
ಕಲಬುರಗಿ (ಆ.14): ಕಲ್ಯಾಣ ಕರ್ನಾಟಕ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ದೂರದರ್ಶನ ಕೇಂದ್ರ ಸ್ಥಗಿತಗೊಳಿಸುವ ನಿಖರ ಹಾಗೂ ಅಧಿಕೃತ ಮಾಹಿತಿ ಕೇಂದ್ರದಿಂದ ದೊರೆತದ್ದೆ ಆದಲ್ಲಿ ಈ ಕೇಂದ್ರ ಮುಚ್ಚದಂತೆ ರಾಜ್ಯ ಸರ್ಕಾರದಿಂದ ಕೇಂದ್ರದ ಮೇಲೆ ಒತ್ತಡ ತರಲಾಗುತ್ತದೆ. ಪತ್ರವನ್ನೂ ಬರೆಯಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 2 ದಿನದ ಹಿಂದೆ ಮೇಲ್ಮನೆಯಲ್ಲಿ ಸದಸ್ಯ ತಿಪ್ಪಣ್ಣ ಕಮಕನೂರ್ ಅವರು ಈ ವಿಷಯ ಪ್ರಸ್ತಾಪಿಸಿ, ದಕ್ಷಿಣ ಭಾರತದ ಮೊದಲ ಕೇಂದ್ರವಾಗಿದ್ದು ಇದನ್ನು ಮುಚ್ಚದೆ ಅಭಿವೃದ್ಧಿಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಎಂಎಲ್‌ಸಿ ತಿಪ್ಪಣ್ಣ ಕಮಕನೂರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಿಎಂ ಸಿದ್ದರಾಮಯ್ಯ, ಈ ಕೇಂದ್ರ ಮುಚ್ಚುವಂತೆ ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ, ದೂರದರ್ಶನ ಕೇಂದ್ರದ ಅಭಿವೃದ್ಧಿ ಕೇಂದ್ರದ ಕೈಯಲ್ಲಿದೆ. ದೂರದರ್ಶನ ಕೇಂದ್ರ ಮುಚ್ಚುವ ಅಧಿಕೃತ ಮಾಹಿತಿ ಕೇಂದ್ರದಿಂದ ಲಭ್ಯವಾದಲ್ಲಿ ತಕ್ಷಣ ಪತ್ರ ಬರೆದು, ಇದು ಮುಚ್ಚದಂತೆ ಆಗ್ರಹಿಸಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ಮೇಲ್ಮನೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಮಕನೂರ್, ಸೆ.3, 1977ರಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದಲ್ಲಿ ದೂರದರ್ಶನ ಕೇಂದ್ರ ಆರಂಭಿಸಲಾಗಿದೆ. ಅದೇ ಕೇಂದ್ರ ಸರ್ಕಾರ, ಆ ಕೇಂದ್ರ ಮುಚ್ಚಲು ಹೊರಟ್ಟಿರುವುದು ವಿಪರ್ಯಾಸ. ಕೆಲ ತಿಂಗಳನಿಂದ ಒಂದೊಂದೆ ಕಾರ್ಯಕ್ರಮ ಸ್ಥಗಿತ ಗೊಳಿಸಲಾಗಿದೆ. ಕಾರ್ಯಕ್ರಮಗಳ ಪ್ರಸಾರವೂ ಬಂದ್ ಮಾಡಿದೆ ಎಂದು ಎಂಎಲ್‌ಸಿ ಕಮಕನೂರ್ ಗಮನ ಸಳೆದಿದ್ದರು.
ನಮಗೂ ಆದ್ಯತೆ ನೀಡಿ: ದಕ್ಷಿಣ ರಾಜ್ಯಗಳಿಗೆ ಅನುದಾನ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಲೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ, ಅಭಿವೃದ್ಧಿ ವಿಚಾರದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಷ್ಟೇ ಒತ್ತು ಕರ್ನಾಟಕಕ್ಕೂ ನೀಡಬೇಕು. ಉತ್ತರ ರಾಜ್ಯಗಳಂತೆ ಕರ್ನಾಟಕ್ಕೂ ಹೆಚ್ಚಿನ ಅನುದಾನ ನೀಡಬೇಕು ಎಂದು ಪ್ರಧಾನಿ ಮೋದಿ ಸಮ್ಮುಖದಲ್ಲೇ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಸಭಾಂಗಣದಲ್ಲಿ ನಡೆದ ಮೆಟ್ರೋ ಹಂತ-3ರ ಶಂಕುಸ್ಥಾಪನೆ, ಮೆಟ್ರೋ ಹಂತ- 2ರ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಳದಿ ಮಾರ್ಗದ ಉದ್ಘಾಟನೆ ಮತ್ತು ಬೆಂಗಳೂರಿನಿಂದ ಬೆಳಗಾವಿ ಸೇರಿ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರವು ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಅಭಿವೃದ್ಧಿ ವಿಚಾರವಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಅದೇ ರೀತಿ ಅಭಿವೃದ್ಧಿ ಕಾಮಗಾರಿ, ಯೋಜನೆ, ಅನುದಾನ ನೀಡಿಕೆಯಲ್ಲಿ ಕರ್ನಾಟಕಕ್ಕೂ ಒತ್ತು ನೀಡಬೇಕು ಎಂದು ಪ್ರಧಾನಿ ಅವರನ್ನು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ