Congressನಲ್ಲಿ ಶಾಸಕರಿಗೆ 50 ಕೋಟಿ ಆಮಿಷ, ಮಂತ್ರಿಗಿರಿಗೆ 200 ಕೋಟಿ ಫಿಕ್ಸ್: BJP ಗಂಭೀರ ಆರೋಪ

Kannadaprabha News, Ravi Janekal |   | Kannada Prabha
Published : Nov 24, 2025, 10:15 AM IST
Chalavadi narayanaswamy on congress government

ಸಾರಾಂಶ

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಶಾಸಕರಿಗೆ 50 ಕೋಟಿ ರು., ಫ್ಲ್ಯಾಟ್‌ ಹಾಗೂ ಕಾರಿನ ಆಮಿಷ, ಈ ಕುರಿತು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಬೆಂಗಳೂರು(ನ.24) : ರಾಜ್ಯ ಕಾಂಗ್ರೆಸ್‌ನಲ್ಲಿ ಕುದುರೆ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಶಾಸಕರಿಗೆ ತಲಾ 50 ಕೋಟಿ ರು. ನಗದು, ಒಂದು ಫ್ಲ್ಯಾಟ್‌ ಹಾಗೂ ಫಾರ್ಚೂನರ್‌ ಕಾರು ಕೊಡಲಾಗುತ್ತಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುದುರೆ ವ್ಯಾಪಾರ ಕುರಿತು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಪತ್ರ ಬರೆಯಲು ನಿರ್ಧರಿಸಿದ್ದೇನೆ ಎಂದೂ ಅವರು ತಿಳಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ, ಕಾಂಗ್ರೆಸ್‌ನಲ್ಲಿ ಕಿತ್ತಾಟಕ್ಕಿಂತ ಕುದುರೆ ವ್ಯಾಪಾರ ಜೋರಾಗಿದೆ. ಮೊದಲಿಗೆ ಒಬ್ಬ ಶಾಸಕನಿಗೆ 50 ಕೋಟಿ ರು. ಎಂದು ಹೇಳಿ ಈಗ ಚೌಕಾಸಿ ಹೆಚ್ಚಾಗಿದೆ. ಕೆಲ ಶಾಸಕರು 75 ಕೋಟಿ ರು. ಮತ್ತು ಮತ್ತೆ ಕೆಲ ಶಾಸಕರು 100 ಕೋಟಿ ರು. ಕೊಟ್ಟರೆ ನಿಮ್ಮ ಕಡೆಗೆ ಬರುವುದಾಗಿ ಹೇಳುತ್ತಿದ್ದಾರೆ. ನೂರು ಕೋಟಿ ರು. ಕೊಡಲು ಆಗಲ್ಲ. ತಲಾ 50 ಕೋಟಿ ರು. ನಗದು, ಒಂದು ಫ್ಲ್ಯಾಟ್‌ ಹಾಗೂ ಒಂದು ಫಾರ್ಚೂನರ್‌ ಕಾರು ಕೊಡುವುದಾಗಿ ಹೇಳಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ ಎಂದು ಹೇಳಿದರು.

ಮಂತ್ರಿ ಸ್ಥಾನಕ್ಕೆ 200 ಕೋಟಿ ರು. ಫಿಕ್ಸ್‌:

ಒಂದು ಪಕ್ಷದವರು ಮತ್ತೊಂದು ಪಕ್ಷದ ಶಾಸಕರನ್ನು ಕುದುರೆ ವ್ಯಾಪಾರ ಮಾಡುವುದನ್ನು ಕೇಳಿದ್ದೆವು. ಆದರೆ, ಕಾಂಗ್ರೆಸ್‌ ಪಕ್ಷದವರು ತಮ್ಮದೇ ಪಕ್ಷದ ಶಾಸಕರನ್ನು ವ್ಯಾಪಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಂತ್ರಿ ಸ್ಥಾನಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ ವ್ಯಾಪಾರ ಶುರು ಮಾಡಿದ್ದಾರೆ. ಮಂತ್ರಿ ಸ್ಥಾನ ಬೇಕಿದ್ದವರು 200 ಕೋಟಿ ರು. ಕೊಡಬೇಕಂತೆ ಎಂದು ಆಪಾದಿಸಿದರು.

ಜೈಲಿನಲ್ಲಿರುವ ಶಾಸಕ ವೀರೇಂದ್ರ ಪಪ್ಪಿ ಮುಂಗಡವಾಗಿ 200 ಕೋಟಿ ರು. ಕೊಟ್ಟಿದ್ದಾರಂತೆ. ಈ ಬಗ್ಗೆ ಮೊದಲು ತನಿಖೆಯಾಗಬೇಕು. ಮಂತ್ರಿಗಿರಿಗೆ ವ್ಯಾಪಾರ ನಡೆಸುತ್ತಿರುವ ಸುರ್ಜೇವಾಲಾ ಅವರನ್ನು ಬಂಧಿಸಬೇಕು ಎಂದು ಛಲವಾದಿ ಆಗ್ರಹಿಸಿದರು.

ಅವರ ಶಾಸಕರು ಅವರಿಂದಲೇ ಖರೀದಿ!

ಕಾಂಗ್ರೆಸ್‌ನಲ್ಲೇ ಮೂರು-ನಾಲ್ಕು ಪಕ್ಷ ಇದೆ. ಇದರಲ್ಲಿ ಮುಖ್ಯಮಂತ್ರಿ ಪಕ್ಷ ಮತ್ತು ಮತ್ತೊಂದು ಉಪಮುಖ್ಯಮಂತ್ರಿ ಪಕ್ಷ ದೊಡ್ಡದಾಗಿದೆ. ಇಲ್ಲಿ ಅವರ ಕಡೆಯ ಶಾಸಕರನ್ನು ಇವರು ಕೊಂಡುಕೊಳ್ಳುವುದು, ಇವರ ಶಾಸಕರನ್ನು ಅವರು ಕೊಂಡುಕೊಳ್ಳುವ ಕುದುರೆ ವ್ಯಾಪಾರ ಶುರುವಾಗಿದೆ ಎಂದು ಕೇಳಿದ್ದೇನೆ. ಈ ಬಗ್ಗೆ ಮೊದಲು ತನಿಖೆಯಾಗಬೇಕು. ಈ ಕುದುರೆ ವ್ಯಾಪಾರ ಕುರಿತು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಪತ್ರ ಬರೆಯಲು ನಿರ್ಧರಿಸಿದ್ದೇನೆ ಎಂದರು.

ಜನರ ಹಣ ಲೂಟಿ ಮಾಡಿ ಶಾಸಕರ ಖರೀದಿ:

ಕಾಂಗ್ರೆಸ್‌ನವರು ಆಟ ಆಡಿಕೊಂಡು ಜನರ ಹಣ ಲೂಟಿ ಮಾಡಿ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ. ಒಂದೇ ಒಂದು ಕಾರ್ಯಕ್ರಮ ನೀಡದೆ, ಗ್ಯಾರಂಟಿ ಎಂದು ಹೇಳಿಕೊಂಡು ಜನರಿಗೆ ವಂಚನೆ, ಮೋಸ ಮಾಡಿ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಈ ಲೂಟಿ ಸರ್ಕಾರ ಬೇಕಾ? ಸಮಸ್ಯೆಗಳಿಗೆ ಪರಿಹಾರವಿಲ್ಲ. ರೈತರು, ದಲಿತರ ಸ್ಥಿತಿ ಏನಾಗಿದೆ? ಬಿಜೆಪಿಯವರು ಪ್ರಶ್ನೆ ಮಾಡಿದರೆ ಕೇರ್‌ ಮಾಡಲ್ಲ ಎನ್ನುತ್ತಾರೆ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಬೆಲೆ ಇದೆಯಾ? ಈ ಕಾಂಗ್ರೆಸ್‌ನವರು ಮಾತು ಎತ್ತಿದರೆ ಸಂವಿಧಾನದ ಪುಸ್ತಕ ಅಲ್ಲಾಡಿಸಿಕೊಂಡು ಮಾತನಾಡುತ್ತಾರೆ. 140 ಸೀಟು ಬಂದಿದೆ ಎಂದ ದರ್ಪದಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದಕ್ಕೆಲ್ಲಾ ಜನ ಇತಿಶ್ರೀ ಹಾಡಲು ತೀರ್ಮಾನಿಸಿದ್ದಾರೆ. ಇದಕ್ಕೆಲ್ಲ ಸರಿಯಾದ ಉತ್ತರ ಕೊಡುತ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಗುಡುಗಿದರು.

ಛಲವಾದಿ ಆರೋಪವೇನು?

  • - ರಾಜ್ಯ ಕಾಂಗ್ರೆಸ್ಸಿನ ವಿವಿಧ ಬಣಗಳ ನಡುವೆಯೇ ಭರ್ಜರಿ ಕುದುರೆ ವ್ಯಾಪಾರ
  • - ಶಾಸಕರನ್ನು ಸೆಳೆಯಲು ಆಯಾ ಬಣಗಳಿಂದ ಕಾರು, ಸೈಟ್‌, ಹಣದ ಆಮಿಷ
  • - ಕೆಲ ಶಾಸಕರು 75 ಕೋಟಿ ರು., ಕೆಲವರು 100 ಕೋಟಿ ರು. ಹಣ ಕೇಳುತ್ತಿದ್ದಾರೆ
  • - ಕೊನೆಗೆ 50 ಕೋಟಿ ರು., 1 ಫಾರ್ಚುನರ್‌ ಕಾರು, 1 ಫ್ಲಾಟ್‌ಗೆ ಇದು ಸೆಟ್ಲ್ ಆಗಿದೆ
  • - ಮಂತ್ರಿ ಸ್ಥಾನ ಬೇಕಿದ್ದವರು ಸುರ್ಜೇವಾಲಾಗೆ 200 ಕೋಟಿ ರು. ಕೊಡಬೇಕಂತೆ
  • - ಜನರ ಹಣ ಲೂಟಿ ಮಾಡಿ ಈಗ ಕುದುರೆ ವ್ಯಾಪಾರ ನಡೀತಿದೆ: ವಿಪಕ್ಷ ನಾಯಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!