ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿಗೆ ಸರ್ಕಾರ ಯಾವುದೇ ಕಾಲಮಿತಿ ನೀಡಿಲ್ಲ: ಗೃಹ ಸಚಿವರ ಸ್ಪಷ್ಟನೆ

Published : Aug 14, 2025, 06:05 PM IST
Karnataka Home Minister G Parameshwara (Photo/ANI)

ಸಾರಾಂಶ

ಧರ್ಮಸ್ಥಳದಲ್ಲಿ ನಡೆದ ಶವಗಳ ಹೂಳುವಿಕೆ ಪ್ರಕರಣದ ತನಿಖೆಗೆ ಸರ್ಕಾರ ಯಾವುದೇ ಕಾಲಮಿತಿ ಹಾಕಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ವರದಿ ಬಂದ ನಂತರ ಹೆಚ್ಚಿನ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ ಅವರು, ಎಸ್ಐಟಿಗೆ ಸಾಕ್ಷಿದಾರರ ಗಂಭೀರತೆ ಅರಿವಿದೆ ಎಂದರು. ಸತ್ಯ ಹೊರಬರಬೇಕೆಂದು ಹೇಳಿದರು

ಬೆಂಗಳೂರು: ಧರ್ಮಸ್ಥಳ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಮತ್ತು ಶೋಧ ಕಾರ್ಯಕ್ಕೆ ಸಂಬಂಧಿಸಿದಂತೆ, ಎಸ್ಐಟಿ ಶೋಧನೆಗೆ ಸರ್ಕಾರ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ಮೊದಲು ಈ ವಿಚಾರದಲ್ಲಿ ಆಸಕ್ತಿ ತೋರಿಸಲಿಲ್ಲ. ಈಗ ಮಾತ್ರ ಸದನದಲ್ಲಿ ಹೇಳಿಕೆ ಪಡೆಯಲು ಉತ್ಸಾಹ ತೋರಿಸುತ್ತಿದ್ದಾರೆ. ನಾವು ಎಸ್ಐಟಿ ರಚಿಸದೇ ಇದ್ದರೆ ಸರ್ಕಾರದ ಮೇಲೆ ಆರೋಪಗಳು ಬಂದಿರುತ್ತಿದ್ದವು. ಆಗ ‘ನಾನೇ ಅಲ್ಲಿ ಹೂತು ಹಾಕಿದ್ದೆ, ನಾನೇ ನೋಡಿದ್ದೆ, ನೀವು ಗುಂಡಿ ತೋಡಲಿಲ್ಲ’ ಎಂದು ಹೇಳುತ್ತಿದ್ದರು. ಈಗ ಎಸ್ಐಟಿ ರಚಿಸಿದ ನಂತರವೂ ಮಾತಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಮುಂದುವರಿದು ಮಾತನಾಡಿ ವರದಿ ಬಂದ ಬಳಿಕ ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಸೂಕ್ತ. ಇದು ಎಂದೆಂದಿಗೂ ಮುಂದುವರಿಯುವ ವಿಚಾರವಲ್ಲ, ಎಲ್ಲೋ ಒಂದು ಕಡೆ ಅಂತ್ಯಗೊಳ್ಳಬೇಕು. ಎಸ್ಐಟಿಗೆ ದೂರುದಾರರು ಹಾಗೂ ಸಾಕ್ಷಿದಾರರ ಗಂಭೀರತೆ ಗೊತ್ತಿದೆ. ಅನಾಮಿಕನ ಹೇಳಿಕೆ, ಮಂಪರು ಪರೀಕ್ಷೆಗಳ ಕುರಿತು ತೀರ್ಮಾನ ಮಾಡುವ ಅಧಿಕಾರ ಎಸ್ಐಟಿಗೇ ಇದೆ. ಹಣಕಾಸಿನ ಲೆಕ್ಕ ಹಿಡಿದುಕೊಂಡರೆ ಯಾವ ಪ್ರಕರಣವನ್ನೂ ಮುಂದೆ ನಡೆಸಲು ಆಗುವುದಿಲ್ಲ. ಆದರೆ ವಿಧಾನಸೌಧದಲ್ಲಿ ಕೂತು ನಾನು ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಎಸ್ಐಟಿಯೇ ಅನಾಮಿಕನನ್ನು ಭೇಟಿಯಾಗಿ ಹೇಳಿಕೆ ಪಡೆಯುತ್ತಿದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು. ಅನನ್ಯ ಭಟ್ ಇಲ್ಲವೇ ಇಲ್ಲ ಎಂಬುದು ಸ್ಥಳೀಯ ಮಟ್ಟದಲ್ಲಿ ಗೊತ್ತಾಗಿದೆ ಎಂದರು.

ಧರ್ಮಸ್ಥಳ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿ “ಯಾರೋ ಒಬ್ಬ ವ್ಯಕ್ತಿ ಬಂದು ಆರೋಪ ಮಾಡಿದ್ದಾರೆ ಎಂಬ ಕಾರಣಕ್ಕೆ ನಾವು ಆ ಆರೋಪವನ್ನು ಹಾಗೆಯೇ ಒಪ್ಪಿಕೊಳ್ಳಬೇಕಾ? ಸತ್ಯ ಹೊರಗೆ ಬರಬೇಕು ಅಲ್ವಾ? ಅದಕ್ಕಾಗಿ ನಾವು ತನಿಖೆ ಮಾಡಿಸುತ್ತಿದ್ದೇವೆ. ನಮಗೂ ಕೂಡ ಕಾಳಜಿ ಇದೆ. ಈ ವಿಚಾರದಲ್ಲಿ ರಾಜಕೀಯ ಪ್ರಭಾವ ಬರಬಾರದು, ನಮ್ಮ ಮೇಲೂ ಬರಬಾರದು.

ಒಂದು ವೇಳೆ ಆ ವ್ಯಕ್ತಿ ಹೇಳಿದ್ದು ಸುಳ್ಳು ಎಂದು ಸಾಬೀತಾದರೆ, ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಅವಕಾಶ ಇದೆ. ಪ್ರತಿಯೊಂದು ವಿಷಯಕ್ಕೂ ಸರ್ಕಾರದ ಮೇಲೆ ಬೆರಳು ತೋರಿಸುವುದು ಸರಿಯಲ್ಲ. ನಾವು ತನಿಖೆಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ನಾನು ಆಗಲಿ, ಮುಖ್ಯಮಂತ್ರಿ ಆಗಲಿ, ಯಾರೂ ಪೊಲೀಸ್ ಇಲಾಖೆಗೆ ಒಂದು ಫೋನ್ ಕಾಲ್ ಮಾಡಿಲ್ಲ. ನಾನು ಸೋಮವಾರ ಸಂಪೂರ್ಣ ವಿವರವಾಗಿ ಈ ಬಗ್ಗೆ ಉತ್ತರ ನೀಡುತ್ತೇನೆ ಎಂದು ಹೇಳಿದರು.

ಸಚಿವರು ಮುಂದುವರಿದು ಮಾತನಾಡಿ “ನಾವು ಯಾವುದೇ ಒತ್ತಡಕ್ಕೆ ಮಣಿದಿಲ್ಲ, ಮಣಿಯುವುದಿಲ್ಲ. ಸತ್ಯ ಹೊರಗೆ ಬರಬೇಕು. ಧರ್ಮಸ್ಥಳದ ಮೇಲೆ ನಮಗೆ ಅಪಾರ ನಂಬಿಕೆ ಇದೆ. ನಾನು ಅನೇಕ ಬಾರಿ ಅಲ್ಲಿ ಭೇಟಿ ನೀಡಿದ್ದೇನೆ. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಕೂಡಾ ಅಲ್ಲಿ ಭೇಟಿ ನೀಡಿದ್ದರು. ಇಸ್ಲಾಂ ಧರ್ಮಕ್ಕೆ ಸೇರಿದವರಾದರೂ ಅವರು ಏನನ್ನೂ ತಪ್ಪಾಗಿ ನೋಡಿಲ್ಲ.

ವೀರೇಂದ್ರ ಹೆಗ್ಗಡೆ ಅವರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಅವರು ಹೆಣ್ಣು ಮಕ್ಕಳಿಗೆ ಜೀವನ ಕೊಡುವ ಮಹತ್ವದ ಸೇವೆ ಮಾಡಿದ್ದಾರೆ. ಅವರ ಮೇಲೆ ಬಂದಿರುವ ಆರೋಪದ ಬಗ್ಗೆ ಸತ್ಯ ಹೊರಗೆ ಬರಬಾರದಾ? ಅದಕ್ಕಾಗಿ ನಾವು ನಿಜಾಂಶ ಹುಡುಕುತ್ತಿದ್ದು, ತಪ್ಪಿಲ್ಲದವರು ತಪ್ಪಿನಿಂದ ಹೊರಬರಬೇಕು. ಈ ವಿಚಾರಕ್ಕೆ ಎಲ್ಲೋ ಒಂದು ಕಡೆ ಅಂತ್ಯ ಬರಬೇಕು,” ಎಂದು ಗೃಹ ಸಚಿವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!