ನಾಥ ಪರಂಪರೆ ಜಾತಿರಹಿತವಾದದ್ದು: ಸಿಎಂ ಸಿದ್ದರಾಮಯ್ಯ

By Kannadaprabha News  |  First Published Sep 12, 2023, 9:18 AM IST

1800 ವರ್ಷಗಳ ಇತಿಹಾಸ ಇರುವ ಪ್ರಾಚೀನ ಕ್ಷೇತ್ರವಾದ ಆದಿಚುಂಚನಗಿರಿ ಪ್ರಸ್ತುತ ಹೆಮ್ಮರವಾಗಿ ಬೆಳೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.


ಮೈಸೂರು:  1800 ವರ್ಷಗಳ ಇತಿಹಾಸ ಇರುವ ಪ್ರಾಚೀನ ಕ್ಷೇತ್ರವಾದ ಆದಿಚುಂಚನಗಿರಿ ಪ್ರಸ್ತುತ ಹೆಮ್ಮರವಾಗಿ ಬೆಳೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನ ಹೆಬ್ಬಾಳು ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡ, ಬಿಜಿಎಸ್ ಸಾಂಸ್ಕೃತಿಕ ಭವನ ಹಾಗೂ ಉಚಿತ ವಿದ್ಯಾರ್ಥಿನಿಲಯವನ್ನು ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.

Latest Videos

undefined

50 ವರ್ಷಗಳ ಹಿಂದೆ ನೋಡಿದಾಗ ಮಠ ಇವತ್ತಿನಷ್ಟು ಬೆಳೆದಿರಲಿಲ್ಲ. ಈಗ ನೂರಾರು ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆಸ್ಪತ್ರೆ ನಿರ್ಮಿಸಲಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ವಿಶಾಲವಾಗಿ ಬೆಳೆದಿದೆ. ಧಾರ್ಮಿಕ ಕಾರ್ಯಗಳ ಜತೆಗೆ ಎಲ್ಲಾ ಜಾತಿ, ಭಾಷೆಯ ಮಕ್ಕಳಿಗೆ ಶಿಕ್ಷಣ ನೀಡುತ್ತ ಸಾಮಾಜಿಕ ಸೇವೆಯಲ್ಲಿ ನಿರತವಾಗಿದೆ. ಈ ಬೆಳವಣಿಗೆಗೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಶ್ರಮವನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಜಾತ್ಯತೀತ ಪಂಥ

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿರುವ ಚುಂಚನಗಿರಿ ಕ್ಷೇತ್ರ ಈಶ್ವರನ ತಪೋಭೂಮಿ. ಅನೇಕ ಜನ ಸಾಧು ಸಂತರನ್ನು ಕಂಡಿದೆ. ನಾಥಪಂಥ ಜಾತಿ ರಹಿತವಾದ ಜಾತ್ಯಾತೀತ ಪಂಥ. ಸಮಾಜದಲ್ಲಿನ ಅಸಮಾನತೆಗಳನ್ನು ತೊಡೆದು ಹಾಕಿ ಮಾನವ ಸಮಾಜ ನಿರ್ಮಿಸಲು ಪ್ರಯತ್ನಿಸಿತು. ಈ ಸಿದ್ಧಾಂತವನ್ನು ಚುಂಚನಗಿರಿ ಕ್ಷೇತ್ರವೂ ಅನುಸರಿಸುತ್ತಿದೆ ಎಂದು ಅವರು ಹೇಳಿದರು.

ಸಾವಿರಾರು ವರ್ಷಗಳಿಂದ ಶೂದ್ರ ವರ್ಗ ಅಕ್ಷರದಿಂದ ವಂಚಿತರಾಗಿದ್ದರು. ಶೂದ್ರರಂತೆ ಮಹಿಳೆಯರಿಗೂ ಶಿಕ್ಷಣ ಇರಲಿಲ್ಲ. ಬ್ರಿಟಿಷರು ಬಂದ ಮೇಲೆ ಎಲ್ಲರಿಗೂ ಶಿಕ್ಷಣ ದೊರೆಯಿತು. ಡಾ. ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟ ಮೇಲೆ ಶಿಕ್ಷಣ ಕಡ್ಡಾಯವಾಯಿತು. ಈಗ ಶಿಕ್ಷಣ ಪಡೆಯುವುದು ಒಂದು ಹಕ್ಕಾಗಿದೆ. ಹೀಗಾಗಿ ವಿದ್ಯೆ ಕೊಡುವುದು ಬಹಳ ದೊಡ್ಡ ಕೆಲಸ ಎಂದು ಅವರು ತಿಳಿಸಿದರು.

ಸಿಎಂ ಸಿದ್ದರಾಮಯ್ಯರನ್ನು ಜನರು ದೇವರಾಜ್ ಅರಸರಂತೆ ಕಾಣುತ್ತಿದ್ದಾರೆ: ಶಿವರಾಜ ತಂಗಡಗಿ 

ವಿದ್ಯಾವಂತರು ಜಾತಿವಾದಿಗಳಾಗಬಾರದು

ವಿದ್ಯೆ ಪಡೆದರೆ ಮಾತ್ರ ಯೋಚನಾಪರರು, ಜ್ಞಾನಿಗಳೂ ಸಾಧ್ಯ. ಎಲ್ಲರಿಗೂ ಗುಣಮಟ್ಟದ ವಿದ್ಯೆ ಸಿಗಬೇಕು. ವಿದ್ಯೆ ಪಡೆದವರ ಯೋಚನೆ ಮತ್ತು ನಿಲುವು ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು. ವಿದ್ಯೆ ಕಲಿತು ಜಾತಿವಾದಿಗಳಾದರೆ ಪ್ರಯೋಜನವಿಲ್ಲ ಎಂದರು.

ನಾವೆಲ್ಲರೂ ಆಕಸ್ಮಿಕವಾಗಿ ಯಾವುದೋ ಜಾತಿಯಲ್ಲಿ ಹುಟ್ಟಿದ್ದೇವೆ. ಹಾಗಂತ ಮನುಷ್ಯತ್ವ ಮರೆಯಬಾರದು. ಕುವೆಂಪು ಅವರು ಪ್ರತಿ ಮಗು ವಿಶ್ವಮಾನವನಾಗಿ ಹುಟ್ಟುತ್ತದೆ. ಬೆಳೆಯುತ್ತ ಅಲ್ಪ ಮಾನವರಾಗುತ್ತಾರೆ ಎಂದಿದ್ದಾರೆ. ನಾವು ವಿಶ್ವಮಾನವರಾಗಬೇಕೊ ಅಥವಾ ಅಲ್ಪಮಾನವರಾಗಬೇಕೊ ಎಂದು ಅವರು ಪ್ರಶ್ನಿಸಿದರು.

ಶ್ರೀಗಳಿಗೆ ನನ್ನ ಮೇಲೆ ಅಪಾರ ಪ್ರೀತಿ

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ನನ್ನ ಮೇಲೆ ಅಪಾರವಾದ ಪ್ರೀತಿ ಇದೆ. ಬೇರೆ ಯಾವ ರಾಜಕಾರಣಿಯನ್ನು ಅವರು ನನ್ನಷ್ಟು ಪ್ರೀತಿಸುತ್ತಿರಲಿಲ್ಲ. ಈಗಿನ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನನ್ನ ಮೇಲೆ ಅಪಾರವಾದ ಪ್ರೀತಿ ಹೊಂದಿದ್ದಾರೆ. ಈ ಇಬ್ಬರೂ ಸ್ವಾಮೀಜಿಗೆ ನಾನು ಚಿರಋಣಿ ಎಂದರು.

ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಅವರು ಕೆಂಪೇಗೌಡರ ಜಯಂತಿ ಮಾಡಬೇಕೆಂದು ಕೇಳಿದ್ದರು. ದಿನಾಂಕದ ಬಗ್ಗೆ ಗೊಂದಲ ಇತ್ತು. ಸ್ವಾಮೀಜಿ ಅದನ್ನು ಬಗೆಹರಿಸಿದ ಮೇಲೆ ಸರ್ಕಾರದಿಂದ ಕೆಂಪೇಗೌಡರ ಜಯಂತಿ ಆಚರಿಸಿದೆವು. ಕೆಂಪೇಗೌಡ ಇತಿಹಾಸ ಪುರುಷ. ಅವರ ಹೆಸರು ಚಿರಸ್ಥಾಯಿಯಾಗಿರಬೇಕೆಂದು ಬೆಂಗಳೂರು ವಿಮಾನ ನಿಲ್ದಾಣಕ್ಕೂ ನಮ್ಮ ಸರ್ಕಾರ ಕೆಂಪೇಗೌಡ ಹೆಸರು ನಾಮಕರಣ ಮಾಡಿತು ಎಂದು ಅವರು ಹೇಳಿದರು.

ಕೃತಿಗಳ ಬಿಡುಗಡೆ

ಇದೇ ವೇಳೆ ಸಾಧನ ಪಥ ಸ್ಮರಣ ಸಂಚಿಕೆ, ಗೋರಕ್ಷನಾಥರ ಸಿದ್ಧ ಸಿದ್ಧಾಂತ ಪದ್ಧತಿ, ಗೋರಕ್ಷನಾಥರ ತತ್ವ ದರ್ಶನ, ಸಾಹುಕಾರ್ ಚೆನ್ನಯ್ಯ ಮತ್ತು ಕೆದಂಬಾಡಿ ರಾಮೇಗೌಡರು ಎಂಬ ಕೃತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.

ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ, ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಪ್ರೊ. ಭಾಷ್ಯಂಸ್ವಾಮೀಜಿ, ಶ್ರೀ ಶಿವಾನಂದಪುರಿ ಸ್ವಾಮೀಜಿ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ತನ್ವೀರ್ ಸೇಠ್, ರಮೇಶಬಾಬು ಬಂಡಿಸಿದ್ದೇಗೌಡ, ಕೆ. ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ವಿಧಾನಪರಿಷತ್ತು ಸದಸ್ಯರಾದ ಮರಿತಿಬ್ಬೇಗೌಡ, ಡಾ.ಡಿ. ತಿಮಯ್ಯ, ಸಿ.ಎನ್. ಮಂಜೇಗೌಡ, ದಿನೇಶ್ ಗೂಳಿಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಪಾ, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ಕಳಲೆ ಕೇಶವಮೂರ್ತಿ, ಡಿ. ಮಾದೇಗೌಡ, ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ, ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್, ಮುಖಂಡರಾದ ಎಂ. ಲಕ್ಷ್ಮಣ್, ಡಾ.ಬಿ.ಜೆ. ವಿಜಯ್ ಕುಮಾರ್, ಸಿ. ಬಸವೇಗೌಡ, ಗಂಗಾಧರಗೌಡ ಮೊದಲಾದವರು ಇದ್ದರು. 

ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು ಬಿಜೆಪಿ ಸರ್ಕಾರದಲ್ಲಿ: ಆರ್‌ ಅಶೋಕ್ ತಿರುಗೇಟು

ಶರಣರು ದಯವೇ ಧರ್ಮದ ಮೂಲವಯ್ಯ ಎಂದಿದ್ದಾರೆ. ನನ್ನ ಪ್ರಕಾರ ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮ. ಧರ್ಮಕೋಸ್ಕರ ಮನುಷ್ಯ ಇಲ್ಲ. ಧರ್ಮ ಇರುವುದು ಮನುಷ್ಯನ ಒಳಿತಿಗಾಗಿ. ದಯೆ, ಪ್ರೀತಿ, ಕರುಣೆ ಇಲ್ಲದ್ದು ಧರ್ಮವೇ ಅಲ್ಲ. ಮನುಷ್ಯ ಮನುಷ್ಯನಾಗಿ ಬದುಕುವುದೇ ಧರ್ಮ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಆದಿಚುಂಚನಗಿರಿ ಮಠವು ಜಾತ್ಯತೀತ ಮನಸ್ಸು ಇರಿಸಿಕೊಂಡು ಉದಾರವಾದ ಸೇವೆ ಮಾಡುತ್ತಿದೆ. ಶ್ರೀ ಬಾಲಗಂಗಾಧರ ಸ್ವಾಮೀಜಿ ದೂರದೃಷ್ಟಿಯಿಂದ ಮಠವನ್ನು ಕಟ್ಟಿ ಬೆಳೆಸಿದರು. ಅದರ ವ್ಯಾಪ್ತಿಯನ್ನು ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಬೆಳೆಸುತ್ತಿರುವುದು ಸಂತೋಷದ ವಿಚಾರ.

- ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ

ಡಿ. ಮಾದೇಗೌಡ ಸಜ್ಜನ, ಅದೃಷ್ಟ ಇರಲಿಲ್ಲ- ಸಿಎಂ

ವಿಧಾನಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ ಸಜ್ಜನ ರಾಜಕಾರಣಿ. ವಯಸ್ಸಿನಲ್ಲಿ ನನಗಿಂತ ಸೀನಿಯರ್. ಆದರೆ, ಲಾ ಪ್ರಾಕ್ಟೀಸ್ ಮಾಡುವಾಗ ನಾನೇ ಸೀನಿಯರ್. ಆದರೆ, ಅವರಿಗೆ ರಾಜಕೀಯದಲ್ಲಿ ಅದೃಷ್ಟ ಇರಲಿಲ್ಲ. ನಮಗೆ ಅದೃಷ್ಟದ ಬಲ, ಜನರ ಆಶೀರ್ವಾದ ಇತ್ತು. ಅಧಿಕಾರವೂ ಸಿಕ್ಕಿತು. ಜನರ ಪ್ರೀತಿ, ವಿಶ್ವಾಸ ಸಂಪಾದಿಸದ ಯಾರೂ ಅಧಿಕಾರ ಪಡೆಯಲಾರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

click me!