂರು

By Kannadaprabha NewsFirst Published Nov 25, 2021, 7:47 AM IST
Highlights

*   ನನ್ನನ್ನು ಬೆಂಬಲಿಸಿದವರನ್ನೂ ಗುರಿಯಾಗಿಸಿದ್ದಾರೆ: ಪಾಲಿಕೆ ಎಫ್‌ಡಿಎ
*  ತಮಗೆ ಪ್ರತಿಸ್ಪರ್ಧಿ ಆಗುತ್ತಾರೆ ಎಂದು ದಾಳಿ ನಡೆಸಿದ್ದಾರೆ: ಸ್ನೇಹಿತೆ
*  ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ಗುರುತಿಸಿಕೊಂಡಿದ್ದಕ್ಕೆ ದಾಳಿ

ಬೆಂಗಳೂರು(ನ.25):  ಬಿಬಿಎಂಪಿ(BBMP) ಪ್ರಥಮ ದರ್ಜೆ ಸಹಾಯಕ(FDA) ಮಾಯಣ್ಣ ವಿರುದ್ಧ ಜೋಸೆಫ್‌ ಎಂಬಾತ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB) ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಮಾಯಣ್ಣ(Mayanna) ಪತ್ನಿ ಉಮಾ ಹೆಸರಲ್ಲಿ ನಗರದ ಉಲ್ಲಾಳದಲ್ಲಿ 4 ಅಂತಸ್ತಿನ ಕಟ್ಟಡ, ಮಾಯಣ್ಣ ಹೆಸರಲ್ಲಿ ವೀರಭದ್ರನಗರದಲ್ಲಿ 4 ಅಂತಸ್ತಿನ ಬಂಗಲೆ, ಹಾರ್ತಿಕ್‌ ಗೌಡ ಎಂಬ ಗುತ್ತಿಗೆದಾರರ ಹೆಸರಲ್ಲಿ ಬೇನಾಮಿ ಆಸ್ತಿ, ಮಾಯಣ್ಣ ಹೆಸರಲ್ಲಿ ಕೆಂಗೇರಿ ಬಳಿ 2 ನಿವೇಶನ, ಚಾಮರಾಜಪೇಟೆಯಲ್ಲಿ ಕಚೇರಿ, ಬೇನಾಮಿ ಹೆಸರಲ್ಲಿ ಒಂದು ಇನೋವಾ ಕ್ರಿಸ್ಟಾ, ಒಂದು ಬೆಂಜ್‌ ಕಾರು ಹೊಂದಿದ್ದು, ಪ್ರಸಿದ್ಧ ದೇವಸ್ಥಾನಗಳಿಗೆ ಲಕ್ಷಾಂತರ ರುಪಾಯಿ ದೇಣಿಗೆ ನೀಡಿರುವ ಬಗ್ಗೆ ದಾಖಲೆಗಳ ಸಮೇತ ಎಸಿಬಿಗೆ ದೂರು(Complaint) ನೀಡಿದ್ದರು. ಬಿಬಿಎಂಪಿ ಕಚೇರಿಯಿಂದ ಟೇಬಲ್‌, ಜೆರಾಕ್ಸ್‌ ಮಿಷನ್‌ ಪಡೆದು ತಮ್ಮ ಮನೆಗೆ ತೆಗೆದುಕೊಂಡು ಹೋಗಿರುವ ಬಗ್ಗೆಯೂ ದೂರಿನಲ್ಲಿ ದಾಖಲಿಸಲಾಗಿದೆ. 2020ರ ಮೇ ತಿಂಗಳಲ್ಲಿ ದೂರು ದಾಖಲಿಸಲಾಗಿತ್ತು. ಈ ದೂರಿನ ಮೇರೆಗೆ ಮಾಹಿತಿ ಕಲೆ ಹಾಕಿ ದಾಳಿ(Raid) ನಡೆಸಲಾಗಿದೆ ಎಂದು ಹೇಳಲಾಗಿದೆ.

ರೈತರಿಂದ ಲಕ್ಷ ಲಕ್ಷ ಲಂಚ: ಕಡೆಗೂ ಎಸಿಬಿ ಬಲೆಗೆ ಬಿದ್ದ ಕೆಐಎಡಿಬಿ ಅಧಿಕಾರಿ

ಕಸಪಾ ಚುನಾವಣೆ ಹಿನ್ನೆಲೆಯಲ್ಲಿ ನನ್ನ ಮೇಲೆ ದಾಳಿ: ಮಾಯಣ್ಣ

ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆ(Kannada Sahitya Parishad Election) ಹಿನ್ನೆಲೆಯಲ್ಲಿ ತಮ್ಮ ಮೇಲೆ ಎಸಿಬಿ ದಾಳಿ ನಡೆದಿದೆ. ಇದರಲ್ಲಿ ಯಾವುದೇ ಸಂಶಯವೇ ಬೇಡ ಎಂದು ಬಿಬಿಎಂಪಿ ಪ್ರಥಮ ದರ್ಜೆ ಸಹಾಯಕ ಮಾಯಣ್ಣ ಹೇಳಿದ್ದಾರೆ.

ಎಸಿಬಿ ದಾಳಿ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ನನಗೆ ಸಹಕಾರ ನೀಡಿದವರನ್ನು ಗುರಿಯಾಗಿಸಿ ಎಸಿಬಿ ದಾಳಿ ಮಾಡಲಾಗಿದೆ. ಉಮಾದೇವಿ(Umadevi) ನನ್ನ ಜತೆ ಹೆಚ್ಚು ಒಡನಾಟ ಇರಿಸಿಕೊಂಡಿದ್ದರು. ಚುನಾವಣೆ ವೇಳೆ ನನ್ನ ಜತೆ ಹೆಚ್ಚು ಓಡಾಡಿದ್ದರು. ಅದಕ್ಕೆ ಅವರನ್ನೂ ಗುರಿ ಮಾಡಿದ್ದಾರೆ ಎಂದು ಮಾಯಣ್ಣ ಆರೋಪಿಸಿದರು.

ದಾಳಿ ವೇಳೆ ಮನೆಯಲ್ಲಿ ಯಾವುದೋ ಪಹಣಿ ಸಿಕ್ಕ ಮಾತ್ರಕ್ಕೆ ಅದು ಬೇನಾಮಿ ಆಸ್ತಿ ಅಲ್ಲ. ತನಿಖೆಯಿಂದ ಇದು ಯಾವ ಆಸ್ತಿ ಎನ್ನುವುದು ತಿಳಿಯಲಿದೆ. ಇನ್ನು ಮನೆಯಲ್ಲಿ 556 ಗ್ರಾಂ ಚಿನ್ನವಿದೆ. ಒಂದೂವರೆ ಕೆ.ಜಿ.ಬೆಳ್ಳಿಯಿದೆ. ಪತ್ನಿ ಕಿಡ್ನಿ ಆಪರೇಷನ್‌ ಆಗಿದೆ. ಹೀಗಾಗಿ ಅವಳ ಚಿಕಿತ್ಸೆಗೆ 59 ಸಾವಿರವನ್ನು ಇರಿಸಿಕೊಂಡಿದ್ದೇನೆ ಎಂದರು.

ಅಧಿಕಾರಿಗಳು ಕಾನೂನು ಪ್ರಕಾರ ಏನು ಮಾಡಬೇಕೋ ಮಾಡಿದ್ದಾರೆ. ನಾನು ಉತ್ತರ ಕೊಡಲೇಬೇಕು. ನಾನು ಕಾನೂನು ಬದ್ಧವಾಗಿ ಇದ್ದೇನೆ. ನನ್ನ ತಂದೆ ಸಹ ಬಿಬಿಎಂಪಿ ನೌಕರರಾಗಿದ್ದರು. ನಾನೂ ಕಾನೂನು ಚೌಕಟ್ಟು ಬಿಟ್ಟು ಹೋಗಿಲ್ಲ. ನಾನು ಜವಾಬ್ದಾರಿಯಿಂದ ಇದ್ದೇನೆ. ಅಧಿಕಾರಿಗಳು ನನಗೆ 24 ಪ್ರಶ್ನೆ ಕೇಳಿದ್ದರು. ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ. ನೋಟಿಸ್‌(Notice) ನೀಡಿರುವ ಅಧಿಕಾರಿಗಳು ಒಂದು ವಾರದ ಬಳಿಕ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ನನ್ನ ಮೇಲೆ ಯಾರು ದಾಳಿ ಮಾಡಿಸಿದ್ದಾರೋ ಅವರನ್ನು ಮುಂದಿನ ದಿನಗಳಲ್ಲಿ ದೇವರು ನೋಡಿಕೊಳ್ಳುತ್ತಾನೆ. ನಾನು ನನ್ನ ಕನ್ನಡ ಕೆಲಸವನ್ನು ಮುಂದುವರಿಸುತ್ತೇನೆ ಎಂದು ಮಾಯಣ್ಣ ಹೇಳಿದರು.

ACB Raid: ಏಕಕಾಲದಲ್ಲಿ 60 ಕಡೆ ದಾಳಿ, ಭ್ರಷ್ಟರಿಗೆ ನಡುಕ ಹುಟ್ಟಿಸಿದ ಅಧಿಕಾರಿಗಳು

ಮಾಯಣ್ಣನಿಂದ ನನ್ನನ್ನು ದೂರ ಮಾಡಲು ಹುನ್ನಾರ: ಉಮಾದೇವಿ

ಬಿಬಿಎಂಪಿಯ ಪ್ರಥಮ ದರ್ಜೆ ಅಧಿಕಾರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಮಾಜಿ ಅಧ್ಯಕ್ಷ ಮಾಯಣ್ಣ ಮತ್ತು ತಮ್ಮನ್ನು ದೂರ ಮಾಡಲು ಈ ದಾಳಿ ನಡೆದಿದೆ ಎಂದು ಮಾಯಣ್ಣ ಅವರ ಸ್ನೇಹಿತೆ ಉಮಾದೇವಿ ಹೇಳಿದ್ದಾರೆ.
ಎಸಿಬಿ ದಾಳಿ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಏಳಿಗೆ ಸಹಿಸಲಾಗದೇ ಯಾರೋ ಹುನ್ನಾರ ಮಾಡಿ ತಮ್ಮ ವಿರುದ್ಧ ಎಸಿಬಿ ದೂರು ನೀಡಿದ್ದಾರೆ. ಏನೇ ಆದರೂ ಮಾಯಣ್ಣ ಅವರೊಂದಿಗಿನ ಒಡನಾಟವನ್ನು ಬಿಡುವುದಿಲ್ಲ. ನಾನು ಮಾಯಣ್ಣ ಅವರ ವಲಯದಲ್ಲಿ ಇದ್ದೇನೆ ಎಂದು ಬಿಂಬಿಸಲಾಗುತ್ತಿದೆ. ನಾನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಯಣ್ಣ ಜೊತೆ ಗುರುತಿಸಿಕೊಂಡಿದ್ದಕ್ಕೆ ಈ ದಾಳಿ ಆಗಿದೆ. ನನ್ನ ಪತಿ ಮೃತರಾದ ಬಳಿಕ ತಂದೆಯ ಮನೆಯಲ್ಲೇ ಇದ್ದೇನೆ. ಈ ದಾಳಿಯಿಂದ ಅವರಿಗೂ ಅವಮಾನ ಆಗಿದೆ. ತಮಗೆ ಪ್ರತಿಸ್ಪರ್ಧಿ ಆಗುತ್ತಾರೆ ಎಂದು ಈ ದಾಳಿ ಮಾಡಿಸಲಾಗಿದೆ ಎಂದು ಉಮಾದೇವಿ ಆರೋಪಿಸಿದರು.

ಕೆಲ ವರ್ಷಗಳ ಹಿಂದೆ ನೀವು ಮಾಯಣ್ಣ ಅವರಿಂದ ದೂರ ಇರಿ ಎಂದು ಬೆದರಿಕೆ ಹಾಕಿದ್ದರು. ಐದಾರು ಜನರ ಬೆದರಿಕೆ ಸಂದೇಶಗಳು ನನ್ನ ಬಳಿ ಇವೆ. ಸಾಹಿತ್ಯ ಪರಿಷತ್‌ ಚುನಾವಣೆಯಾಗಿ ಎರಡೇ ದಿನಕ್ಕೆ ಎಸಿಬಿ ದಾಳಿಯಾಗಿದೆ. ಚುನಾವಣೆಗೂ ಮುನ್ನ ದಾಳಿ ಮಾಡಿದ್ದರೆ ಅನುಕಂಪದಿಂದ ಗೆದ್ದು ಬಿಡುತ್ತಾರೆ ಎಂದು ಚುನಾವಣೆ ಬಳಿಕ ದಾಳಿ ಮಾಡಿಸಿದ್ದಾರೆ. ನಾವು ಯಾವುದೇ ಅಕ್ರಮ ಎಸಗಿಲ್ಲ. ಇಂದು ಹೆಣ್ಣಿನ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ಗುರುತಿಸಿಕೊಂಡಿದ್ದಕ್ಕೆ ದಾಳಿಯಾಗಿದೆ ಎಂದು ಉಮಾದೇವಿ ದೂರಿದರು.
 

click me!