ಸರ್ಕಾರಿ ಆರೋಗ್ಯ ಕಾರ್ಡ್‌ನಡಿ ಇನ್ನು ದೇಶಾದ್ಯಂತ ಚಿಕಿತ್ಸೆ: ಈ ಕಾರ್ಡ್‌ ಇದ್ರೆ ಏನು ಸಿಗುತ್ತೆ?

By Kannadaprabha News  |  First Published Dec 7, 2023, 4:00 AM IST

‘ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಾರೋಗ್ಯ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ’ ಹೆಸರಿನಲ್ಲಿ ಮರುನಾಮಕರಣಗೊಂಡಿರುವ ನೂತನ ರೂಪದ ಹೆಲ್ತ್‌ ಕಾರ್ಡ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಂಜೆ ಸುವರ್ಣಸೌಧದಲ್ಲಿ ಬಿಡುಗಡೆ ಮಾಡಿದರು.
 


ಸುವರ್ಣ ವಿಧಾನಸೌಧ (ಡಿ.07): ‘ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಾರೋಗ್ಯ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ’ ಹೆಸರಿನಲ್ಲಿ ಮರುನಾಮಕರಣಗೊಂಡಿರುವ ನೂತನ ರೂಪದ ಹೆಲ್ತ್‌ ಕಾರ್ಡ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಂಜೆ ಸುವರ್ಣಸೌಧದಲ್ಲಿ ಬಿಡುಗಡೆ ಮಾಡಿದರು. ಈ ನೂತನ ಕಾರ್ಡ್‌ಗಳನ್ನು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ನ್ಯಾಷನಲ್ ಪೋರ್ಟಲ್‌ಗೆ ಸಂಯೋಜನೆಗೊಳಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್‌ ಕುಟುಂಬಗಳಿಗೆ ವಿತರಣೆ ಮಾಡುವ ಹೆಲ್ತ್ ಕಾರ್ಡ್‌ಗಳಿಂದ ಇತರೆ ರಾಜ್ಯಗಳಲ್ಲೂ ಚಿಕಿತ್ಸೆ ಪಡೆಯಬಹುದಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಈವರೆಗೆ ರಾಜ್ಯದಲ್ಲಿ ‘ಆಯುಷ್ಮಾನ್‌ ಭಾರತ್-ಆರೋಗ್ಯ ಕರ್ನಾಟಕ’ ಹೆಸರಿನಲ್ಲಿ ಹೆಲ್ತ್‌ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದ್ದು, ಇದೀಗ ನವೀಕೃತ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ಆರು ತಿಂಗಳಲ್ಲಿ 5.09 ಕೋಟಿ ಕಾರ್ಡ್‌ ವಿತರಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು. ಯೋಜನೆಯಡಿ ಬಿಪಿಎಲ್‌ ಕುಟುಂಬದಾರರು ಹೊಂದಿರುವ ಪ್ರತಿ ಕಾರ್ಡ್‌ಗೆ ಒಟ್ಟು ಕುಟುಂಬ ಸದಸ್ಯರಿಗೆ ವಾರ್ಷಿಕ 5 ಲಕ್ಷ ರು.ವರೆಗಿನ ಚಿಕಿತ್ಸೆ ಉಚಿತವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ ಶೇ.66 ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಹಾಗೂ ಶೇ.34 ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಭರಿಸಲಿದೆ.

Latest Videos

undefined

ಬಿಜೆಪಿ ಬ್ರಾಂಡ್‌ ಬೆಂಗಳೂರು ಮಾಡಿದ್ದಾರೆಯೇ?: ಸಿಎಂ ಸಿದ್ದರಾಮಯ್ಯ

ಇನ್ನು ಎಪಿಎಲ್‌ ಕುಟುಂಬದವರಿಗೂ ಅವಕಾಶ ಕಲ್ಪಿಸಿದ್ದು, 5 ಲಕ್ಷ ರು.ವರೆಗಿನ ಚಿಕಿತ್ಸೆಯಲ್ಲಿ ಗರಿಷ್ಠ 1.5 ಲಕ್ಷ ರು. (ಶೇ.30) ರಾಜ್ಯ ಸರ್ಕಾರ ಭರಿಸಲಿದೆ. ಶೇ.70 ರಷ್ಟು ಚಿಕಿತ್ಸಾ ವೆಚ್ಚವನ್ನು ಕಾರ್ಡ್‌ದಾರರು ಪಾವತಿಸಬೇಕು ಎಂದು ಮಾಹಿತಿ ನೀಡಿದರು. ಪ್ರಸ್ತುತ ರಾಜ್ಯದಲ್ಲಿ 3450ಕ್ಕೂ ಹೆಚ್ಚು ಆಸ್ಪತ್ರೆಗಳು ಯೋಜನೆಯಡಿ ನೋಂದಣಿಯಾಗಿವೆ. 171 ಅತ್ಯಂತ ತುರ್ತು ಚಿಕಿತ್ಸೆಯ ಮತ್ತು ಜೀವ ಉಳಿಸುವ ಪ್ಯಾಕೇಜ್‌ಗಳನ್ನು ಒಳಗೊಂಡಿದೆ. ಈ ಕಾರ್ಡ್‌ಗಳನ್ನು ರಾಷ್ಟ್ರೀಯ ಆರೋಗ್ಯ ID (ABHA ID) ಜತೆ ಜೋಡಿಸಲಾಗಿದೆ. ಇದರಿಂದ ಫಲಾನುಭವಿಗಳ ವ್ಯೆದ್ಯಕೀಯ ದಾಖಲೆಗಳನ್ನು ಸಂರಕ್ಷಿಸಿ ಸುಲಭ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಲು ನೆರವಾಗುತ್ತದೆ ಎಂದರು.

ಎಲ್ಲಿ ಕಾರ್ಡ್‌ ಸಿಗುತ್ತದೆ?: ಪಡಿತರ ಚೀಟಿಯೊಂದಿಗೆ ಜೋಡಿಸಲಾದ ಮೂಲ ಆಧಾರ್‌ ಗುರುತಿನ ಚೀಟಿಯ ಸಹಾಯದಿಂದ ಹತ್ತಿರದ ಗ್ರಾಮ-1 ಕೇಂದ್ರಗಳು ಅಥವಾ ನಾಗರೀಕ ಸೇವಾ ಕೇಂದ್ರಗಳಲ್ಲಿ ಹೆಲ್ತ್‌ ಕಾರ್ಡ್‌ ಪಡೆಯಬಹುದು. ಸದ್ಯದಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಹೆಲ್ತ್‌ ಕಾರ್ಡ್‌ ನೋಂದಣಿ ಸೇವೆ ಶುರುವಾಗಲಿದ್ದು, ಪ್ರಸ್ತುತ ಲಭ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಪಿಪಿ ಮಾದರಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಕ್ರಮ: ಸಚಿವ ಎಚ್.ಕೆ.ಪಾಟೀಲ್‌

- ನೂತನ ಕಾರ್ಡ್‌ಗಳು ರಾಷ್ಟ್ರೀಯ ಪೋರ್ಟಲ್‌ ಜತೆ ಸಂಯೋಜನೆಗೊಂಡಿವೆ
- ಹೀಗಾಗಿ ಇತರೆ ರಾಜ್ಯಗಳಲ್ಲೂ ಈ ಆರೋಗ್ಯ ಕಾರ್ಡ್‌ನಿಂದ ಚಿಕಿತ್ಸೆ ಲಭ್ಯ
- ಬಿಪಿಎಲ್‌ ಕುಟುಂಬದಾರರಿಗೆ ವಾರ್ಷಿಕ 5 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ
- ಚಿಕಿತ್ಸೆ ವೆಚ್ಚಕ್ಕೆ ಶೇ.66 ಅನುದಾನ ರಾಜ್ಯ, ಶೇ.34 ಅನುದಾನ ಕೇಂದ್ರದಿಂದ
- ಎಪಿಎಲ್‌ ಕುಟುಂಬಗಳಿಗೆ 5 ಲಕ್ಷ ರು. ಪೈಕಿ 1.5 ಲಕ್ಷ ರು.ವರೆಗೆ ಚಿಕಿತ್ಸೆ ಉಚಿತ
- 5 ಲಕ್ಷ ರು. ಚಿಕಿತ್ಸಾ ವೆಚ್ಚದ ಪೈಕಿ ಶೇ.70ರಷ್ಟನ್ನು ಕಾರ್ಡ್‌ದಾರರು ಪಾವತಿಸಬೇಕು

click me!