ದೇವೇಗೌಡರು ವಿತ್ತ ಖಾತೆ ಕೊಟ್ಟಾಗ ಬೇಡ ಎಂದಿದ್ದೆ: ಸಿದ್ದರಾಮಯ್ಯ

Published : Jun 27, 2023, 12:00 AM IST
ದೇವೇಗೌಡರು ವಿತ್ತ ಖಾತೆ ಕೊಟ್ಟಾಗ ಬೇಡ ಎಂದಿದ್ದೆ: ಸಿದ್ದರಾಮಯ್ಯ

ಸಾರಾಂಶ

ನೆಲಮಂಗಲದ ಕ್ಷೇಮವನದಲ್ಲಿ ಏರ್ಪಡಿಸಿರುವ ನೂತನ ಶಾಸಕರ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ಏಳು ಬೀಳುಗಳನ್ನು ಶಾಸಕರೆದುರು ತೆರೆದಿಟ್ಟರು

ಬೆಂಗಳೂರು (ಜೂ.17) : ನೆಲಮಂಗಲದ ಕ್ಷೇಮವನದಲ್ಲಿ ಏರ್ಪಡಿಸಿರುವ ನೂತನ ಶಾಸಕರ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ಏಳು ಬೀಳುಗಳನ್ನು ಶಾಸಕರೆದುರು ತೆರೆದಿಟ್ಟರು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ತಮ್ಮ ಮೇಲಿಟ್ಟಿದ್ದ ವಿಶ್ವಾಸ, ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಮೊದಲ ಬಾರಿಗೆ ಚಿಗುರೊಡೆದಿದ್ದು, ಹಣಕಾಸು ಸಚಿವನಾದಾಗ ಎದುರಾದ ಮೂದಲಿಕೆ ಹೀಗೆ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.

ಎಚ್‌.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ನನ್ನನ್ನು ಮೊದಲ ಬಾರಿಗೆ ಹಣಕಾಸು ಸಚಿವನನ್ನಾಗಿ ಮಾಡಿದರು. ನಾನು ಆ ಖಾತೆ ಬೇಡ ಎಂದಿದ್ದೆ. ಆದರೆ, ಅವರು ನಂಬಿಗಸ್ಥರು ಆ ಸ್ಥಾನಕ್ಕೆ ಬೇಕು ಎಂಬ ಕಾರಣಕ್ಕಾಗಿ ನನ್ನನ್ನು ನೇಮಿಸಿದರು. ಆಗ ಪತ್ರಿಕೆಯೊಂದು 100 ಕುರಿ ಲೆಕ್ಕ ಹಾಕಲು ಬಾರದವನು ಹಣಕಾಸು ಸಚಿವನಾದ ಎಂದು ಮೂದಲಿಸಿತು. ಅದನ್ನು ಸವಾಲಾಗಿ ಸ್ವೀಕರಿಸಿ ಆರ್ಥಿಕ ತಜ್ಞರು ಸೇರಿದಂತೆ ಹಲವರ ಅಭಿಪ್ರಾಯ ಪಡೆದು ಬಜೆಟ್‌ ಸಿದ್ಧಪಡಿಸಿ, ಮಂಡಿಸಿದೆ. ನಂತರ ದಿನಪತ್ರಿಕೆಗಳು ಬಜೆಟ್‌ ಅನ್ನು ಹೊಗಳಿ ಸಂಪಾದಕೀಯ ಬರೆದವು ಎಂದು ಹೇಳಿದರು.

ರಾಜಕೀಯ ಎಂಬುದು ಗಣಿತ, ಕೆಮಿಸ್ಟ್ರಿ, ಸರ್ಕಸ್‌: ಖಾದರ್‌

ನಾಲ್ಕು ಬಾರಿ ಸೋತಿದ್ದೇನೆ:

ನಾನು, ಬಿ.ಎಸ್‌. ಯಡಿಯೂರಪ್ಪ, ಆರ್‌.ವಿ. ದೇಶಪಾಂಡೆ ಎಲ್ಲರೂ ಒಂದೇ ಅವಧಿಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರು. ಸಭಾಪತಿ ಬಸವರಾಜ ಹೊರಟ್ಟಿದೀರ್ಘಾವಧಿ ಸಂಸದೀಯ ಸದಸ್ಯರಾಗಿದ್ದಾರೆ. 8 ಬಾರಿ ಗೆಲುವು ಸಾಧಿಸಿದ್ದಾರೆ. ಅವರಿಂದ ತಿಳಿಯುವುದು ಬಹಳಷ್ಟುಇದೆ. ನಾನು 13 ಚುನಾವಣೆಗಳನ್ನು ಎದುರಿಸಿದ್ದೇನೆ. ಅದರಲ್ಲಿ ಎರಡು ಬಾರಿ ವಿಧಾನಸಭೆ ಚುನಾವಣೆ, ಮತ್ತೆರಡು ಬಾರಿ ಲೋಕಸಭೆ ಚುನಾವಣೆ ಸೋತಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಸೋಲು, ಗೆಲುವು ಸಹಜ ಎಂದು ಸಿದ್ದರಾಮಯ್ಯ ತಿಳಿಸಿದರು.

ನಾನು ಎಲ್ಲರಿಗೂ ಮುಖ್ಯಮಂತ್ರಿ:

ನಾನು ಕೇವಲ ಕಾಂಗ್ರೆಸ್‌ಗೆ ಮುಖ್ಯಮಂತ್ರಿಯಲ್ಲ. ಕಾಂಗ್ರೆಸ್ಸೇತರ ಶಾಸಕರಿಗೂ, ರಾಜ್ಯದ ಎಲ್ಲ 7 ಕೋಟಿ ಜನರಿಗೂ ಮುಖ್ಯಮಂತ್ರಿ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ನನ್ನ ಗುರಿ. ವಿಧಾನಸೌಧವನ್ನು ದೇಗುಲ ಎನ್ನುತ್ತೇವೆ. ಅಧಿವೇಶನದಲ್ಲಿ ಸಮಸ್ಯೆಗಳನ್ನು ಚರ್ಚೆ ಮಾಡಬೇಕು, ಅದಕ್ಕೆ ಪರಿಹಾರ ಪಡೆದುಕೊಳ್ಳಬೇಕು. ಸಂವಿಧಾನ ಗೊತ್ತಿಲ್ಲದವರು ಉತ್ತಮ ಸಂಸದೀಯಪಟುವಾಗಲು ಸಾಧ್ಯವಿಲ್ಲ. ಎಲ್ಲ ಶಾಸಕರೂ ಸಂವಿಧಾನ ಓದಿ, ತಿಳಿದುಕೊಳ್ಳಬೇಕು ಎಂದರು.

ನಾನು, ಸಿ.ಟಿ.ರವಿ, ಈಶ್ವರಪ್ಪ ಕುರಿ ಕಾಯಬೇಕಿತ್ತು:

ಹಿಂದೆ ಅಧಿವೇಶನದಲ್ಲಿ ಮಾತನಾಡುತ್ತಾ ಸಂವಿಧಾನದ ಮಹತ್ವದ ಬಗ್ಗೆ ಆಗ ಶಾಸಕರಾಗಿದ್ದ ಸಿ.ಟಿ.ರವಿ, ಕೆ.ಎಸ್‌.ಈಶ್ವರಪ್ಪ ಅವರಿಗೆ ತಿಳಿಸುತ್ತಿದ್ದೆ. ಸಂವಿಧಾನ ನಮಗೆ ಅವಕಾಶ ನೀಡಿದ್ದರಿಂದ ನಾವು ಶಾಸಕರಾಗಿದ್ದೇವೆ. ಇಲ್ಲದಿದ್ದರೆ ನಾನು, ಸಿ.ಟಿ.ರವಿ, ಕೆ.ಎಸ್‌.ಈಶ್ವರಪ್ಪ ಎಲ್ಲರೂ ಎಮ್ಮೆ, ದನ, ಕುರಿ ಕಾಯುತ್ತಾ ಇರಬೇಕಿತ್ತು. ನನ್ನದು ಒರಟು ಮಾತು, ಆದರೆ ಸತ್ಯವನ್ನು ಹೇಳುತ್ತೇನೆ. ನಾನು ಎಂಬ ಅಹಂಕಾರ ಇರಬಾರದು. ಆ ರೀತಿ ಇದ್ದ ಹಿಟ್ಲರ್‌ ಜರ್ಮನಿಯಲ್ಲಿ ಮಾರಣ ಹೋಮ ನಡೆಸಿದ. ಕೊನೆಗೇ ಅವನೇ ಆತ್ಮಹತ್ಯೆ ಮಾಡಿಕೊಂಡ ಎಂದು ಸೂಕ್ಷ್ಮವಾಗಿ ತಿಳಿಸಿದರು.

ವಾಟಾಳ್‌, ಮಾಧುಸ್ವಾಮಿ ಕಂಡರೆ ಹೆದರುತ್ತಿದ್ದೆವು:

ನಾವು ಇಂದಿಗೂ ಗೋಪಾಲಗೌಡ ಉತ್ತಮ ಸಂಸದೀಯಪಟು ಎಂದು ಸ್ಮರಿಸುತ್ತೇವೆ. ಸದನದಲ್ಲಿ ಅವರು ಜನರ ಸಮಸ್ಯೆಗಳ ಬಗ್ಗೆಯೇ ಮಾತನಾಡುತ್ತಿದ್ದರು. ಹಾಗೆಯೇ, ವೈಕುಂಠ ಬಾಳಿಗ ಅವರು ಉತ್ತಮ ಸ್ಪೀಕರ್‌ ಎಂದು ಗುರುತಿಸುತ್ತೇವೆ. ಅವರು ಸದನವನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು, ಉತ್ತಮವಾಗಿ ನಡೆಸಿದರು. ಆ ರೀತಿಯ ಸಂಸದೀಯ ಪಟುಗಳು ಹುಟ್ಟಿಕೊಳ್ಳಬೇಕು ಎಂದರು.

ವಾಟಾಳ್‌ ನಾಗರಾಜ್‌, ಮಾಧುಸ್ವಾಮಿ, ಶ್ರೀರಾಮರೆಡ್ಡಿ ಅವರು ಶಾಸಕರಾಗಿದ್ದಾಗ ನಾವು ಅಧಿಕಾರದಲ್ಲಿದ್ದೆವು. ಅವರನ್ನು ಕಂಡರೆ ನಮಗೆಲ್ಲ ಹೆದರಿಕೆ ಆಗುತ್ತಿತ್ತು. ಅಧಿವೇಶನದಲ್ಲಿ ಅಷ್ಟುನಿಖರವಾಗಿ ಪ್ರಶ್ನೆ ಕೇಳುತ್ತಿದ್ದರು. ಅವರು ಯಾವ ಪ್ರಶ್ನೆ ಕೇಳುತ್ತಾರೋ ಎಂಬ ಆತಂಕದಲ್ಲಿಯೇ ಸದನಕ್ಕೆ ಬರುತ್ತಿದ್ದೆವು. ಅದರಲ್ಲೂ ವಾಟಾಳ್‌ ನಾಗರಾಜ್‌ ಸದನ ಆರಂಭವಾದಾಗಿನಿಂದ ಮುಕ್ತಾಯವಾಗುವವರೆಗೆ ಎದ್ದು ಹೋಗುತ್ತಿರಲಿಲ್ಲ. ಅಂತಹ ಸಂಸದೀಯ ಪಟುವನ್ನು ನಾನು ನೋಡಿಲ್ಲ ಎಂದು ಶ್ಲಾಘಿಸಿದರು.

ಬಜೆಟ್‌ ಗಾತ್ರ ಹೆಚ್ಚಳ:

ಕೆಂಗಲ್‌ ಹನುಮಂತಯ್ಯ ಅವರ ಅವಧಿಯಲ್ಲಿ 21.3 ಕೋಟಿ ರು. ಗಾತ್ರದ ಬಜೆಟ್‌ ಮಂಡಿಸಲಾಗಿತ್ತು. ಅದೇ ಈಗ 3.09 ಲಕ್ಷ ಕೋಟಿ ರು. ಬಜೆಟ್‌ ಮಂಡಿಸಲಾಗಿದೆ. ಜುಲೈನಲ್ಲಿ ನಾನು ಬಜೆಟ್‌ ಮಂಡಿಸುತ್ತಿದ್ದು, 3.35 ಲಕ್ಷ ಕೋಟಿ ರು. ಗಾತ್ರ ಇರಲಿದೆ. ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಕೆ ಮಾಡುವ ಕಾರಣದಿಂದ ಬಜೆಟ್‌ ಗಾತ್ರ ಹೆಚ್ಚಳವಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪ್ರೊ. ಎಂಡಿಎನ್‌ ನನ್ನ ರಾಜಕೀಯ ಗುರು: ಸಿದ್ದು

ಸಭಾ ಕಾರ್ಯಕ್ರಮದ ನಂತರ ನೂತನ ಶಾಸಕರೊಂದಿಗೆ ಸಂವಾದ ನಡೆಸಿದ ಸಿದ್ದರಾಮಯ್ಯ, ಶಾಸಕರು ಕೇಳಿದ ಪ್ರಶ್ನೆಗೆ ಉತ್ತರಿಸಿ ತಮ್ಮ ರಾಜಕೀಯ ಬದುಕನ್ನು ತೆರೆದಿಟ್ಟರು. ಶಾಸಕನಾದ ನಂತರ ಸದನದಲ್ಲಿ ಮೊದಲ ಬಾರಿಗೆ ಪ್ರಾಥಮಿಕ ಶಿಕ್ಷಣದ ಬಗ್ಗೆ ಚರ್ಚೆ ಮಾಡಿದ್ದೆ. ಗ್ರಾಮೀಣ ಶಿಕ್ಷಣದ ಸಮಸ್ಯೆ ಬಗ್ಗೆ ಸದನದ ಗಮನ ಸೆಳೆದಿದ್ದೆ ಎಂದು ಪ್ರಶ್ನೆಯೊಂದಕ್ಕೆ ಹೇಳಿದರು.

ಸಿಎಂ ಆಗಬೇಕೆಂಬ ಕನಸು ಯಾವಾಗ ಹುಟ್ಟಿಕೊಂಡಿತು ಎಂದು ಶಾಸಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಹಣಕಾಸು ಸಚಿವನಾದ ನಂತರ ಮುಖ್ಯಮಂತ್ರಿಯಾಗಬೇಕು ಎಂದೆನಿಸಿತು. 1996ರಲ್ಲಿ ದೇವೇಗೌಡ ಅವರು ಪ್ರಧಾನಿಯಾದಾಗ ನಾನು ಮುಖ್ಯಮಂತ್ರಿಯಾಗಬೇಕೆಂದು ಪ್ರಯತ್ನಿಸಿದೆ. ಆಗ ಜೆ.ಎಚ್‌. ಪಟೇಲ್‌ ಅವರು ಮುಖ್ಯಮಂತ್ರಿಯಾದರು ಎಂದು ಹೇಳಿದರು.

ಚುನಾವಣೆ ಬಗೆಗಿನ ಪ್ರಶ್ನೆಗೆ, ನಾನು ಮೊದಲು ಶಾಸಕನಾಗಿದ್ದು ಪಕ್ಷೇತರನಾಗಿ. ಆಗ 63 ಸಾವಿರ ರು. ಖರ್ಚಾಗಿತ್ತು. ಜನರೇ ಆಗ ದುಡ್ಡು ನೀಡಿ ಗೆಲ್ಲಿಸಿದ್ದರು. ಈಗ ಜಾತಿ, ಹಣ ಬಲವಿಲ್ಲದೆ ಗೆಲ್ಲಲಾಗುವುದಿಲ್ಲ. ಗೆದ್ದ ನಂತರ ಪಕ್ಷಾಂತರ ಎಂಬ ಪಿಡುಗು ಶುರುವಾಗಿದೆ. ಹಿಂದೆಲ್ಲ ಆಪರೇಷನ್‌ ಕಮಲ, ಹಸ್ತ, ತೆನೆ ಹೊತ್ತ ಮಹಿಳೆ ಇರಲಿಲ್ಲ. ಎಲ್ಲರೂ ಸಿದ್ಧಾಂತಕ್ಕೆ ಬದ್ಧರಾಗಿರುತ್ತಿದ್ದರು ಎಂದರು.

ವಿರೋಧ ಪಕ್ಷದ ಶಾಸಕರು ಸರ್ಕಾರದ ಮೇಲೆ ಕಣ್ಣಿಟ್ಟಿರಬೇಕು. ಆಡಳಿತ ಪಕ್ಷ ಮಾಡುವ ಜನವಿರೋಧಿ ನೀತಿ, ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಬೇಕು. ನನಗೆ ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ ಹುದ್ದೆಗಳಲ್ಲಿ ಜನಪರ ಕೆಲಸ ಮಾಡಿದಾಗ ಖುಷಿ ಕೊಡುತ್ತದೆ ಎಂದು ತಿಳಿಸಿದರು.

ಅರ್ಧಗಂಟೆ ಬೇಡಿದರೂ ಒಂದು ಹಿಡಿ ಅಕ್ಕಿ ಕೊಡದ ಕೇಂದ್ರ ಸರ್ಕಾರ: ಬರಿಗೈಲಿ ಬಂದ ಸಚಿವ ಮುನಿಯಪ್ಪ

ಪ್ರೊ. ನಂಜುಂಡಸ್ವಾಮಿ ನನಗೆ ರಾಜಕೀಯ ಗುರು:

ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ರೈತ ಹೋರಾಟಗಾರ ಪ್ರೊ. ನಂಜುಂಡಸ್ವಾಮಿ ಅವರ ಸಂಪರ್ಕಕ್ಕೆ ಬಂದೆ. ಅವರು ರಾಜಕಾರಣದ ಬಗ್ಗೆ ಚರ್ಚಿಸುತ್ತಿದ್ದರು. ನನ್ನನ್ನು ಸಮಾಜವಾದಿ ಪಕ್ಷಕ್ಕೆ ಸೇರಿಸಿದರು. ನಂತರ ನಾನು ರೈತ ಸಂಘಕ್ಕೆ ಸೇರಿಕೊಂಡೆ. ತುರ್ತು ಪರಿಸ್ಥಿತಿ ವಿರೋಧಿಸಿ ಹೋರಾಟ ಮಾಡಿದ್ದೆ. ಕರಪತ್ರ ಹಂಚಿದ್ದಕ್ಕೆ ಪೊಲೀಸರು ಒದ್ದು ಕರೆದುಕೊಂಡು ಹೋಗಿದ್ದರು ಎಂದು ವಿವರಿಸಿದ ಅವರು, ನನಗೆ ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳಲ್ಲಿ ಸಂವಿಧಾನಕ್ಕೆ ಪರವಾಗಿ ಕೆಲಸ ಮಾಡುವ ಪಕ್ಷ ಇಷ್ಟಎಂದು ಮಾರ್ಮಿಕವಾಗಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ