
ಮೈಸೂರು (ನ.24): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ನಾನೇ ಐದು ವರ್ಷ ಮುಖ್ಯಮಂತ್ರಿ' ಎಂದು ಪ್ರತಿದಿನ ಎದೆ ಬಡಿದುಕೊಂಡು ಹೇಳಿಕೊಳ್ಳುವ ದೈನೇಸಿ ಪರಿಸ್ಥಿತಿ ಬರಬಾರದಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
ಸಿದ್ದರಾಮಯ್ಯನವರ ಅಧಿಕಾರದ ಅವಧಿಯ ಕುರಿತು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಗುದ್ದಾಟದ ಬಗ್ಗೆ ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಈಗ ಸಿದ್ದರಾಮಯ್ಯನವರಲ್ಲಿ 'ರೆಬಿಲಿಯನ್ ಸಿದ್ದರಾಮಯ್ಯ' ವರ್ಸಸ್ 'ಕಾಂಪ್ರಮೈಸ್ ಸಿದ್ದರಾಮಯ್ಯ' ಎಂಬ ಹೋರಾಟ ಶುರುವಾಗಿದೆ ಎಂದು ಅಭಿಪ್ರಾಯಪಟ್ಟರು.
ನಾವು ಕಂಡಿರುವ ಸಿದ್ದರಾಮಯ್ಯ ಯಾವಾಗಲೂ ಗಟ್ಟಿ ಗಡಸುತನದ ರಾಜಕಾರಣಿಯಾಗಿದ್ದು, ಮೂಲತಃ ಅವರು 'ರೆಬಿಲಿಯನ್' ಆಗಿದ್ದರು. ಒಂದು ವೇಳೆ ಈಗಲೂ ಅವರು ಅದೇ ರೆಬಿಲಿಯನ್ ಮನೋಭಾವದಲ್ಲಿದ್ದರೆ, ಯಾವುದೇ ಕಾರಣಕ್ಕೂ ಅಧಿಕಾರವನ್ನು ಬಿಟ್ಟುಕೊಡುವುದಿಲ್ಲ. ಒಂದು ವೇಳೆ ಕಾಂಪ್ರಮೈಸ್ ಸಿದ್ದರಾಮಯ್ಯ ಆಗಿದ್ದರೆ, ಅಧಿಕಾರ ತ್ಯಾಗ ಮಾಡಬಹುದು. ಸಿದ್ದರಾಮಯ್ಯ ಅವರು ತಮ್ಮ ಗಟ್ಟಿತನವನ್ನು ಎಷ್ಟರ ಮಟ್ಟಿಗೆ ಉಳಿಸಿಕೊಂಡಿದ್ದಾರೆ ಎಂಬುದು ಈ ತಿಂಗಳಿನ ಅಂತ್ಯದಲ್ಲಿ ಗೊತ್ತಾಗಲಿದೆ ಎಂದು ಬೊಮ್ಮಾಯಿ ಭವಿಷ್ಯ ನುಡಿದರು.
ಇದೇ ವೇಳೆ, ಈ ಹಿಂದೆ ಬಿಜೆಪಿ ಸರ್ಕಾರದ ಮೇಲೆ ಮಾಡಿದ್ದ ಕಮಿಷನ್ ಆರೋಪಗಳು ತನಿಖಾ ವರದಿಯಿಂದ ಸುಳ್ಳು ಎಂದು ಸಾಬೀತಾಗಿದೆ. ಆದರೆ, ಈಗ ಅವರದೇ ಸರ್ಕಾರದಲ್ಲಿ ಎಲ್ಲಾ ಇಲಾಖೆಗಳಲ್ಲಿ ಎಷ್ಟೆಷ್ಟು ಕಮಿಷನ್ ನಡೆಯುತ್ತಿದೆ ಎಂಬುದು ರಾಜ್ಯದ ಜನರಿಗೆಲ್ಲಾ ಗೊತ್ತಾಗಿದೆ ಎಂದು ಟೀಕಿಸಿದರು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ದಿನವೇ ಕಾಂಗ್ರೆಸ್ ಮನೆಯಲ್ಲಿ ಬಿರುಕು ಶುರುವಾಗಿದ್ದು, ಈಗ ಆ ಬಿರುಕು ಮತ್ತಷ್ಟು ಹೆಚ್ಚಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ