ಸೀತಾರಾಮ್‌ಗೆ ಟಿಕೆಟ್ ಸಿಕ್ಕು ಗೆದ್ದಿದ್ದರೆ ನಾವೇನಾಗ್ತಿದ್ದೆವೋ ಗೊತ್ತಿಲ್ಲ; ಸಿಎಂ

By Kannadaprabha NewsFirst Published Dec 11, 2023, 6:59 AM IST
Highlights

‘ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಆಪ್ತರಾಗಿದ್ದ ಟಿ.ಎನ್‌. ಸೀತಾರಾಮ್‌ ಅವರಿಗೆ 1985ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಲಭಿಸಿದ್ದರೆ ನಿಶ್ಚಯವಾಗಿ ಗೆಲುವು ಸಾಧಿಸುತ್ತಿದ್ದರು. ಆಗ ನಾವೆಲ್ಲಾ ಸಚಿವರಾಗುತ್ತಿದ್ದೆವೋ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ' ಕಿರುತೆರೆಯ ಖ್ಯಾತ ನಿರ್ದೇಶಕ ಟಿ.ಎನ್‌. ಸೀತಾರಾಮ್ ಅವರ ‘ನೆನಪಿನ ಪುಟಗಳು’ ಆತ್ಮಕಥನವನ್ನು ಭಾನುವಾರ ನಗರದಲ್ಲಿ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ ಮಾತಿದು.

ಬೆಂಗಳೂರು (ಡಿ.11) :  ‘ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಆಪ್ತರಾಗಿದ್ದ ಟಿ.ಎನ್‌. ಸೀತಾರಾಮ್‌ ಅವರಿಗೆ 1985ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಲಭಿಸಿದ್ದರೆ ನಿಶ್ಚಯವಾಗಿ ಗೆಲುವು ಸಾಧಿಸುತ್ತಿದ್ದರು. ಆಗ ನಾವೆಲ್ಲಾ ಸಚಿವರಾಗುತ್ತಿದ್ದೆವೋ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ.’

ಕಿರುತೆರೆಯ ಖ್ಯಾತ ನಿರ್ದೇಶಕ ಟಿ.ಎನ್‌. ಸೀತಾರಾಮ್ ಅವರ ‘ನೆನಪಿನ ಪುಟಗಳು’ ಆತ್ಮಕಥನವನ್ನು ಭಾನುವಾರ ನಗರದಲ್ಲಿ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ ಮಾತಿದು.

ಸೀತಾರಾಮ್‌ ಅವರ ರಾಜಕೀಯ ರಂಗದೊಂದಿಗಿನ ಒಡನಾಟವನ್ನು ನೆನೆದ ಮುಖ್ಯಮಂತ್ರಿಯವರು, ಲೋಕಸಭೆಗೆ 1984ರಲ್ಲಿ ನಡೆದ ಚುನಾವಣೆಯಲ್ಲಿ ನಾನು, ಸೀತಾರಾಮ್‌ ಸೋತಿದ್ದೆವು. 1985ರಲ್ಲಿ ರಾಮಕೃಷ್ಣ ಹೆಗಡೆ ಅವರು ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗಿದ್ದರು. ಆ ಚುನಾವಣೆಯಲ್ಲಿ ನಾನು ಜಯಗಳಿಸಿದ್ದೆ. ಆ ವೇಳೆ ಮುಖ್ಯಮಂತ್ರಿ ಚಂದ್ರು ಬದಲಾಗಿ ಸೀತಾರಾಮ್‌ ಅವರಿಗೆ ಟಿಕೆಟ್‌ ನೀಡಿದ್ದರೆ, ರಾಮಕೃಷ್ಣ ಹೆಗಡೆ ಜಯಪ್ರಿಯತೆಯಲ್ಲಿ ಅವರು ಸಹ ಜಯಶೀಲರಾಗಿ ಶಾಸಕರಾಗುತ್ತಿದ್ದರು. ಸೀತಾರಾಮ್‌ ಅವರು ರಾಮಕೃಷ್ಣ ಹೆಗಡೆಗೆ ಆಪ್ತರಾಗಿದ್ದ ಕಾರಣ ಆಗ ನಾವೆಲ್ಲಾ ಮಂತ್ರಿಗಳು ಆಗುತ್ತಿದ್ದೆವೋ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ ಎಂದು ಹೇಳಿದರು.

ಕಿರುತೆರೆಯಲ್ಲಿ ಇತಿಹಾಸ ಬರೆದ ಟಿಎನ್​ಸೀ ಹುಟ್ಟುಹಬ್ಬವಿಂದು: ನಟಿ ಮಾಳವಿಕಾ ಭಾವನಾತ್ಮಕ ಪೋಸ್ಟ್

ನನ್ನ ರಾಜಕೀಯ ಜೀವನ ಪ್ರಾರಂಭವಾಗಲು ಪ್ರೊ.ನಂಜುಂಡ ಸ್ವಾಮಿ ಅವರೇ ಕಾರಣ. ನನ್ನ ಕಾಲೇಜಿನ ಪ್ರಾಧ್ಯಾಪರಾಗಿದ್ದ ಅವರು, ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿಯಿದ್ದ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸುತ್ತಿದ್ದರು. ಸಮಾಜವಾದಿ ಯುವಜನಸಭಾದಲ್ಲಿ ನನ್ನನ್ನು ಸದಸ್ಯ ಮಾಡಿದರು. ಅವರನ್ನು ಕಾಣಲು ಹೋದಾಗ ಸೀತಾರಾಮ್‌ ನನಗೆ ಪರಿಚಯವಾಗಿದ್ದರು. ಸೀತಾರಾಮ್‌ ಅವರು ರಾಜಕೀಯ ಕ್ಷೇತ್ರದಲ್ಲಿ ಮುಂದುವರಿದಿದ್ದರೆ ಏನೇನಾಗುತ್ತಿದ್ದರೋ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸೀತಾರಾಮ್‌ ಅವರೊಂದಿಗೆ ನನಗೆ 40 ವರ್ಷಗಳ ಒಡನಾಟವಿದೆ. ಅವರು ನನ್ನ ಆಪ್ತ ಸ್ನೇಹಿತರು. ನಾವಿಬ್ಬರೂ ಒಂದೇ ಯೋಚನಾ ಲಹರಿ ಹೊಂದಿರುವವರು. ಸಮಾಜ ಹಾಗೂ ರಾಜಕೀಯದ ಬಗ್ಗೆ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಅವು ಅಂತಿಮವಾಗಿ ಒಂದೇ ಯೋಚನೆಯಿಂದ ಕೊನೆಗೊಳ್ಳುತ್ತಿದ್ದವು ಎಂದರು.

ನಾನು ಆಗಾಗ್ಗೆ ಲಂಕೇಶ್‌ ಪತ್ರಿಕೆ ಕಚೇರಿಗೆ ಹೋಗುತ್ತಿದ್ದೆ. ಅಲ್ಲಿ ಸೀತಾರಾಮ್‌ ಅವರನ್ನು ಭೇಟಿಯಾಗುತ್ತಿದ್ದೆ. ಕ್ರಿಯಾಶೀಲ ವ್ಯಕ್ತಿ ಹಾಗೂ ಬಹುಮುಖ ಪ್ರತಿಭೆಯಾಗಿರುವ ಅವರು ಸ್ನೇಹ, ಕಾಲೇಜು ಹಾಗೂ ಹಾಸ್ಟೆಲ್‌ ಜೀವನ, ರಾಜಕೀಯ, ಕಲಾಸೇವೆ ಮತ್ತು ವಕೀಲಿಕೆ ಹೀಗೆ ಬದುಕಿನ ಎಲ್ಲ ಸ್ತರಗಳ ಅನುಭವ ಹೊಂದಿದ್ದಾರೆ. ಅವರ ನೆನಪಿನ ಪುಟಗಳ ಪುಸ್ತಕದಲ್ಲಿ ಸತ್ಯ ಸಂಗತಿಗಳನ್ನು ಬರೆದಿದ್ದಾರೆ ಎಂದು ಹೇಳಿದರು.

ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಟಿ.ಎನ್‌. ಸೀತಾರಾಮ್‌ ಅವರ ಬದುಕು ತೆರೆದ ಪುಸ್ತಕ. ಅವರ ಕುರಿತು ಅನೇಕ ಸಂಗತಿಗಳು ಎಲ್ಲರಿಗೂ ಗೊತ್ತಿವೆಯಾದರೂ ಈ ಆತ್ಮಕಥನ ಏಕೆ ಬೇಕಿತ್ತು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ವಾಸ್ತವವಾಗಿ ಈ ಪುಸ್ತಕ ಬೇಕಿರುವುದು ಅವರಿಗೆ ಅಲ್ಲ. ಬದಲಾಗಿ ಅವರ ಓದುಗರು, ಅಭಿಮಾನಿಗಳು ಮತ್ತು ಹೊಸ ತಲೆಮಾರಿಗೆ . ಸೀತಾರಾಂ ಅವರ ಜೀವನದ ವೈವಿಧ್ಯಮಯ ಮಜುಲುಗಳನ್ನು ಈ ಪುಸ್ತಕ ತಿಳಿಸುತ್ತದೆ ಎಂದರು.

ಸೀತಾರಾಮ್‌ ಅವರು ಪುಸ್ತಕದಲ್ಲಿ ಎಲ್ಲಿಯೂ ತಮ್ಮ ಸಾಧನೆಯನ್ನು ವೈಭವೀಕರಿಸಿಲ್ಲ. ಅನೇಕ ದೊಡ್ಡ ವ್ಯಕ್ತಿಗಳ ಜೊತೆಗಿನ ಸಹವಾಸ ಹೇಳುತ್ತಾ ತಮ್ಮ ಬದುಕನ್ನು ತೆರೆದಿಡುತ್ತಾರೆ. ಜೀವನವನ್ನು ಹಲವು ಪ್ರಯೋಗಗಳಿಗೆ ಒಡ್ಡಿಕೊಂಡಿದ್ದ ಸಂಗತಿ ವಿವರಿಸುತ್ತಾ, ನಮ್ಮಲ್ಲಿನ ಭಯವನ್ನು ದೂರ ಮಾಡುತ್ತಾರೆ. ಇದರಿಂದಲೇ ಈ ಪುಸ್ತಕ ವಿಭಿನ್ನವಾಗಿದೆ ಎಂದು ಶ್ಲಾಘಿಸಿದರು.

ರವಿ ಬೆಳಗೆೆರೆ ಆರಂಭಿಸಿದ ಸ್ಕೂಲ್‌‌ಗೆ ಮಗನಿಂದ ಆಧುನಿಕ ಸ್ಪರ್ಶ, ಹೇಗಿರುತ್ತೆ ಪ್ರಾರ್ಥನಾ ಇನ್ ವರ್ಲ್ಡ್ ಸ್ಕೂಲ್?

ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್‌ ರಾವ್‌ ಹತ್ವಾರ್‌, ಸೀತಾರಾಮ್‌ ಅವರ ಆತ್ಮಕಥನ ನನಗೆ ಒಂದು ವಿಶ್ವವಿದ್ಯಾಲಯವಾಗಿ ಗೋಚರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಟಿ.ಎನ್‌. ಸೀತಾರಾಮ್‌ ಮಾತನಾಡಿ, ಈ ಪುಸ್ತಕ ನನ್ನನ್ನು ಸಾಕಷ್ಟು ಭಾವುಕ ಮಾಡಿದೆ. ಆತ್ಮಕಥನ ಬರೆಯುವಾಗ ಸುಳ್ಳು ಮತ್ತು ಸತ್ಯಗಳ ನಡುವೆ ಒಂದು ಸಂಘರ್ಷ ನಡೆಯುತ್ತದೆ. ಪುಸ್ತಕದಲ್ಲಿ ನನ್ನ ಬದುಕಿನ ಎಲ್ಲಾ ಸತ್ಯ ಘಟನೆಗಳನ್ನೂ ಹೇಳಲು ಹೋಗಿಲ್ಲ. ಆದರೆ, ಹೇಳಿರುವ ಸಂಗತಿ ಎಲ್ಲವೂ ಸತ್ಯವೇ ಆಗಿದೆ. ಬದುಕಿನ ನೆನಪುಗಳನ್ನು ಸ್ಪಷ್ಟವಾಗಿ ನೋಡಲು ಈ ಪುಸ್ತಕ ಬರೆದಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್‌.ಎಲ್‌. ಪುಷ್ಪಾ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಸಾವಣ್ಣ ಪ್ರಕಾಶನದ ಜಮೀಲ್‌ ಸಾವಣ್ಣ ಮತ್ತಿತರರು ಉಪಸ್ಥಿತರಿದ್ದರು.

click me!