ಕಂಪೆನಿ ಹಾಗೂ ಔಷಧದ ಗುಣಮಟ್ಟ ಮೊದಲೇ ಸಾಬೀತಾಗಿದ್ದರೂ ಯಾಕೆ ಔಷಧ ಪೂರೈಸಿದ್ದೀರಿ? ಐದು ಬಾಣಂತಿಯರ ಸಾವು ಎಂದರೆ ಸಾಮಾನ್ಯ ಸಂಗತಿಯೇ? ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಇನ್ನಾದರೂ ಜಾಗರೂಕತೆಯಿಂದ ಇರಿ. ಕೂಡಲೇ ಸಂಬಂಧಪಟ್ಟ ಔಷಧಗಳ ಬಗ್ಗೆ ಗಮನ ನೀಡಿ ಎಂದು ತಾಕೀತು ಮಾಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು(ಡಿ.07): ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಬಗ್ಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಚರ್ಚೆ ನಡೆದಿದ್ದು, ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಘಟನೆ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳಿಂದ ವಿವರಣೆ ಕೋರಿದರು.
ಈ ವೇಳೆ ಸಚಿವ ದಿನೇಶ್ ಗುಂಡೂರಾವ್, ಬಳ್ಳಾರಿ ಜಿಲ್ಲಾ ಆಸ್ಪತ್ರೆ ಮತ್ತು ವಿಮ್ಸ್ ಆಸ್ಪತ್ರೆಯಲ್ಲಿ ಸಿಜೇರಿಯನ್ ಮೂಲಕ ಮಕ್ಕಳಿಗೆ ಜನ್ಮ ನೀಡಿದ ನಾಲ್ಕು ಮಂದಿ ಬಾಣಂತಿಯರು ನ.9 ರಿಂದ 11ರ ನಡುವೆ ಮೃತಪಟ್ಟಿದ್ದಾರೆ. ಇವರಿಗೆ ರಿಂಗರ್ ಲ್ಯಾಕ್ಟೇಟ್ ಐಪಿ ದ್ರಾವಣ ನೀಡಲಾಗಿತ್ತು. ಈ ಮೊದಲು ಪಾವಗಡ ತಾಲೂಕಿನಲ್ಲೂ ದ್ರಾವಣದಿಂದಾಗಿ ಸಮಸ್ಯೆ ಕಂಡು ಬಂದ ಕಾರಣಕ್ಕೆ ರಾಜ್ಯ ಸರ್ಕಾರ ದ್ರಾವಣ ಪೂರೈಕೆ ಸಂಸ್ಥೆ ನಿಷೇಧಿಸಿದ ಬಳಿಕ ಕೇಂದ್ರದ ಲ್ಯಾಬ್ ನಿಂದ ಅನುಮತಿ ಪಡೆದು ನ್ಯಾಯಾಲಯದ ಆದೇಶದ ಮೂಲಕ ಮತ್ತೆ ಔಷಧ ವಿತರಣೆಗೆ ಅನುಮತಿ ಪಡೆದಿದ್ದಾರೆ ಎಂದು ಹೇಳಿದರು.
ಆದರೂ ಅವರು ಪೂರೈಸಿದ್ದ 22 ಬ್ಯಾಚ್ ಗಳನ್ನು ನಾವು ತಿರಸ್ಕರಿಸಿದೆವು. ಜತೆಗೆ ಜಿಲ್ಲೆಗಳಿಗೆ ಪೂರೈಕೆಯಾಗಿದ್ದ ಔಷಧವನ್ನೂ ವಾಪಸು ಪಡೆದಿದ್ದೆವು. ಹೊಸದಾಗಿ ರಿಂಗರ್ ಲ್ಯಾಕ್ಟೇಟ್ ಪೂರೈಸಲಾಗಿತ್ತು. ಆದರೂ ಸಮಸ್ಯೆಯಾಗಿದ್ದು ಪರೀಕ್ಷೆಗೆ ಕಳುಹಿಸಲಾಗಿದೆ. ಕಂಪೆನಿ ವಿರುದ್ಧ ಕ್ರಮಕ್ಕೂ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ವಿವರಣೆ ನೀಡಿದರು ಎಂದು ತಿಳಿದುಬಂದಿದೆ.
ಸಿಎಂ ಅಸಮಾಧಾನ:
ಈ ವೇಳೆ ಸಿದ್ದರಾಮಯ್ಯ ಅವರು, ಕಂಪೆನಿ ಹಾಗೂ ಔಷಧದ ಗುಣಮಟ್ಟ ಮೊದಲೇ ಸಾಬೀತಾಗಿದ್ದರೂ ಯಾಕೆ ಔಷಧ ಪೂರೈಸಿದ್ದೀರಿ? ಐದು ಬಾಣಂತಿಯರ ಸಾವು ಎಂದರೆ ಸಾಮಾನ್ಯ ಸಂಗತಿಯೇ? ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಇನ್ನಾದರೂ ಜಾಗರೂಕತೆಯಿಂದ ಇರಿ. ಕೂಡಲೇ ಸಂಬಂಧಪಟ್ಟ ಔಷಧಗಳ ಬಗ್ಗೆ ಗಮನ ನೀಡಿ ಎಂದು ತಾಕೀತು ಮಾಡಿದರು ಎಂದು ಮೂಲಗಳು ತಿಳಿಸಿವೆ.
ಔಷಧ ಸರಬರಾಜು ನಿಗಮ ಕಾಯಕಲ್ಪಕ್ಕೆ ಚರ್ಚೆ:
ಔಷಧ ಸರಬರಾಜು ನಿಗಮಕ್ಕೂ ಕಾಯಕಲ್ಪ ನೀಡುವ ಅಗತ್ಯತೆ ಇದೆ. ಕೆಎಸ್ ಎಂಸಿಎಲ್ ಕರೆಯುವ ಟೆಂಡರ್‌ಗಳಲ್ಲಿ ಗುಣ ಮಟ್ಟದ ಔಷಧಿಗಳನ್ನು ಪೂರೈಸುವಂತಹ ದೊಡ್ಡ ಕಂಪನಿಗಳು ಪಾಲ್ಗೊಳ್ಳುವಂತಾಗ ಬೇಕು. ಇನ್ನಷ್ಟು ಪರಿಣಾಮಕಾರಿಯಾಗಿ ಔಷಧ ಗುಣಮಟ್ಟ ಹಾಗೂ ಉತ್ಪಾದನೆ ಕುರಿತಂತೆ ಪರಿಶೀಲನೆ ಆಗಬೇಕಿದೆ. ಈ ನಿಟ್ಟಿನಲ್ಲಿ ಟೆಂಡರ್‌ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನ ಸೂಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಮಂಡಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು
ಲೋಕಾಯುಕ್ತಕ್ಕೆ ಬಿಜೆಪಿ ದೂರು
ಬೆಂಗಳೂರು: ಬಳ್ಳಾರಿ ಮತ್ತು ರಾಜ್ಯದ ವಿವಿಧ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು ಮತ್ತು ಶಿಶು ಮರಣಕ್ಕೆ ಸಂಬಂಧಿಸಿ ಮಧ್ಯಪ್ರವೇಶಿಸಿ ಸೂಕ್ತ ನ್ಯಾಯಾಂಗ ತನಿಖೆ ಕೈಗೊಂಡು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಿಯೋಗ ಒತ್ತಾಯಿಸಿದೆ. ಶುಕ್ರವಾರ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರನ್ನು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿದೆ.
ಬಾಣಂತಿಯರ ಸಾವಿಗೆ ಮುಖ್ಯಮಂತ್ರಿ ಕಳವಳ ಬಾಣಂತಿಯರ ಸಾವಿನ ಬಗ್ಗೆ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇನ್ನಾದರೂ ಜಾಗರೂಕತೆಯಿಂದ ಇರುವಂತೆ ಸಚಿವರು ಹಾಗೂ ಅಧಿಕಾರಿಗಳಿಗೆ ಸಂಪುಟ ಸಭೆ ಸೂಚಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಬಳ್ಳಾರಿ ಬಾಣಂತಿಯರ ಸಾವಿನ ತನಿಖಾ ವರದಿಯೂ ಬಂತು; ಆದ್ರೂ ಸಚಿವ ಜಮೀರ್ ಬರಲಿಲ್ಲ!
ನನ್ನ ತಪ್ಪು ಇದ್ದರೆ ರಾಜೀನಾಮೆಗೆ ಸಿದ್ಧ
ರಾಜ್ಯದಲ್ಲಿ ಈ ವರ್ಷ 327 ಬಾಣಂತಿಯರ ಸಾವಾಗಿದೆ. ಈ ಎಲ್ಲ ಪ್ರಕರಣ ಪರಿಶೀಲಿಸಲು ಸೂಚಿಸಿದ್ದೇವೆ. ಬಳ್ಳಾರಿ ಬಾಣಂತಿಯರ ಸಾವಿನ ಪ್ರಕರಣದಲ್ಲಿ ನನ್ನ ಪ್ರತಿಷ್ಠೆ ಏನೂ ಇಲ್ಲ. ಪ್ರಕರಣದಲ್ಲಿ ಸರ್ಕಾರ ಅತ್ಯಂತ ಗಂಭೀರವಾಗಿದೆ. ಪ್ರತಿಪಕ್ಷಗಳ ಸಹಕಾರವೂ ಅಗತ್ಯ. ಪ್ರಕರಣದಲ್ಲಿ ನನ್ನ ತಪ್ಪಿದೆ ಎಂದು ಸಾಬೀತಾದರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
327 ಬಾಣಂತಿಯರ ಸಾವು, ಎಲ್ಲಾ ಪ್ರಕರಣಗಳ ಪರಿಶೀಲನೆ: ಸಚಿವ ದಿನೇಶ್
ರಾಜ್ಯದಲ್ಲಿ ಈ ವರ್ಷ ಇಲ್ಲಿಯವರೆಗೆ 327 ಬಾಣಂತಿಯರ ಸಾವುಗಳಾಗಿವೆ. ಈ ಎಲ್ಲ ಪ್ರಕ ರಣಗಳನ್ನು ಪರಿಶೀಲಿಸಲು ಸೂಚಿಸಿದೇವೆ ಎಂದು ಆರೋಗ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಾಣಂತಿಯರ ಸಾವು ಪ್ರಕರಣದಲ್ಲಿ ಈಗಾಗಲೇ ಕಂಪನಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ಇಂಥ ಪ್ರಕರ ಣಗಳಲ್ಲಿ ತಪ್ಪಿತಸ್ಥರಿಗೆ ಕ್ರಮ ಆಗಲೇಬೇಕು. ಇಂಥ ಪ್ರಕರಣಗಳಲ್ಲಿ ಸಹನೆ ಇರಬಾರದು. ಕಾನೂನು ಕ್ರಮ ಆಗಲೇಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.