ನೆಟೆ ರೋಗದಿಂದ ತೊಗರಿ ಬೆಳೆ ನಷ್ಟ: ರಾಜ್ಯ ಸರ್ಕಾರದಿಂದ ಪರಿಹಾರ ಘೋಷಣೆ

By Girish GoudarFirst Published Jan 25, 2023, 10:24 AM IST
Highlights

ಹಾನಿಗೊಳಗಾದ ರೈತರ ನೆರೆವಿಗೆ ಧಾವಿಸಿದ ಸರ್ಕಾರವು “ವಿಶೇಷ ಪ್ರಕರಣ”ವೆಂದು ರಾಜ್ಯ ಸರ್ಕಾರ ತೀರ್ಮಾನಿಸಿ ಪರಿಹಾರ ಘೋಷಣೆ. 

ಬೆಂಗಳೂರು(ಜ.25):  ಬೀದರ್‌, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ನೆಟೆ ರೋಗದಿಂದ ತೊಗರಿ ಬೆಳೆಗೆ ಸಂಭವಿಸಿದ  ಬೆಳೆಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್‌ಗೆ 10,000 ರೂ. ಗಳಂತೆ ಎನ್.ಡಿ.ಆರ್.ಎಫ್./ಎಸ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಗರಿಷ್ಟ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಬಾಧಿತ ರೈತರಿಗೆ ಪರಿಹಾರ ಘೋಷಿಸಿದೆ. ಒಟ್ಟು ಪರಿಹಾರ ಮೊತ್ತ 223 ಕೋಟಿಯೆಂದು ಅಂದಾಜಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ(ಮಂಗಳವಾರ) ಕಲಬುರಗಿ ಜಿಲ್ಲಾ ಪ್ರವಾಸದಿಂದ ಹಿಂತಿರುಗಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಈ ತೀರ್ಮಾನ ಕೈಗೊಳ್ಳಲಾಗಿದೆ.

ಕಲಬುರಗಿ: ಪಂಚರತ್ನ ಯಾತ್ರೆ ವೇಳೆ ತೊಗರಿ ರೈತರ ಪರ ಎಚ್‌ಡಿಕೆ ಪ್ರತಿಭಟನೆ 

ಬೀದರ್‌, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಹಾಗೂ ತದನಂತರ ನವೆಂಬರ್ ತಿಂಗಳಿನಲ್ಲಿ ತಲೆದೋರಿದ ಒಣ/ ಶುಷ್ಕ ವಾತಾವರಣದಿಂದ ತೊಗರಿ ಬೆಳೆಯಲ್ಲಿ ಸಂಕೀರ್ಣ ನೆಟೆ ರೋಗ ಮೇಲಿನ ಮೂರು ಜಿಲ್ಲೆಗಳಲ್ಲಿ ಉಲ್ಬಣ ಗೊಂಡು ಬೆಳೆಹಾನಿಯಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಸುಮಾರು 1.98 ಲಕ್ಷ ಹೆಕ್ಟೇರ್, ಬೀದರ ಜಿಲೆಯಲ್ಲಿ ಸುಮಾರು 0.145 ಲಕ್ಷ ಹೆಕ್ಟೇರ್ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸುಮಾರು 0.1028 ಲಕ್ಷ ಹೆಕ್ಟೇರ್ ಒಟ್ಟಾರೆಯಾಗಿ 2.2278 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ತೊಗರಿ ಬೆಳೆ ಸಂಕೀರ್ಣ ನೆಟೆ ರೋಗಕ್ಕೆ ಹಾನಿಯಾಗಿರುವುದು ವರದಿಯಾಗಿರುತ್ತದೆ. ಹಾನಿಗೊಳಗಾದ ರೈತರ ನೆರೆವಿಗೆ ಧಾವಿಸಿದ ಸರ್ಕಾರವು “ವಿಶೇಷ ಪ್ರಕರಣ”ವೆಂದು ರಾಜ್ಯ ಸರ್ಕಾರ ತೀರ್ಮಾನಿಸಿ ಪರಿಹಾರ ಘೋಷಿಸಿದೆ.

click me!