
ಬೆಂಗಳೂರು(ಆ.24): ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿರುವುದಕ್ಕೆ (ಲ್ಯಾಂಡಿಂಗ್) ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಂಜೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ವಿಕ್ರಂ ಲ್ಯಾಂಡರ್‌ನ ಲ್ಯಾಂಡಿಂಗ್ ದೃಶ್ಯವನ್ನು ನೆರವಾಗಿ ವೀಕ್ಷಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಜತೆಗೆ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆಯನ್ನೂ ತಿಳಿಸಿದರು.
ಚಂದ್ರ ಬಹಳ ದೂರದಲ್ಲಿಲ್ಲ, ಚಂದ್ರನ ಮೇಲೆ ನಾವಿದ್ದೇವೆ, ಇಸ್ರೋ ಸಾಧನೆಗೆ ಮೋದಿ ಅಭಿನಂದನೆ!
ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು, ‘ದೇಶದ ವಿಜ್ಞಾನಿಗಳ ನಿರಂತರ ಪ್ರಯತ್ನ ಮತ್ತು ದಶಕಗಳ ಪರಿಶ್ರಮ ಫಲ ನೀಡಿದೆ. ಭಾರತೀಯರೆಲ್ಲರಿಗೂ ಇದು ಹೆಮ್ಮೆಯ ಕ್ಷಣ ಈ ಅಸಾಧಾರಣ ಸಾಧನೆ ಮಾಡಿದ ಪ್ರತಿ ವಿಜ್ಞಾನಿಗೂ ಅಭಿನಂದನೆಗಳು. ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವಕ್ಕೇ ಮುಂಚೂಣಿ ದೇಶಗಳ ಸಾಲಿನಲ್ಲಿ ಮತ್ತೊಮ್ಮೆ ಪ್ರಕಾಶಿಸಿದೆ. ಬಾಹ್ಯಾಕಾಶ ವಿಜ್ಞಾನಕ್ಕೆ ಆರಂಭದ ದಿನಗಳಲ್ಲಿ ಬೆಂಬಲ ಮತ್ತು ನೆರವು ನೀಡಿದ್ದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಸ್ಮರಿಸುವುದು ನಮ್ಮೆಲ್ಲ ಕರ್ತವ್ಯ’ ಎಂದಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಇಸ್ರೋ ಸಾಧನೆಯನ್ನು ಶ್ಲಾಘಿಸಿದ್ದು, ಇಡೀ ದೇಶ ನಿರೀಕ್ಷೆಯಲ್ಲಿದ್ದ ಚಂದ್ರಯಾನ-3 ಯಶಸ್ವಿಯಾಗಿದ್ದು, ಅದಕ್ಕೆ ಶ್ರಮಿಸಿದ ಇಸ್ರೋದ ಎಲ್ಲ ವಿಜ್ಞಾನಿಗಳು ಸಿಬ್ಬಂದಿಗೆ ಅಭಿನಂದನೆಗಳು ಎಂದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು, ಇಂದು ಐತಿಹಾಸಿಕ ದಿನ. ಭಾರತೀಯರ ಪಾಲಿಗೆ ಹೆಮ್ಮೆಯ ದಿನ. ವಿಜ್ಞಾನಿಗಳ ಪರಿಶ್ರಮ ಫಲಿಸಿದೆ ಎಂದಿದ್ದಾರೆ.
ವಿಕ್ರಂ ಲ್ಯಾಂಡರ್ ಚಂದ್ರ ಮೇಲೆ ಕಾಲಿಟ್ಟಿದ್ದು, ಚಂದ್ರ ಗ್ರಹದ ಮೇಲೆ ಭಾರತದ ಹೆಗ್ಗುರುತು ಮೂಡುವಂತೆ ಮಾಡಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ ಎಂದಿದ್ದಾರೆ.
Chandrayaan 3: ಮುಂದಿನ ಮೂನ್ ಮಿಷನ್ ಚಂದ್ರಯಾನ-4, ಮಾಹಿತಿ ನೀಡಿದ ಇಸ್ರೋ ವಿಜ್ಞಾನಿ!
ದೇಶದ ರಾಕೆಟ್ ಮ್ಯಾನ್ ವಿಕ್ರಂ ಸಾರಾಭಾಯಿ, ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ದೂರದೃಷ್ಟಿಯಿಂದ ಇಸ್ರೋ ಸಂಸ್ಥೆಗೆ ಬುನಾದಿ ಹಾಕಲಾಗಿತ್ತು. ಅಂದು ಅವರು ಬಿತ್ತಿದ ಬೀಜ ಈಗ ವಿಶ್ವದಲ್ಲೇ ಬ್ಯಾಹ್ಯಾಕಾಶ ಕ್ಷೆತ್ರದಲ್ಲಿ ಹೆಮ್ಮರವಾಗಿ ಬೆಳೆದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೆಮ್ಮೆಯ ದಿನ- ಸಲೀಂ:
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು, ಇಂದು ಐತಿಹಾಸಿಕ ದಿನ. ಭಾರತೀಯರ ಪಾಲಿಗೆ ಹೆಮ್ಮೆಯ ದಿನ. ವಿಜ್ಞಾನಿಗಳ ಪರಿಶ್ರಮ ಫಲಿಸಿದೆ. ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಸ್ರೋ ಸಂಸ್ಥೆ ಹಾಗೂ ವಿಜ್ಞಾನಿಗಳ ದಶಕಗಳ ಪರಿಶ್ರಮಕ್ಕೆ ಧನ್ಯವಾದಗಳು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ