ಹಳೆಯ ವಿದ್ಯಾರ್ಥಿಗಳ ಸಂಘಗಳು ಮತ್ತು ಸಿಎಸ್‌ಆರ್ ಅನುದಾನದ ಮೂಲಕ ರಾಜ್ಯದ ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆ ರೂಪಿಸಿರುವ ‘ನಮ್ಮ ಶಾಲೆ-ನಮ್ಮ ಜವಾಬ್ದಾರಿ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದರು.
ಬೆಂಗಳೂರು (ಮಾ.06): ಹಳೆಯ ವಿದ್ಯಾರ್ಥಿಗಳ ಸಂಘಗಳು ಮತ್ತು ಸಿಎಸ್‌ಆರ್ ಅನುದಾನದ ಮೂಲಕ ರಾಜ್ಯದ ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆ ರೂಪಿಸಿರುವ ‘ನಮ್ಮ ಶಾಲೆ-ನಮ್ಮ ಜವಾಬ್ದಾರಿ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದರು.
ಈ ವೇಳೆ ಮುಖ್ಯಮಂತ್ರಿ ಅವರು ತಾವು ಓದಿದ ಮೈಸೂರಿನ ವರುಣಾ ಹೋಬಳಿ ಕುಪ್ಪೇಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸ್ವಗ್ರಾಮ ಸಿದ್ದರಾಮನ ಹುಂಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಬಲವರ್ಧನೆಗೆ 10 ಲಕ್ಷ ರು. ದೇಣಿಗೆ ಹಾಗೂ ಶಾಲೆಗಳಿಗೆ ಅಗತ್ಯವಿರುವ ಪೀಠೋಪಕರಣ, ಕಂಪ್ಯೂಟರ್ ಪ್ರೊಜೆಕ್ಟರ್, ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್, ಬ್ಯಾಂಡ್ ಸೆಟ್ ಇತ್ಯಾದಿಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಪ್ರೇರಣೆಯಾದರು.
ಬೆಂಗಳೂರು ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್‌ನಲ್ಲಿ ಐವರ ಬಂಧನ: ಸಿಎಂ ಸಿದ್ದರಾಮಯ್ಯ
ಬಳಿಕ ಎರಡೂ ಶಾಲೆಯ ಮಕ್ಕಳೊಂದಿಗೆ ಕೆಲ ಕಾಲ ಸಂವಾದ ನಡೆಸಿದ ಮುಖ್ಯಮಂತ್ರಿ ಅವರು, ಜೀವನದಲ್ಲಿ ಯಾವುದೇ ಮೂಢನಂಬಿಕೆಗಳಿಗೆ ಜೋತು ಬೀಳದೆ ವೈಚಾರಿಕ, ವೈಜ್ಞಾನಿಕತೆ ರೂಢಿಸಿಕೊಳ್ಳಲು ಹಾಗೂ ಯಾವುದೇ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವ ಮನೋಭಾವ ಬೆಳೆಸಿಕೊಳ್ಳುವಂತೆ ಪಾಠ ಮಾಡಿದರು. ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮ ಕೂಡ ಇದಕ್ಕೆ ಪೂಕರವಾದ ಕಾರ್ಯಕ್ರಮವಾಗಿದ್ದು ಪ್ರತಿಯೊಂದು ಶಾಲೆಯಲ್ಲೂ ಹಳೆಯ ವಿದ್ಯಾರ್ಥಿಗಳ ಸಂಘಗಳನ್ನು ಸ್ಥಾಪನೆ ಮೂಲಕ ಹಾಗೂ ಸಾಂಸ್ಥಿತ, ಸಾಮಾಜಿಕ ಜವಾಬ್ದಾರಿಯಡಿ ಅನುದಾನ ಸಂಗ್ರಹಿಸುವ ಮೂಲಕ ಶಾಲೆಗಳ ಅಭಿವೃದ್ಧಿ, ಬಲವರ್ಧನೆಗೊಳಿಸುವುದು ಇದರ ಉದ್ದೇಶವಾಗಿದೆ ಎಂದರು.
ಸಂವಿಧಾನ ಪೀಠಿಕೆ ಹೇಳಿದ ಮಕ್ಕಳು: ಸಂವಾದದ ವೇಳೆ ಎಲ್ಲರೂ ಸಂವಿಧಾನವನ್ನು ಅರಿತುಕೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದ ಮುಖ್ಯಮಂತ್ರಿಗಳು, ಸಂವಿಧಾನ ಏನು ಹೇಳುತ್ತದೆ ಹೇಳಿ ನೋಡೋಣ ಎಂದು ಕೇಳಿದರು. ಆಗ ಮಕ್ಕಳು ಸಂವಿಧಾನದ ಪೂರ್ಣ ಪೀಠಿಕೆ ಹೇಳಿದರು.
ನಿಮಗಿರುವ ಸೌಲಭ್ಯ ನಮಗಿರಲಿಲ್ಲ: ಇದೇ ವೇಳೆ ತಮ್ಮ ಬಾಲ್ಯದ ಬಗ್ಗೆ ಮೆಲುಕು ಹಾಕಿದ ಮುಖ್ಯಮಂತ್ರಿ ಅವರು, ನಂಜೇಗೌಡ ಎನ್ನುವವರು ನನಗೆ ಅಕ್ಷರಾಭ್ಯಾಸ ಮಾಡಿಸಿದರು. ಕನ್ನಡ ಓದು ಬರೆಯುವುದು, ಲೆಕ್ಕ ಮಾಡುವುದನ್ನು ಹೇಳಿಕೊಟ್ಟಿದ್ದರು. ಅವರು ಶಾಲೆ ಬಿಟ್ಟ ನಂತರ ಎಮ್ಮೆ ಮೇಯಿಸುತ್ತಿದ್ದ ನನ್ನನ್ನು ರಾಜಪ್ಪ ಎಂಬ ಮೇಷ್ಟ್ರು ಮನೆಗೆ ಬಂದು ನೇರವಾಗಿ 5 ನೇ ತರಗತಿಗೆ ಸೇರಿಸಿದ್ದರು. ಈಶ್ವರಾಚಾರ್ ಮೇಸ್ಟ್ರು ಹೇಳಿಕೊಟ್ಟಿದ್ದ ಕನ್ನಡ ವ್ಯಾಕರಣವನ್ನು ನಾನು ಈಗಲೂ ಮರೆತಿಲ್ಲ.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ನಿಜ: ಸಚಿವ ಪರಮೇಶ್ವರ್
ಈಗ ಶಾಲೆಯಲ್ಲಿ ಸರ್ಕಾರ ಹಾಲು, ಮೊಟ್ಟೆ, ಚಿಕ್ಕಿ, ಬಿಸಿಯೂಟ , ಸಮವಸ್ತ್ರ ಎಲ್ಲಾ ಕೊಡುತ್ತಿದೆ. ಈಗ ನಿಮಗಿರುವಷ್ಟು ಸೌಲಭ್ಯಗಳು ಆಗ ನಮಗಿರಲಿಲ್ಲ. ನಮ್ಮ ಕಾಲದಲ್ಲಿ ಶಿಕ್ಷಕರಿಂದ ಏಟನ್ನೂ ತಿನ್ನುತ್ತಿದ್ದೆವು ಎಂದು ಮುಖ್ಯ ಮಂತ್ರಿಗಳು ಅಂದಿನ ಪರಿಸ್ಥಿತಿಯನ್ನು ನೆನೆಸಿಕೊಂಡರು ಎಂದರು. ಈ ವೇಳೆ, ಸಚಿವರಾದ ಎಂ. ಬಿ.ಪಾಟೀಲ್ , ಕೃಷ್ಣಬೈರೇಗೌಡ, ಡಾ.ಎಂ.ಸಿ. ಸುಧಾಕರ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ , ಅಭಿವೃದ್ಧಿ ಆಯುಕ್ತೆ ಡಾ. ಶಾಲಿನಿ ರಜನೀಶ್ ಉಪಸ್ಥಿತರಿದ್ದರು.