
ಬೆಂಗಳೂರು (ಜ.25) : ಮದುವೆಯಾದ ವೇಳೆ 18 ವರ್ಷ ತುಂಬಿರಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರ ವಿವಾಹ ಅನೂರ್ಜಿತಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ದುಡಿವ ಶಕ್ತಿ ಇದ್ದರೆ ಪತಿಗೆ ಜೀವನಾಂಶ ಇಲ್ಲ: ಹೈಕೋರ್ಟ್
ಪ್ರಕರಣದ ವಿವರ: ಮಂಡ್ಯ ಜಿಲ್ಲೆಯ ಸುಶೀಲಾ ಅವರು ಮಂಜುನಾಥ್ ಅವರೊಂದಿಗೆ ಹಿಂದೂ ವಿವಾಹ ಕಾಯ್ದೆ ಪ್ರಕಾರ 2012ರ ಜೂ.15ರಂದು ಮದುವೆಯಾಗಿದ್ದರು. ತದನಂತರ ಪತಿ ಮಂಜುನಾಥ್ ಅವರು, ಆಕೆಯ ಜನ್ಮ ದಿನಾಂಕ 06.09.1995 ಆಗಿದೆ. ಮದುವೆಯಾಗುವಾಗ ತಮ್ಮ ಪತ್ನಿ ಅಪ್ರಾಪ್ತೆಯಾಗಿದ್ದರು ಎಂಬ ಕಾರಣದಿಂದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತಮ್ಮ ಮದುವೆಯನ್ನು ರದ್ದು ಅಥವಾ ಅಸಿಂಧುಗೊಳಿಸಬೇಕೆಂದು ಎಂದು ಕೋರಿದ್ದರು.
ಅದನ್ನು ಪುರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ, ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್ 5(3)ರÜಂತೆ ಮದುವೆಯಾಗಲು ವಧುವಿಗೆ 18 ವರ್ಷ ಆಗಿರಬೇಕು. ಪ್ರಕರಣದಲ್ಲಿ ಮದುವೆ ಆದ ಸಮಯದಲ್ಲಿ ಪತ್ನಿಗೆ 16 ವರ್ಷ 11 ತಿಂಗಳು 8 ದಿನ ಆಗಿತ್ತು. ಆದ್ದರಿಂದ ಮದುವೆ ಕಾಯ್ದೆಯ ಸೆಕ್ಷನ್ 11ರ ಪ್ರಕಾರ ಊರ್ಜಿತವಾಗುವುದಿಲ್ಲ ಎಂದು ತಿಳಿಸಿ, ಸುಶೀಲಾ ಮತ್ತು ಮಂಜುನಾಥ್ ಅವರ ಮದುವೆಯನ್ನು ಅನೂರ್ಜಿತಗೊಳಿಸಿ 2015ರ ಜ.8ರಂದು ಆದೇಶಿಸಿತ್ತು. ಈ ಆದೇಶ ರದ್ದುಪಡಿಸಲು ಕೋರಿ ಸುಶೀಲಾ ಅವರು ಹೈಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
High Court of Karnataka: ತಂದೆಯ ಸಾಲಕ್ಕೆ ಮಗ ಚೆಕ್ ನೀಡಿದ್ದರೆ ಸಾಲ ತೀರಿಸುವ ಹೊಣೆ ಮಗನದ್ದೇ!
ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 5(3) ಪ್ರಕಾರ ಮದುವೆ ಸಂದರ್ಭದಲ್ಲಿ ವರನ ವಯಸ್ಸು 21 ಮತ್ತು ವಧುವಿನ ವಯಸ್ಸು 18 ಇರಬೇಕು. ಆದರೆ, ವಿವಾಹವನ್ನು ರದ್ದುಪಡಿಸಬೇಕಾದರೆ ಕಾಯ್ದೆಯ ಸೆಕ್ಷನ್ 5ರ ನಿಯಮ 1, 4 ಮತ್ತು 5ಕ್ಕೆ ವಿರುದ್ಧವಾಗಿರಬೇಕು. ಮದುವೆಯಾದಾಗ 18 ವರ್ಷ ಆಗಿರಬೇಕು ಎಂಬ ನಿಯಮವನ್ನು ಸೆಕ್ಷನ್ 11ರ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದ್ದರಿಂದ ಅಪ್ರಾಪ್ತೆ ಎಂಬ ಕಾರಣಕ್ಕೆ ಸೆಕ್ಷನ್ 11 ಪ್ರಕಾರ ವಿವಾಹ ಅನೂರ್ಜಿತಗೊಳಿಸುವುದು ಈ ಪ್ರಕರಣಕ್ಕೆ ಅನ್ವಯಿಸದು ಎಂದು ಸ್ಪಷ್ಟಪಡಿಸಿದೆ. ಜತೆಗೆ, ಮೇಲ್ಮನವಿದಾರರ ವಿವಾಹ ಅನೂರ್ಜಿತವಲ್ಲವೆಂದು ಆದೇಶಿಸಿರುವ ಹೈಕೋರ್ಚ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ