ಕರ್ನಾಟಕ ಹಾಲು ಒಕ್ಕೂಟವು ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಟ್ಟುಗಳನ್ನು ಬಿಡುಗಡೆಗೊಳಿಸಿದರು. ಮುಂದಿನ ದಿನಗಳಲ್ಲಿ ಮನೆ ಬಾಗಿಲಿಗೆ ಹಾಲು, ಮೊಸರು ತಲುಪಿಸುವಂತೆ ಈ ಹಿಟ್ಟುಗಳನ್ನು ಸಹ ತಲುಪಿಸುವ ಯೋಜನೆ ಇದೆ.
ಬೆಂಗಳೂರು (ಡಿ.25): ಕರ್ನಾಟಕ ರಾಜ್ಯದ ಜನತೆಗೆ ಈವರೆಗೆ ಮನೆ ಬಾಗಿಲಿಗೆ ನಂದಿನಿ ಬ್ರ್ಯಾಂಡ್‌ನ ಹಾಲು ಮೊಸರು ಬರುತ್ತಿದ್ದ ಮಾದರಿಯಲ್ಲಿಯೇ ಇನ್ನುಮುಂದೆ ಇಡ್ಲಿ, ದೋಸೆ ಹಿಟ್ಟು ಕೂಡ ಬರಲಿದೆ. ಹೀಗಾಗಿ, ರಾಜ್ಯದ ಎಲ್ಲ ನಗರ, ಪಟ್ಟಣಗಳ ಜನರು ಬೆಳಗ್ಗಿನ ತಿಂಡಿ ಬಗ್ಗೆ ಚಿಂತೆ ಮಾಡುವ ಅಗತ್ಯವೇ ಇರುವುದಿಲ್ಲ.
ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)ನ ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ಹಾಲು, ಮೊಸಲು, ತುಪ್ಪ ಮಾರಾಟ ಮಾಡುವ ಮಾದರಿಯಲ್ಲಿಯೇ ಇದೀಗ ಹೊಸದಾಗಿ ರಾಜ್ಯ ಹಾಗೂ ದೇಶದ ಜನತೆಗೆ ಬೆಳಗ್ಗಿನ ತಿಂಡಿಗೆ ಅನುಕೂಲ ಆಗುವಂತೆ ರೆಡಿಮೇಡ್ ಇಡ್ಲಿ ಹಾಗೂ ದೋಸೆ ಹಿಟ್ಟಿನ ಪ್ಯಾಕೆಟ್‌ಗಳನ್ನು ಬಿಡುಗಡೆ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿನಿ ದೋಸೆ ಹಿಟ್ಟು ಹಾಗೂ ಇಡ್ಲಿ ಹಿಟ್ಟನ್ನು ಬಿಡುಗಡೆ ಮಾಡಿದರು. ಈ ವೇಳೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸೇರಿದಂತೆ ಸಚಿವರಾದ ಕೃಷ್ಣ ಬೈರೇಗೌಡ, ವೆಂಕಟೇಶ್, ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು.
ನಂದಿನಿ ಬ್ರ್ಯಾಂಡ್‌ನ ಪ್ರಿಯರಿಗೆ ಇಂದಿನಿಂದಲೇ ನಂದಿನಿ ಇಡ್ಲಿ, ದೋಸೆ ಹಿಟ್ಟು ಲಭ್ಯವಾಗಲಿದೆ. ಆದರೆ, ಆರಂಭದಲ್ಲಿ ಮಾರುಕಟ್ಟೆಗಳು ಹಾಗೂ ನಂದಿನಿ ಹಾಲಿನ ಕೇಂದ್ರಗಳಲ್ಲಿ ಇದೀಗ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮನೆ, ಮೆನೆಗೆ ಹಾಲನ್ನು ತಲುಪಿಸುವ ಮಾದರಿಯಲ್ಲಿಯೇ ಇಡ್ಲಿ ಅಥವಾ ದೋಸೆ ಹಿಟ್ಟುಗಳನ್ನು ಕೂಡ ಸರಬರಾಜು ಮಾಡುವುದಕ್ಕೆ ಚಿಂತನೆ ಮಾಡಲಾಗಿದೆ. ಇನ್ನು ಕೆಎಂಎಫ್ ಬಿಡುಗಡೆ ಮಾಡಿರುವ ಈ ಇಡ್ಲಿ, ದೋಸೆ ಹಿಟ್ಟು ವೇ ಪ್ರೋಟೀನ್ ಆಧಾರಿತವಾಗಿದೆ. ಆರೋಗ್ಯಕ್ಕೂ ಉತ್ತಮ ಎಂದು ಹೇಳಲಾಗುತ್ತಿದೆ. ಇನ್ನು ರುಚಿ ಹಾಗೂ ಸ್ವಾದದ ಬಗ್ಗೆ ಇನ್ನುಮುಂದೆ ಜನರ ಬಳಕೆಯಿಂದ ರೇಟಿಂಗ್ಸ್ ಬರಬೇಕಿದೆ.