
ಬೆಂಗಳೂರು (ಮಾ.06): ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಲಷ್ಕರ್-ಎ-ತೋಯ್ಬಾ ಭಯೋತ್ಪಾದಕ ಸಂಘಟನೆಯ (ಎಲ್‌ಇಟಿ)ಯ ಶಂಕಿತ ಉಗ್ರನ ಜಿಹಾದಿ ಬೋಧನೆ ಪ್ರಕರಣ ಸಂಬಂಧ ರಾಜ್ಯದ ಮಂಗಳೂರು ಹಾಗೂ ಬೆಂಗಳೂರು ಸೇರಿದಂತೆ ದೇಶದ ಏಳು ರಾಜ್ಯಗಳ 17 ಕಡೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಂಗಳವಾರ ದಾಳಿ ನಡೆಸಿದೆ. ಮಂಗಳೂರಿನ ನವೀದ್, ಬೆಂಗಳೂರಿನ ಹೆಣ್ಣೂರು ಸಮೀಪದ ಸೈಯದ್ ಖೈಲ್ ಎಂಬುವರಿಗೆ ಎನ್‌ಐಎ ಬಿಸಿ ತಟ್ಟಿದ್ದು, ಈ ದಾಳಿ ವೇಳೆ ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಹಣ ಜಪ್ತಿ ಮಾಡಿದೆ. ಈ ಪ್ರಕರಣ ಸಂಬಂಧ ಎನ್‌ಐಎ ಎರಡನೇ ಬಾರಿ ದಾಳಿ ನಡೆಸಿದೆ. ಈಗಾಗಲೇ ಈ ಪ್ರಕರಣ ಕುರಿತು ಒಂದು ಹಂತದ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಎನ್‌ಐಎ ಆರೋಪಪಟ್ಟಿ ಸಹ ಸಲ್ಲಿಸಿದೆ.
2023ರಲ್ಲಿ ಜು.19 ರಂದು ಹೆಬ್ಬಾಳ ಸಮೀಪ ಸುಲ್ತಾನ್‌ಪಾಳ್ಯದಲ್ಲಿ ದಾಳಿ ನಡೆಸಿ ಬೆಂಗಳೂರಿನ ಸರಣಿ ಬಾಂಬ್ ಸ್ಫೋಟ ಕೃತ್ಯ ಸಂಚು ರೂಪಿಸಿದ್ದ ಎಲ್‌ಇಟಿ ಶಂಕಿತ ಉಗ್ರರಾದ ಸೈಯದ್ ಸುಹೇಲ್‌ಖಾನ್, ಪುಲಿಕೇಶಿ ನಗರದ ಮೊಹಮದ್ ಫೈಜಲ್ ರಬ್ಬಾನಿ, ಕೊಡಿಗೇಹಳ್ಳಿಯ ಮಹಮದ್ ಉಮರ್, ಜಾಹೀದ್ ತಬ್ರೇಜ್ ಹಾಗೂ ಆರ್.ಟಿ.ನಗರದ ಸೈಯದ್ ಮುದಾಸೀರ್ ಪಾಷನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣವನ್ನು ಬಳಿಕ ಎನ್‌ಐಎ ತನಿಖೆ ಕೈಗೊಂಡಿತ್ತು.
ಬೆಂಗಳೂರು ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್‌ನಲ್ಲಿ ಐವರ ಬಂಧನ: ಸಿಎಂ ಸಿದ್ದರಾಮಯ್ಯ
ಈ ಪ್ರಕರಣದ ತನಿಖೆ ವೇಳೆ ಅಪರಾಧ ಕೃತ್ಯಗಳಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಗ ಈ ಶಂಕಿತ ಉಗ್ರರಿಗೆ ಜಿಹಾದಿ ಬೋಧನೆಗಳನ್ನು ಬೋಧಿಸಲಾಗಿತ್ತು. ಬಳಿಕ ಇವರನ್ನು ಎಲ್‌ಇಟಿ ಸಂಘಟನೆಗೆ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಉಗ್ರ ಕೇರಳ ಮೂಲದ ಟಿ.ನಾಸಿರ್ ನೇಮಿಸಿದ್ದ ಸಂಗತಿ ಬಯಲಾಗಿತ್ತು. ಅಲ್ಲದೆ ವಿದೇಶದಲ್ಲಿ ಈ ಕೃತ್ಯದ ಮಾಸ್ಟರ್ ಮೈಂಡ್‌ಗಳಾದ ಜುನೈದ್ ಅಹ್ಮದ್ ಅಲಿಯಾಸ್ ‘ಜೆಡಿ’ ಹಾಗೂ ಸಲ್ಮಾನ್ ಖಾನ್ ತಲೆಮರೆಸಿಕೊಂಡಿದ್ದಾರೆ ಎಂದು ಎನ್‌ಐಎ ಹೇಳಿದೆ.
ಮಂಗಳೂರಿಗೆ ಜಿಹಾದಿ ನಂಟು: ಜೈಲಿನಲ್ಲಿ ಜಿಹಾದಿ ಬೋಧನೆ ಜಾಲದ ಶೋಧನೆಗಿಳಿದ ಎನ್‌ಐಎ ಅಧಿಕಾರಿಗಳು, ಈಗ ಎಲ್‌ಇಟಿ ಸಂಘಟನೆ ನಂಟು ಹೊಂದಿರುವ ಆರೋಪದ ಮೇರೆಗೆ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿದೆ. ಮಂಗಳೂರಿನ ನವೀದ್ ಹಾಗೂ ಬೆಂಗಳೂರಿನ ಹೆಣ್ಣೂರು ಸಮೀಪ ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಸೈಯದ್ ಖೈಲ್‌ಗೆ ಎನ್‌ಐಎ ತನಿಖೆ ಬಿಸಿ ತಟ್ಟಿದೆ. ಈ ವೇಳೆ ಆ ಇಬ್ಬರನ್ನು ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ಡಿಕೆಶಿ 54 ದಿನ ಜೈಲಿಗೆ ಹೋಗಿದ್ದ ಇ.ಡಿ. ಕೇಸೇ ಸುಪ್ರೀಂಕೋರ್ಟ್‌ನಲ್ಲಿ ರದ್ದು!
ಜೈಲಿನಲ್ಲಿ ತಪಾಸಣೆ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಶಂಕಿತ ಉಗ್ರ ನಾಸಿರ್ ಸೆಲ್ ಮೇಲೆ ಸಹ ದಾಳಿ ನಡೆಸಿ ಎನ್‌ಐಎ ತಪಾಸಣೆ ನಡೆಸಿದೆ ಎನ್ನಲಾಗಿದೆ. ಆದರೆ ಜೈಲಿನ ಶೋಧನೆ ಬಗ್ಗೆ ಎನ್ಐಎ ಖಚಿತಪಡಿಸಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ