ಕುಡಿವ ನೀರು ಪೂರೈಕೆಗೆ ಸಿದ್ದು ಖಡಕ್‌ ಸಂದೇಶ

By Kannadaprabha NewsFirst Published Jun 13, 2023, 7:57 AM IST
Highlights

ನಿರ್ಲಕ್ಷ್ಯ ವಹಿಸಿದರೆ ನಿರ್ದಾಕ್ಷಿಣ್ಯ ಕ್ರಮ, ಸಮಸ್ಯೆ ಬಂದ ಕಡೆ 24 ತಾಸಲ್ಲಿ ನೀರು ಪೂರೈಕೆಗೆ ತಾಕೀತು, ಅನುದಾನ ಕೊಡಲು ಸಿದ್ಧ, ನೀರು ಪೂರೈಸುವುದು ಅಧಿಕಾರಿಗಳ ಹೊಣೆ, 8 ಜಿಲ್ಲಾಡಳಿತಕ್ಕೆ ಸಿದ್ದು ಸೂಚನೆ.

ಬೆಂಗಳೂರು(ಜೂ.13):  ರಾಜ್ಯದಲ್ಲಿ ಮುಂಗಾರು ಕೊರತೆಯಿಂದ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸೋಮವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ ಸಿದ್ದರಾಮಯ್ಯ, ಜೂನ್‌ 10ರಿಂದ ಮುಂಗಾರು ಆರಂಭವಾಗಿದೆ. ಜೂನ್‌ 1ರಿಂದ ಈವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ. 67ರಷ್ಟುಕಡಿಮೆ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ವಾಡಿಕೆಯಷ್ಟುಮಳೆಯಾಗುವ ಕುರಿತಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕಾರಣದಿಂದ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Latest Videos

ಸರ್ಕಾರಿ ಆಸ್ಪತ್ರೆ ಸೇವಾ ಗುಣಮಟ್ಟ ಹೆಚ್ಚಳ: ಸಿಎಂ ಸಿದ್ದರಾಮಯ್ಯ

ಮಳೆ ಕೊರತೆಯಿಂದ ಕೆಲ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ರಾಜ್ಯದ 15 ಜಿಲ್ಲೆಗಳ 322 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ಹಾಗೂ 148 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಒದಗಿಸಲಾಗುತ್ತಿದೆ. ಮುಂಗಾರು ಪೂರ್ವ ಮಳೆಯ ಕೊರತೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಆದರೀಗ ಮುಂಗಾರು ಆರಂಭದಿಂದ ಆ ಸಮಸ್ಯೆ ನಿವಾರಣೆಯಾಗುವಂತಾಗಿದೆ ಎಂದರು.

ಜಿಲ್ಲಾ ಪಂಚಾಯತ್‌ ಕಾರ್ಯ ನಿರ್ವಹಣಾಧಿಕಾರಿಗಳು ತಾಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳ ಕಾರ್ಯ ನಿರ್ವಹಣೆ ಬಗ್ಗೆ ನಿಗಾ ವಹಿಸಬೇಕು. ನೀರಿನ ಸಮಸ್ಯೆ ಉದ್ಭವಿಸಿದರೆ 24 ಗಂಟೆಯೊಳಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೂ ನೀರಿನ ಅಭಾವದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು ಅಧಿಕಾರಿಗಳ ಜವಾಬ್ದಾರಿ. ಅನುದಾನದ ಅಗತ್ಯವಿದ್ದರೆ ಸರ್ಕಾರದಿಂದ ಒದಗಿಸಲಾಗುವುದು. ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರವಹಿಸಬೇಕು. ನೀರು ಪೂರೈಕೆ ವಿಚಾರದಲ್ಲಿ ತಪ್ಪು ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಾಲ ಕಾರ್ಮಿಕ ಪದ್ಧತಿ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ: ಸಿಎಂ ಸಿದ್ದು

ಸಚಿವರಾದ ಕೃಷ್ಣ ಬೈರೇಗೌಡ, ರಹೀಂಖಾನ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಜರಿದ್ದರು.

ಶುದ್ಧ ಕುಡಿವ ನೀರಿನ ಘಟಕ ಬಗ್ಗೆ ಆಡಿಟ್‌ಗೆ ಸಿಎಂ ಆದೇಶ

ಸಭೆಯಲ್ಲಿ ಜಲ ಜೀವನ ಮಿಷನ್‌ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯೋಜನೆ ಅಡಿಯಲ್ಲಿ ಸುಸ್ಥಿರ ನೀರಿನ ಮೂಲ ಗುರುತಿಸಿ ಅವುಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಯೋಜನೆಯ ಕಾಮಗಾರಿ ಹಾಗೂ ರಾಜ್ಯದಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಕುರಿತು ಮೂರನೇ ವ್ಯಕ್ತಿ ಅಥವಾ ಸಂಸ್ಥೆ ಮೂಲಕ ಆಡಿಟ್‌ ಮಾಡಿಸುವಂತೆ ಆದೇಶಿಸಿದರು.

ಜಲ ಜೀವನ್‌ ಮಿಷನ್‌ ಅಡಿಯಲ್ಲಿ ಅಳವಡಿಸಲಾಗಿರುವ ನೀರಿನ ಪೈಪ್‌ಲೈನ್‌ಗಳ ಗುಣಮಟ್ಟಪರಿಶೀಲಿಸಬೇಕು. ಕೊಳವೆ ಒಡೆದು ಹೋಗುವುದು ಸೇರಿ ಇನ್ನಿತರ ಸಮಸ್ಯೆ ಉಂಟಾದರೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಜಲಜೀವನ್‌ ಮಿಷನ್‌ ಮೂಲಕ ನೀರು ಒದಗಿಸಿದ ಗ್ರಾಮಗಳಲ್ಲಿ ಕಾಮಗಾರಿಯ ತಪಾಸಣೆ ನಡೆಸಿ, ಪೈಪ್‌ಲೈನ್‌ಗಳನ್ನು ಪರಿಶೀಲಿಸಿ, ಶುದ್ಧ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

click me!